ಶುಕ್ರವಾರ, ಮೇ 27, 2022
28 °C

ಇತಿಹಾಸ ಸೇರಿದ ಈಚಲು ಚಾಪೆ

ಆರ್.ಸಿ.ಮಹೇಶ್ Updated:

ಅಕ್ಷರ ಗಾತ್ರ : | |

Prajavani

ಹುಳಿಯಾರು: ಒಂದು ಕಾಲದಲ್ಲಿ ಜನರ ಹಾಸಿಗೆಯಾಗಿ ಕೆಲವರಿಗೆ ಉಪಕಸುಬಾಗಿ ಜೀವನ ನಿರ್ವಹಣೆಗೆ ಈಚಲು ಚಾಪೆ ವರದಾನವಾಗಿತ್ತು. ಪ್ರಸ್ತುತ ಪ್ಲಾಸ್ಟಿಕ್‌ ಚಾಪೆಗಳ ಅವಲಂಬನೆ ಹೆಚ್ಚಾದಂತೆ ಈಚಲು ಚಾಪೆ ಇತಿಹಾಸ ಸೇರಿದರೆ, ಅವುಗಳನ್ನು ಹೆಣೆಯುವ ವೃತ್ತಿ ಕಣ್ಮರೆಯಾಗುತ್ತಿದೆ.

ಈಚಲು ಮರದಿಂದ ಬರುವ ರಸವನ್ನು ಮದ್ಯಪಾನಕ್ಕೆ ಉಪಯೋಗಿಸಲಾಗುತ್ತಿತ್ತು. ಅಷ್ಟೆ ಉಪಯೋಗ ಈಚಲು ಮರದ ಗರಿ ಹಾಗೂ ಕಾಂಡಗಳಿಂದ ಜನರು ಪಡೆಯುತ್ತಿದ್ದರು. ಗರಿಗಳಿಂದ ಚಾಪೆ, ಅವುಗಳ ದಿಂಡಿನಿಂದ ಬುಟ್ಟಿಗಳ ತಯಾರಿಕೆ ಮತ್ತು ಮರಗಳನ್ನು ಮನೆ ಅಥವಾ ಗುಡಿಸಲು ನಿರ್ಮಿಸಲು ಉಪಯೋಗಿಸುತ್ತಿದ್ದರು.

ಹೆಚ್ಚಿನ ಸಂಖ್ಯೆಯ ಹಳ್ಳಿಗಳು ಬುಕ್ಕಾಪಟ್ಟಣ ಹಾಗೂ ಚಿಕ್ಕನಾಯಕನಹಳ್ಳಿ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿವೆ. ಚಿಕ್ಕನಾಯಕನಹಳ್ಳಿ ಸಮೀಪದ ಮದಲಿಂಗನ ಕಣಿವೆಯಿಂದ ಹಿಡಿದು ಜಾಣೇಹಾರ್‌, ಮದ್ದನಮಡು, ತಿಮ್ಮನಹಳ್ಳಿ, ಬೆಳ್ಳಾರ, ಬೋರನಕಣಿವೆ ಜಲಾಶಯ ಒಳಗೊಂಡು ದಸೂಡಿವರೆಗೆ ಗುಡ್ಡಗಳ ಸಾಲುಗಳೇ ಇವೆ. ಈ ಅರಣ್ಯ ಪ್ರದೇಶಗಳಲ್ಲಿ ಹೆಚ್ಚು ನೀರು ನಿಲ್ಲವ ಪ್ರದೇಶದಲ್ಲಿ ಈಚಲು ಮರಗಳು ಹುಲುಸಾಗಿ ಬೆಳೆಯುತ್ತಿದ್ದವು. ನೀರನ್ನು ಹಿಡಿದಿಟ್ಟುಕೊಂಡು ಹಲವು ವರ್ಷ ನೀರು ಇಲ್ಲದೆ ಬದುಕಬಲ್ಲ ಸಸ್ಯ ಸಂತತಿಗೆ ಸೇರಿದ್ದರಿಂದ ಅವುಗಳ ಅವಸಾನ ಕಂಡು ಬರುತ್ತಿರಲಿಲ್ಲ.

ಪ್ರತಿವರ್ಷ ಹುಲುಸಾದ ಗರಿಗಳು ಮೂಡಿಬರುವ ಕಾರಣ ಅವುಗಳ ಗರಿಗಳಿಂದ ಚಾಪೆಗಳನ್ನು ಹೆಣೆಯುತ್ತಿದ್ದರು. ಮಳೆಗಾಲ ಕೊನೆಗೊಳ್ಳುವುದಕ್ಕೆ ಮುಂಚೆಯೇ ಕಾಡಿಗೆ ಹೋಗಿ ಗರಿಗಳನ್ನು ಶೇಖರಣೆ ಮಾಡಿಕೊಳ್ಳುತ್ತಿದ್ದರು. ಸುಗ್ಗಿ ಮುಗಿದ ನಂತರ ಮನೆಯ ಕೆಲ ಹಿರಿಯ ಮಹಿಳೆಯರು ಸಂಜೆಯಾದೊಡನೆ ಚಾಪೆಗಳನ್ನು ಹೆಣೆಯುತ್ತಿದ್ದರು. ತಮ್ಮ ಮನೆಯ ಬಳಕೆಗೆ ಹೆಚ್ಚಾದ ಚಾಪೆಗಳನ್ನು ಬೇರೆಯರಿಗೆ ಮಾರಾಟ ಮಾಡುವುದರಿಂದ ಎಷ್ಟೋ ಜನರ ಕುಟುಂಬ ನಿರ್ವಹಣೆಯೂ ಆಗುತ್ತಿತ್ತು. ಗರಿಗಳಿಂದ ಅರ್ಧ ಅಡಿಯಷ್ಟು ಅಗಲ ಹೆಣೆಯುತ್ತಾ ಹತ್ತಾರು ಮೀಟರ್‌ನಷ್ಟು ಸುರುಳಿ ಸುತ್ತಿಡುತ್ತಿದ್ದರು. ಅದರಿಂದ ಏಳೆಂಟು ಅಡಿ ಉದ್ದಕ್ಕೆ ಹಾಳೆಗಳೊಪಾದಿಯಲ್ಲಿ ಕೂಡಿಸಿ ಊಟಕ್ಕೆ ಕೂರುವ ಪಂಕ್ತಿಚಾಪೆ, 6 ರಿಂದ 15 ಹಾಳೆಯ ಚಾಪೆಗಳು ಸಿದ್ಧಗೊಳ್ಳುತ್ತಿದ್ದವು.

ಈಚಲು ಮರಗಳಲ್ಲಿ 2 ಪ್ರಭೇದಗಳಿದ್ದು ದೊಡ್ಡ ಮತ್ತು ಹುಲ್ಲು ಈಚಲು ಎಂದು ಗುರುತಿಸಲಾಗುತ್ತದೆ. ದೊಡ್ಡ ಈಚಲು ಮರಗಳಾಗಿ ಬೆಳೆದರೆ ಹುಲ್ಲು ಈಚಲು ಪೊದೆಗಳಾಗಿ ಬೆಳೆಯುತ್ತವೆ. ದೊಡ್ಡ ಈಚಲು ಗರಿಗಳಿಂದ ಚಾಪೆ ಹೆಣೆಯುವುದು ಕಡಿಮೆ. ಆದರೆ ಹುಲ್ಲು ಈಚಲು ಗರಿಗಳು ಉದ್ದವಾಗಿರುವುದರಿಂದ ಚಾಪೆ ಹಾಗೂ ಪೊರಕೆಗಳನ್ನು ತಯಾರು ಮಾಡುತ್ತಾರೆ. ದೊಡ್ಡ ಈಚಲು ಗರಿಗಳ ತುದಿಯಲ್ಲಿ ಚೂಪನೆಯ ಮುಳ್ಳು ಇದ್ದರೆ ಹುಲ್ಲು ಈಚಲು ಗರಿಗಳಿಗೆ ಮುಳ್ಳು ಕಡಿಮೆ ಇರುತ್ತವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು