ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಳುಬಿದ್ದ ರೇಷ್ಮೆ ಶಿಬಿರದ ಕಟ್ಟಡ

ಅಧಿಕಾರಶಾಹಿ ನಿರ್ಲಕ್ಷ್ಯಕ್ಕೆ ರೈತರ ಅಸಮಾಧಾನ
Last Updated 13 ಏಪ್ರಿಲ್ 2021, 5:47 IST
ಅಕ್ಷರ ಗಾತ್ರ

ಕೊಡಿಗೇನಹಳ್ಳಿ (ಮಧುಗಿರಿ ತಾ): ಮಹಿಳೆಯರು ಮತ್ತು ರೈತರ ಅನುಕೂಲಕ್ಕಾಗಿ 20 ವರ್ಷಗಳ ಹಿಂದೆ ನಿರ್ಮಿಸಿದ್ದ ರೇಷ್ಮೆ ಮಹಿಳಾ ತಂಗುದಾಣ ಶಿಬಿರದ ಕಟ್ಟಡವನ್ನು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಬಳಕೆ ಮಾಡದಿರುವ ಪರಿಣಾಮ ಸಂಪೂರ್ಣವಾಗಿ ಶಿಥಿಲಗೊಂಡಿದೆ.

ಮಧುಗಿರಿ ತಾಲ್ಲೂಕಿನ ಪುರವರ ಹೋಬಳಿಯ ಕೊಂಡಪ್ಪನ ಗೇಟ್ ಸಮೀಪದ ಕೊಂಡವಾಡಿ ರಸ್ತೆ ಬಳಿ ಶಿಬಿರದ ಕಟ್ಟಡ ನಿರ್ಮಿಸಲಾಗಿದೆ. 2000ರಲ್ಲಿ ಅಂದಿನ ಶಾಸಕರಾಗಿದ್ದ ಡಾ.ಜಿ. ಪರಮೇಶ್ವರಯ್ಯ ಅವರು ಸುಮಾರು ₹ 6.80 ಲಕ್ಷ ವೆಚ್ಚದಲ್ಲಿ ಈ ಕಟ್ಟಡ ನಿರ್ಮಿಸಿದ್ದರು. ಸ್ಥಳೀಯ ರೇಷ್ಮೆ ಕೃಷಿ ಅವಲಂಬಿತ ಮಹಿಳೆಯರಿಗೆ ಹಿಪ್ಪುನೇರಳೆ ತೋಟದ ನಿರ್ವಹಣೆ ಮತ್ತು ಹುಳು ಸಾಕಾಣಿಕೆ ಬಗ್ಗೆ ತಾಂತ್ರಿಕತೆ ವಿಷಯ ಕುರಿತು ತರಬೇತಿ ನೀಡುವ ಉದ್ದೇಶದಿಂದ ಈ ಕಟ್ಟಡ ನಿರ್ಮಿಸಲಾಗಿತ್ತು.

ಮಹಿಳೆಯರಿಗೆ ಕಟ್ಟಡ ಇಂದು ಅನೈತಿಕ ಚಟುವಟಿಕೆಗಳಿಗೆ ಆಶ್ರಯ ತಾಣಗಳಾಗಿದೆ. ಇದೇ ರೀತಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿರುವ ಸಮೀಪದಲ್ಲೇ ಇರುವ ಮತ್ತೆರಡು ಕಟ್ಟಡಗಳು ಕೂಡ ಬಳಕೆಯಾಗದೆ ಅನಾಥವಾಗಿವೆ.

ಸ್ವಂತ ಕಟ್ಟಡ ಇಲ್ಲದೇ ಹಲವು ಇಲಾಖೆಗಳು ಈಗಲೂ ಬಾಡಿಗೆ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಸರ್ಕಾರ ಇಂತಹ ಕಟ್ಟಡಗಳನ್ನು ಸರಿಪಡಿಸಿ ಸದ್ಬಳಕೆ ಮಾಡಿಕೊಂಡರೆ ಸರ್ಕಾರಕ್ಕೂ ಹಣ ಉಳಿಯುತ್ತದೆ. ಇಲಾಖೆಗಳ ಅಭಿವೃದ್ಧಿಗೂ ಸಹಕಾರಿಯಾಗುತ್ತದೆ ಎಂಬುದು ಸಾರ್ವಜನಿಕರ ಅಭಿಪ್ರಾಯ.

ಮಧುಗಿರಿ ತಾಲ್ಲೂಕು ಬಯಲುಸೀಮೆ ಪ್ರದೇಶವಾಗಿದೆ. ಕುಡಿಯುವ ನೀರಿಗೆ ತಾತ್ಸಾರವಿದೆ. ಮಳೆ ನೀರಿನಲ್ಲೇ ಕೊಡಿಗೇನಹಳ್ಳಿ ಮತ್ತು ಪುರವರ ಹೋಬಳಿಯ ರೈತರು ಮೊದಲಿನಿಂದಲೂ ರೇಷ್ಮೆ ಬೆಳೆಯನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದಾರೆ. ಆದ್ದರಿಂದ ಸರ್ಕಾರ ಇಲ್ಲಿನ ರೇಷ್ಮೆ ಬೆಳೆಗಾರರನ್ನು ಪ್ರೋತ್ಸಾಹಿಸಲು ನೂತನ ಯೋಜನೆಗಳನ್ನು ಜಾರಿ ಮಾಡಬೇಕು ಎಂಬುದು ಈ ಭಾಗದ ರೈತರ ಒತ್ತಾಯ.

‘ಕಟ್ಟಡವು ಈ ಭಾಗದ ರೈತರಿಗೆ ಅನುಕೂಲವಾಗುತ್ತದೆ ಎಂದು ನಂಬಿದ್ದೆವು. ಆದರೆ, ಶಿಥಿಲಗೊಂಡು ಹಾಳಾಗಿರುವುದು ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕನ್ನಡಿ ಹಿಡಿದಿದೆ’ ಎಂದು ವೀರಾಪುರದ ರೈತರಂಗಪ್ಪ ದೂರುತ್ತಾರೆ.

ನವೀಕರಣಕ್ಕೆ ಅನುದಾನವಿಲ್ಲ:‘ಈ ಕಟ್ಟಡದಲ್ಲಿ 2012ರವರೆಗೆ ಮಹಿಳೆಯರಿಗೆ ತರಬೇತಿ ನೀಡಲಾಗುತ್ತಿತ್ತು. ತದನಂತರ ಗೋಡೆಗಳು ಬಿರುಕು ಬಿಟ್ಟು ಬೀಳುವ ಹಂತಕ್ಕೆ ತಲುಪಿತು. ಬಾಗಿಲು ಮತ್ತು ಕಿಟಕಿಗಳು ಶಿಥಿಲಗೊಂಡಿದ್ದ ಪರಿಣಾಮ ತಂಗುದಾಣದಲ್ಲಿ ಇಲಾಖೆಯ ಯಾವುದೇ ಕಾರ್ಯಕ್ರಮಗಳನ್ನು ಮಾಡಲಾಗುತ್ತಿಲ್ಲ. ಸದ್ಯ ಮೇಲ್ಚಾವಣಿಯ ಗೋಡೆಗಳು ಸಂಪೂರ್ಣ ಕುಸಿದು ಬಿದ್ದಿದ್ದು, ಕಟ್ಟಡದ ರಿಪೇರಿಗೆ ಇಲಾಖೆಯಲ್ಲಿ ಯಾವುದೇ ಅನುದಾನವಿಲ್ಲ’ ಎಂದು ಮಧುಗಿರಿ ವಿಭಾಗದ ರೇಷ್ಮೆ ಸಹಾಯಕ ನಿರ್ದೇಶಕ ಸಿ.ಇ. ನಾಗರಾಜು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT