ಶುಕ್ರವಾರ, ಮೇ 27, 2022
23 °C
ಜೆ.ಪಿ.ನಡ್ಡಾ, ಪ್ರಧಾನಿಗೆ ಪತ್ರ ಬರೆಯಲು ನಿರ್ಧಾರ

ತುಮಕೂರು: ಸುರೇಶ್‌ಗೌಡ– ಮಾಧುಸ್ವಾಮಿ ಬಹಿರಂಗ ‘ಸಮರ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹಾಗೂ ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಬಿ.ಸುರೇಶ್‌ಗೌಡ ನಡುವಿನ ಶೀತಲ ಸಮರ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಬಹಿರಂಗವಾಗಿ ಹೋರಾಟಕ್ಕೆ ಇಳಿದಿದ್ದಾರೆ.

ತುಮಕೂರು ಗ್ರಾಮಾಂತರ ಕ್ಷೇತ್ರದ ಕೆರೆಗಳಿಗೆ ಹೇಮಾವತಿ ನಾಲೆಯಿಂದ ನೀರು ಹರಿಸಿಲ್ಲ ಎಂದು ಕ್ಷೇತ್ರದ ಮಾಜಿ ಶಾಸಕ ಸುರೇಶ್‌ಗೌಡ ಮಾಡಿದ ಆರೋಪಕ್ಕೆ ಸಚಿವರು ತಿರುಗೇಟು ನೀಡಿದ್ದರು. ‘ಕ್ಷೇತ್ರದಲ್ಲಿ ಅವೈಜ್ಞಾನಿಕವಾಗಿ ಯೋಜನೆ ರೂಪಿಸಿದ್ದೇ ಸಮಸ್ಯೆಗೆ ಕಾರಣ’ ಎಂದು ಮಾಧುಸ್ವಾಮಿ ಆರೋಪಿಸಿದರು. ಈ ಹೇಳಿಕೆಗೆ ಪ್ರತಿಯಾಗಿ ಸುರೇಶ್‌ಗೌಡ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

‘₹60 ಕೋಟಿ ಮೊತ್ತದಲ್ಲಿ ಜಾರಿಯಾದ ಯೋಜನೆ ಅವೈಜ್ಞಾನಿಕವಾಗಿದ್ದರೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಸಾರ್ವಜನಿಕವಾಗಿ ಸಚಿವರು ಕ್ಷಮೆ ಕೇಳಬೇಕು’ ಎಂದು ತಮ್ಮದೇ ಪಕ್ಷದ ಸಚಿವರ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಯಾದ ಯೋಜನೆಗಳೇ ಅವೈಜ್ಞಾನಿಕ ಎಂದು ಹೇಳುವ ಮೂಲಕ ಪಕ್ಷ ಹಾಗೂ ಸರ್ಕಾರಕ್ಕೆ ಮುಜುಗರ ತಂದಿದ್ದಾರೆ. ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಸೋಲಿಸಲು, ಪಕ್ಷಕ್ಕೆ ಇರಸುಮುರಸು ಉಂಟುಮಾಡುವ ಉದ್ದೇಶದಿಂದ ಹೇಳಿಕೆ ನೀಡಿದಂತೆ ಕಾಣುತ್ತದೆ. ಈ ಸಂಬಂಧ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ವಿಚಾರ ಮುಟ್ಟಿಸಲಾಗುವುದು. ಏತ ನೀರಾವರಿ ಯೋಜನೆ ಅವೈಜ್ಞಾನಿಕ ಎಂದು ಹೇಳಿಕೆ ನೀಡಿ ಸಾರ್ವಜನಿಕರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ಜತೆಗೆ ಪಕ್ಷಕ್ಕೆ ಮುಜುಗರ ತಂದಿರುವ ಸಚಿವ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಲಾಗುವುದು ಎಂದು ಹೇಳಿದರು.

‘ಹಿಂದೆ ಜಲಸಂಪನ್ಮೂಲ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಅವರ ಅವಧಿಯಲ್ಲಿ ಯೋಜನೆ ರೂಪಿಸಿ ಜಾರಿಗೆ ತರಲಾಯಿತು. ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬೊಮ್ಮಾಯಿ ಅವರು ಶಿವಕುಮಾರ ಸ್ವಾಮೀಜಿ ನೇತೃತ್ವದಲ್ಲಿ ಚಾಲನೆ ನೀಡಿದ್ದರು. ಈಗ ಮುಖ್ಯಮಂತ್ರಿಯಾಗಿರುವ ಬೊಮ್ಮಾಯಿ ಅವರನ್ನು ಗುರಿ ಮಾಡಿಕೊಂಡು ಸಚಿವರು ಟೀಕಿಸುತ್ತಿದ್ದಾರೆ. ಮುಖ್ಯಮಂತ್ರಿ ವಿರುದ್ಧ ಸಂಚು ರೂಪಿಸಿದಂತೆ ಕಾಣುತ್ತದೆ’ ಎಂದು ಆರೋಪಿಸಿದ್ದಾರೆ.

ಕೆರೆಗಳಿಗೆ ನೀರು ತುಂಬಿಸಿದ ನಂತರ ನೀರು ನಿಲ್ಲುತ್ತಿಲ್ಲ ಎಂದು ಹೇಳಿದರೆ ಒಂದು ಅರ್ಥವಿದೆ. ಸತತವಾಗಿ ಮೂರು ತಿಂಗಳ ಕಾಲ ನೀರು ಹರಿಸಬೇಕು. ಪ್ರಸ್ತುತ ಅವಧಿಯಲ್ಲಿ ಒಂದು ತಿಂಗಳ ಕಾಲವೂ ನೀರು ಬಿಟ್ಟಿಲ್ಲ. ನೀರೇ ಹರಿಸದೆ ಕೆರೆಗಳಲ್ಲಿ ನೀರು ನಿಲ್ಲುತ್ತಿಲ್ಲ ಎಂದು ಹೇಗೆ ಹೇಳುತ್ತಾರೆ. ಸಚಿವರ ಹೇಳಿಕೆ ನೋಡಿದರೆ ‘ಕುಣಿಯಲಾರದವಳು ನೆಲ ಡೊಂಕು’ ಎಂಬಂತಾಗಿದೆ ಎಂದು ಟೀಕಿಸಿದ್ದಾರೆ.

‘ನಾನು ಶಾಸಕನಾಗಿದ್ದಾಗ ಗೂಳೂರು, ಹೊನ್ನುಡಿಕೆ, ನಾಗವಲ್ಲಿ, ಹೊಳಕಲ್ಲು ಕೆರೆಗಳಿಗೆ ನೀರು ತುಂಬಿಸಿದ್ದೆ. ಈಗ ನೀರು ಹರಿಸದೆ ನಾಗವಲ್ಲಿ ಕೆರೆ ಒಣಗಿ ನಿಂತಿದೆ. ಈ ಯೋಜನೆ ಬಗ್ಗೆ ವೈಜ್ಞಾನಿಕವಾಗಿ ಪರಿಶೀಲಿಸಲಿ’ ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು