ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾದಯಾತ್ರೆಗೆ ಹರಿದು ಬಂದ ಜನಸಾಗರ

ಶಿರಾ ತಾಲ್ಲೂಕಿನಲ್ಲಿ ಶುಕ್ರವಾರವೂ ಮುಂದುವರೆದ ಪಾದಯಾತ್ರೆ l ಸಮುದಾಯದ ಪ್ರಮುಖರ ಭಾಗಿ
Last Updated 30 ಜನವರಿ 2021, 1:33 IST
ಅಕ್ಷರ ಗಾತ್ರ

ಶಿರಾ: ಕುರುಬ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಮೀಸಲಾತಿ ನೀಡುವಂತೆ ಒತ್ತಾಯಿಸಿ ನಡೆಸುತ್ತಿರುವ ಪಾದಯಾತ್ರೆ ಶುಕ್ರವಾರ ಸಹ ತಾಲ್ಲೂಕಿನಲ್ಲಿ ‌ಮುಂದುವರೆಯಿತು.

ಕಾಗಿನೆಲೆ ಕನಕಗುರು ಪೀಠದ ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆ 15ನೇ ದಿನಕ್ಕೆ ಕಾಲಿಟ್ಟಿದ್ದು, ಶುಕ್ರವಾರ ಸಹ ಪಾದಯಾತ್ರೆಗೆ ಸಮುದಾಯದಿಂದ ವ್ಯಾಪಕ ಬೆಂಬಲ ವ್ಯಕ್ತವಾಯಿತು.

ಶಿರಾದಲ್ಲಿ ಗುರುವಾರ ರಾತ್ರಿ ವಾಸ್ಥವ್ಯ ಮಾಡಿದ್ದು, ಶುಕ್ರವಾರ ಬೆಳಿಗ್ಗೆ ಮತ್ತೆ ಪಾದಯಾತ್ರೆ ಪ್ರಾರಂಭಿಸಿದರು. ಕಳ್ಳ‌ಂಬೆಳ್ಳದಲ್ಲಿ ವಿಶ್ರಾಂತಿ ಪಡೆದ ನಂತರ ಜನಜಾಗೃತಿ ಸಭೆ ನಡೆಸಲಾಯಿತು.

ಜನಜಾಗೃತಿ ಸಭೆಯಲ್ಲಿ ಮಾತನಾಡಿದ ಕಾಗಿನೆಲೆ ಕನಕಗುರು ಪೀಠದ ನಿರಂಜನಾನಂದ ಪುರಿ ಸ್ವಾಮೀಜಿ, ‘ಕುರುಬರಿಗೆ ಎಸ್.ಟಿ. ಮೀಸಲಾತಿ ನೀಡಿ ಎಂದು 1996ರಿಂದ ಅಗತ್ಯ ದಾಖಲೆಗಳೊಂದಿಗೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು ಸ್ಪಂದಿಸುತ್ತಿಲ್ಲ. ಈಗ ಪಾದಯಾತ್ರೆ ಮೂಲಕ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡುತ್ತಿದ್ದು, ಸಮುದಾಯದ ಬೆಂಬಲ ಸಹ ದೊರೆಯುತ್ತಿರುವುದು ಸಂತಸದ ವಿಷಯವಾಗಿದೆ’ ಎಂದರು.

ಹೊಸದುರ್ಗದ ಈಶ್ವರಾನಂದಪುರಿ ಸ್ವಾಮೀಜಿ ಮಾತನಾಡಿ, ‘ಎರಡು ಬಾರಿ ಕುರುಬ ಸಮಾಜದವರು ಪರಿಶಿಷ್ಟ ಪಂಗಡಕ್ಕೆ ಸೇರುವುದು ಕೈತಪ್ಪಿದೆ. ನಾವು ಬೇರೆಯವರ ಹಕ್ಕು ಕಿತ್ತುಕೊಳ್ಳುತ್ತಿಲ್ಲ. ಬೀದರ್, ಯಾದಗಿರಿ ಮತ್ತು ಕಲಬುರ್ಗಿ ಜಿಲ್ಲೆಯಲ್ಲಿ ಗೊಂಡಾ ಸಮುದಾಯ ಎಸ್.ಟಿ ಮೀಸಲಾತಿ ಪಡೆಯುತ್ತಿದೆ. ಗೊಂಡಾ ಮತ್ತು ಕುರುಬ ಸಮುದಾಯ ಎರಡು ಒಂದೇ. ಇಡೀ ರಾಜ್ಯದ ಎಲ್ಲ ಭಾಗದಲ್ಲಿ ಮೀಸಲಾತಿ ನೀಡಬೇಕು’ ಎಂದರು.

ಈಗಾಗಲೇ ಹಿಂದುಳಿದ ವರ್ಗ 2 ಎ ಗೆ ಸೇರಿಸುವಂತೆ ಬಲಿಜ, ಕುಂಚಿಟಿಗ, ಪಂಚಮಸಾಲಿ ಸಮುದಾಯದವರು ಪ್ರಯತ್ನ ನಡೆಸುತ್ತಿದ್ದು, ಆ ಸಮುದಾಯಗಳು 2–ಎಗೆ ಬಂದರೆ ಇನ್ನು ಸಂಕಷ್ಟ ಪಡಬೇಕು. ಅದ್ದರಿ‌ಂದ ಪರಿಶಿಷ್ಟ ಪಂಗಡಕ್ಕೆ ಸೇರಿಸಿದರೆ ಮಾತ್ರ ಕುರುಬ ಸಮುದಾಯಕ್ಕೆ ಅನುಕೂಲವಾಗುವುದು ಎಂದರು.

ವಿಧಾನ ಪರಿಷತ್‌ ಮಾಜಿ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್, ಕಾಳಿದಾಸ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಬಿ.ಕೆ.ಮಂಜುನಾಥ್, ಜಿಲ್ಲಾ ಪಂಚಾಯಿತಿ ಸದಸ್ಯ ಆರ್.ಸಿ.ಆಂಜನಪ್ಪ, ಕೆಂಪರಾಜು, ಮುಖಂಡರಾದ ಬಿ.ಜೆ.ಕರಿಯಪ್ಪ, ಎಸ್.ಎಲ್.ರಂಗನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT