ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು– ಬೆಂಗಳೂರು ರೈಲು ಪ್ರಯಾಣ: ಜನ ಹೈರಾಣು

Published 6 ಜುಲೈ 2024, 5:50 IST
Last Updated 6 ಜುಲೈ 2024, 5:50 IST
ಅಕ್ಷರ ಗಾತ್ರ

ತುಮಕೂರು: ತುಮಕೂರು– ಬೆಂಗಳೂರು ನಡುವೆ ರೈಲಿನಲ್ಲಿ ಪ್ರಯಾಣಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಪ್ರಯಾಣ ಪ್ರಯಾಸಕರವಾಗಿದೆ. ರೈಲುಗಳಲ್ಲಿ ಸಾಮಾನ್ಯ ಬೋಗಿಗಳು ಕಡಿಮೆ ಇರುವುದರಿಂದ ಪ್ರಯಾಣಿಕರು ಕಾಲಿಡಲು ಜಾಗವಿಲ್ಲದೆ ಪರದಾಡುತ್ತಿದ್ದಾರೆ.

ಬೆಳಗ್ಗೆ 6ರಿಂದ 10 ಗಂಟೆ ವರೆಗೆ ಹಾಗೂ ಸಂಜೆ 5ರಿಂದ ರಾತ್ರಿ 11 ಗಂಟೆ ವರೆಗೆ ಸಂಚರಿಸುವ ಎಲ್ಲ ರೈಲುಗಳು ಪ್ರಯಾಣಿಕರಿಂದ ಭರ್ತಿಯಾಗಿರುತ್ತವೆ. ಈ ಸಮಯದಲ್ಲಿ ಸಾಮಾನ್ಯ ಬೋಗಿಗಳಲ್ಲಿ ನಿಲ್ಲಲು ಜಾಗವಿಲ್ಲದೆ ಮೀಸಲು ಬೋಗಿಗಳಲ್ಲಿ ಸಂಚಾರ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಮೀಸಲು ಬೋಗಿಗಳು ಸಹ ಪ್ರಯಾಣಿಕರಿಂದ ತುಂಬಿರುತ್ತವೆ.

ವಿದ್ಯಾಭ್ಯಾಸ, ಉದ್ಯೋಗ ಸೇರಿದಂತೆ ಇತರೆ ಕೆಲಸಕ್ಕಾಗಿ ಪ್ರತಿ ದಿನ ಬೆಂಗಳೂರು– ತುಮಕೂರು ಮಧ್ಯೆ ಸಾವಿರಾರು ಜನ ಪ್ರಯಾಣ ಮಾಡುತ್ತಾರೆ. ಶಕ್ತಿ ಯೋಜನೆ ಜಾರಿಯಾದ ಸಮಯದಲ್ಲಿ ರೈಲುಗಳ ಮೇಲಿನ ಒತ್ತಡ ಕೊಂಚ ಕಡಿಮೆಯಾಗಿತ್ತು. ಪ್ರಯಾಣಿಕರ ಸಂಖ್ಯೆಯೂ ಇಳಿಕೆಯಾಗಿತ್ತು. ಈಗ ರೈಲು ಪ್ರಯಾಣ ಮೊದಲಿನಂತಾಗಿದೆ. ಪ್ರಯಾಣಿಕರ ಸಂಖ್ಯೆಯೂ ದಿನೇ ದಿನೇ ಹೆಚ್ಚಾಗುತ್ತಿದೆ. ಆದರೆ, ರೈಲುಗಳಲ್ಲಿ ಸಾಮಾನ್ಯ ಬೋಗಿಗಳ ಸಂಖ್ಯೆ ಕಡಿಮೆ ಇರುವುದರಿಂದ ಪ್ರಯಾಣ ಕಷ್ಟಕರವಾಗಿದೆ.

ವೃದ್ಧರು, ಮಕ್ಕಳು, ಮಹಿಳೆಯರು ಒಳಗೊಂಡಂತೆ ಎಲ್ಲರು ರೈಲುಗಳಲ್ಲಿ ಪ್ರಯಾಣಿಸುತ್ತಾರೆ. ಬೆಂಗಳೂರಿನ ಮೆಜೆಸ್ಟಿಕ್‍ನಿಂದ ಸಂಜೆ 6.20ಕ್ಕೆ ಹೊರಡುವ ವಿಶೇಷ ಪ್ಯಾಸೆಂಜರ್‌ ರೈಲು, ಸಂಜೆ 6.40ಕ್ಕೆ ಗೋಲ್‍ಗುಂಬಜ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ ನಿಲ್ಲಲು ಜಾಗವಿಲ್ಲದೆ ಜನ ಹೈರಾಣಾಗುತ್ತಿದ್ದಾರೆ. ತುಮಕೂರಿನ ಹೆಚ್ಚಿನ ಜನರು ಇವೆರಡು ರೈಲುಗಳಲ್ಲೇ ಪ್ರಯಾಣಿಸುತ್ತಾರೆ. ಅವರಿಗೆ ಅಗತ್ಯ ಸೌಲಭ್ಯಗಳನ್ನೇ ಕಲ್ಪಿಸಿಲ್ಲ ಎಂಬುದು ಪ್ರಯಾಣಿಕರ ಸುರೇಶ್‌ ಆರೋಪ.

‘ಹಲವು ವರ್ಷಗಳಿಂದ ಇಂತದ್ದೇ ಸಮಸ್ಯೆ ಇದೆ. ಸಾಮಾನ್ಯ ಬೋಗಿಗಳ ಸಂಖ್ಯೆ ಹಾಗೂ ರೈಲುಗಳ ಸಂಖ್ಯೆ ಹೆಚ್ಚಿಸುವಂತೆ ಹಲವು ಬಾರಿ ರೈಲ್ವೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT