ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಸೂತ್ರ, 386 ವಿದ್ಯಾರ್ಥಿಗಳು ಗೈರು

Published 26 ಮಾರ್ಚ್ 2024, 4:44 IST
Last Updated 26 ಮಾರ್ಚ್ 2024, 4:44 IST
ಅಕ್ಷರ ಗಾತ್ರ

ತುಮಕೂರು: ‘ಕನ್ನಡ ಭಾಷೆಯ ಪರೀಕ್ಷೆ ತುಂಬಾ ಚೆನ್ನಾಗಿತ್ತು. ಪ್ರಶ್ನೆ ಪತ್ರಿಕೆ ಸುಲಭ ಇತ್ತು. ಯಾವುದೂ ಕಷ್ಟ ಎನ್ನಿಸಲಿಲ್ಲ’....  ಹೀಗೆ ನಗುತ್ತಾ ಹೇಳಿದ್ದು, ನಗರದ ಭೈರವೇಶ್ವರ ಶಾಲೆಯ ವಿದ್ಯಾರ್ಥಿ ನೀಲೇಶ್‌.

ಎಸ್ಸೆಸ್ಸೆಲ್ಸಿ ಪರೀಕ್ಷೆ ಸೋಮವಾರದಿಂದ ಆರಂಭವಾಗಿದ್ದು, ಮೊದಲ ದಿನ ಕನ್ನಡ, ಉರ್ದು, ಸಂಸ್ಕೃತ ಸೇರಿದಂತೆ ಪ್ರಥಮ ಭಾಷಾ ವಿಷಯಗಳಿಗೆ ಪರೀಕ್ಷೆ ನಡೆಯಿತು. ವಿದ್ಯಾರ್ಥಿಗಳು ಖುಷಿಯಿಂದಲೇ ಪರೀಕ್ಷೆ ಕೇಂದ್ರಗಳತ್ತ ಆಗಮಿಸಿದರು. ಪರೀಕ್ಷೆ ಮುಗಿಸಿ ನಗುತ್ತಲೇ ಹೊರ ಬಂದರು.

ತುಮಕೂರಿನಲ್ಲಿ 81, ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ 48 ಸೇರಿದಂತೆ ಒಟ್ಟು 129 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು. ಮಧುಗಿರಿಯಲ್ಲಿ ಪ್ರಥಮ ಭಾಷೆ ಪರೀಕ್ಷೆಗೆ 12,672 ಮಂದಿ ನೋಂದಣಿ ಮಾಡಿಕೊಂಡಿದ್ದರು. 12,534 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 138 ಜನ ಗೈರಾಗಿದ್ದರು.

ಜಿಲ್ಲೆಯಲ್ಲಿ ನೋಂದಣಿಯಾಗಿದ್ದ 21,915 ವಿದ್ಯಾರ್ಥಿಗಳ ಪೈಕಿ 21,667 ಮಂದಿ ಪರೀಕ್ಷೆಗೆ ಹಾಜರಾದರೆ, 248 ಮಂದಿ ಪರೀಕ್ಷೆ ಬರೆಯಲಿಲ್ಲ. ಯಾವುದೇ ಅಹಿತಕರ ಘಟನೆಗಳು ನಡೆಯದೆ ಸುಸೂತ್ರವಾಗಿ ಪರೀಕ್ಷೆ ಆರಂಭವಾಗಿದೆ.

ಮೊದಲ ದಿನವಾದ್ದರಿಂದ ವಿದ್ಯಾರ್ಥಿಗಳು ಬೆಳಗ್ಗೆ 8 ಗಂಟೆಯಿಂದಲೇ ಪರೀಕ್ಷಾ ಕೇಂದ್ರಗಳತ್ತ ಬಂದರು. ಪೋಷಕರು, ಶಿಕ್ಷಕರು ಮಕ್ಕಳಲ್ಲಿ ಪರೀಕ್ಷೆಯ ಕುರಿತು ಇರುವ ಭಯ ದೂರವಾಗಿಸುವ ಪ್ರಯತ್ನ ಮಾಡಿದರು. ಮಕ್ಕಳು ಪರೀಕ್ಷಾ ಕೇಂದ್ರದಿಂದ ಹೊರ ಬರುವ ತನಕ ಪೋಷಕರು ಕೇಂದ್ರದ ಮುಂದೆ ಕಾದು ಕುಳಿತಿದ್ದ ದೃಶ್ಯಗಳು ಕಂಡು ಬಂದವು.

ಅಹಿತಕರ ಘಟನೆಗಳನ್ನು ತಡೆಯುವ ಉದ್ದೇಶದಿಂದ ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀಟರ್‌ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಜಿಲ್ಲಾಧಿಕಾರಿ ಶುಭ ಕಲ್ಯಾಣ್‌, ಜಿ.ಪಂ ಸಿಇಒ ಜಿ.ಪ್ರಭು ಅವರು ಎಂಪ್ರೆಸ್‌ ಶಾಲೆ, ಬಿ.ಎಚ್.ರಸ್ತೆಯಲ್ಲಿರುವ ಸರ್ಕಾರಿ ಪ್ರೌಢಶಾಲೆಯ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತುಮಕೂರಿನ ಎಂಪ್ರೆಸ್‌ ಶಾಲೆಯ ಪರೀಕ್ಷಾ ಕೇಂದ್ರದಿಂದ ನಗುತ್ತಾ ಹೊರ ಬಂದ ವಿದ್ಯಾರ್ಥಿಗಳು
ತುಮಕೂರಿನ ಎಂಪ್ರೆಸ್‌ ಶಾಲೆಯ ಪರೀಕ್ಷಾ ಕೇಂದ್ರದಿಂದ ನಗುತ್ತಾ ಹೊರ ಬಂದ ವಿದ್ಯಾರ್ಥಿಗಳು
ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭ ನುಗುತ್ತಾ ಹೊರ ಬಂದ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ, ಸಿಇಒ ಪರಿಶೀಲನೆ

ಸಮಯ ಬೇಕಾಗಿತ್ತು ಇನ್ನೂ ಸ್ವಲ್ಪ ಹೊತ್ತು ಸಮಯ ಬೇಕಾಗಿತ್ತು. ಕೆಲವು ಪ್ರಶ್ನೆಗಳಿಗೆ ಉತ್ತರಿಸುವುದು ಕಷ್ಟವಾಯಿತು. ಸಂದರ್ಭಾನುಸಾರ ಉತ್ತರ ಬರೆಯುವುದು ಸ್ವಲ್ಪ ಕಷ್ಟಕರವಾಗಿತ್ತು. ಉಳಿದಂತೆ ಪತ್ರಿಕೆ ಚೆನ್ನಾಗಿತ್ತು.

-ಪಲ್ಲವಿ ಸೇಂಟ್‌ಮೇರಿಸ್‌ ಶಾಲೆ

ಖುಷಿ ಖುಷಿಯಾಗಿ ಬರೆದೆ ಉರ್ದು ನನ್ನ ಇಷ್ಟದ ಪತ್ರಿಕೆ. ಖುಷಿ ಖುಷಿಯಾಗಿ ಪರೀಕ್ಷೆ ಬರೆದೆ. ಮೊದಲ ದಿನ ಪ್ರಥಮ ಭಾಷೆ ಪರೀಕ್ಷೆ ನಡೆದಿದ್ದು ಒಳ್ಳೆಯ ನಿರ್ಧಾರ. ಉಳಿದ ಎಲ್ಲ ಪರೀಕ್ಷೆ ಎದುರಿಸಲು ಇಲ್ಲಿಂದಲೇ ಒಂದು ಧೈರ್ಯ ಬರುತ್ತದೆ.

-ಫೈಮ ಉನ್ನಿಸಾ ಸರ್ಕಾರಿ ಪ್ರೌಢಶಾಲೆ ಪಿ.ಎಚ್.ಕಾಲೊನಿ

ತಯಾರಿ ನಡೆಸಿದ್ದೆ ಪರೀಕ್ಷೆಗೆ ಹಲವು ದಿನಗಳಿಂದ ತಯಾರಿ ನಡೆಸಿದ್ದೆ. ಇದರಿಂದ ಪರೀಕ್ಷೆ ಕಷ್ಟ ಅಂತವೆಸಿಸಲಿಲ್ಲ. ಓದಿದ ಎಲ್ಲ ವಿಷಯದ ಪ್ರಶ್ನೆಗಳನ್ನು ಕಂಡು ಖುಷಿ ಆಯ್ತು. ನಿರಂತರ ಅಭ್ಯಾಸ ಕೈ ಹಿಡಿಯುತ್ತದೆ.

-ನೀಲೇಶ್‌ ಭೈರವೇಶ್ವರ ಶಾಲೆ

ಕಷ್ಟ ಆಗಲಿಲ್ಲ ಕನ್ನಡ ಪರೀಕ್ಷೆ ಪರವಾಗಿಲ್ಲ ಚೆನ್ನಾಗಿ ಬರೆದೆ. ಅಭ್ಯಾಸಕ್ಕೆ ಹೆಚ್ಚಿನ ಸಮಯ ಕೊಟ್ಟಿದ್ದೆ. ಉತ್ತಮವಾಗಿ ತಯಾರಿ ಮಾಡಿಕೊಂಡಿದ್ದೆ. ಹೀಗಾಗಿ ಪರೀಕ್ಷೆ ಕಷ್ಟ ಎನಿಸಲಿಲ್ಲ.

-ಅಮೂಲ್ಯ ಭಾರತ್ ಮಾತಾ ಪ್ರೌಢಶಾಲೆ

ಅಭ್ಯಾಸ ಮಾಡಿದ್ದೆ ಪ್ರಶ್ನೆಪತ್ರಿಕೆ ಸುಲಭ ಇತ್ತು. ಮೊದಲಿನಿಂದ ಅಭ್ಯಾಸ ಮಾಡಿದ್ದರಿಂದ ಹೆಚ್ಚಿನ ಸಮಸ್ಯೆ ಆಗಲಿಲ್ಲ. ತುಂಬಾ ಖುಷಿಯಿಂದ ಪರೀಕ್ಷೆ ಬರೆದೆ. ಒಳ್ಳೆಯ ಅಂಕಗಳು ಬರುವ ನಿರೀಕ್ಷೆ ಇದೆ.

-ನಂದಕುಮಾರ್‌ ಆರ್ಯನ್‌ ಪ್ರೌಢಶಾಲೆ

ಭಯ ದೂರವಾಯಿತು ಪರೀಕ್ಷೆಗೂ ಮುಂಚೆ ಭಯ ಇತ್ತು. ಪರೀಕ್ಷಾ ಕೇಂದ್ರಕ್ಕೆ ತೆರಳಿದ ನಂತರ ಆ ಭಯ ದೂರವಾಯಿತು. ಚೆನ್ನಾಗಿ ಓದಿದ್ದರೆ ಸುಲಭವಾಗಿ ಪರೀಕ್ಷೆ ಬರೆಯಬಹುದು. ಎಲ್ಲ ಪರೀಕ್ಷೆಗೆ ಇದೇ ರೀತಿಯಾಗಿ ಸಿದ್ಧತೆ ಮಾಡಿಕೊಳ್ಳುತ್ತೇನೆ.

-ಉಸ್ನಾ ಎಸ್‌ವಿಎಸ್‌ ಶಾಲೆ

ಪರೀಕ್ಷೆ ಸುಲಭ ಇತ್ತು ಕನ್ನಡ ಪತ್ರಿಕೆ ತುಂಬಾ ಸುಲಭ ಇತ್ತು. ಸಮಯಕ್ಕೆ ಸರಿಯಾಗಿ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದೆ. ಪರೀಕ್ಷಾ ಕೇಂದ್ರದಲ್ಲಿ ಎಲ್ಲ ಸೌಲಭ್ಯ ಕಲ್ಪಿಸಿದ್ದರು. ಯಾವುದೇ ತೊಂದರೆಯಾಗಲಿಲ್ಲ. ಮೊದಲ ಬಾರಿಗೆ ಬೋರ್ಡ್‌ ಪರೀಕ್ಷೆ ಬರೆಯುವಾಗ ಸಹಜವಾಗಿ ಭಯ ಇತ್ತು. ಈಗ ಅದು ಕಡಿಮೆಯಾಗಿದೆ.

-ಬಿಲಾಲ್‌ಖಾನ್ ಆರ್ಯನ್‌ ಪ್ರೌಢಶಾಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT