ತಿಪಟೂರು: ಗ್ರಾಮೀಣ ಭಾಗದಲ್ಲಿ ದೊರೆಯುವ ಗುಣಮಟ್ಟದ ಪೌಷ್ಟಿಕ ಆಹಾರ ಸೇವನೆ ಮಾಡುವ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಪರಿಸರ ಪ್ರೇಮಿ ಗುಂಗರಮಳೆ ಮುರುಳಿಧರ್ ತಿಳಿಸಿದರು.
ತಾಲ್ಲೂಕಿನ ಕಿಬ್ಬನಹಳ್ಳಿಯ ಗುಡ್ಡದಪಾಳ್ಯದಲ್ಲಿ ಬುಧವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ,ಕೊನೇಹಳ್ಳಿ ಕೃಷಿ ವಿಜ್ಞಾನ ಕೇಂದ್ರ, ಆರೋಗ್ಯ ಇಲಾಖೆ ಮತ್ತು ಸ್ತ್ರೀಶಕ್ತಿ ಗುಂಪುಗಳ ಸಹಯೋಗದಲ್ಲಿ ನಡೆದ ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹ ಉದ್ಘಾಟಿಸಿ ಮಾತನಾಡಿದರು.
ಸ್ಥಳಿಯವಾಗಿ ದೊರೆಯುವ ಏಕದಳ, ದ್ವಿದಳ ಧಾನ್ಯ, ಮೊಳಕೆ ಕಾಳು, ಸೊಪ್ಪು, ತರಕಾರಿ, ಬೆಣ್ಣೆ, ತುಪ್ಪ, ಹಣ್ಣುಗಳ ನಿಯಮಿತ ಸೇವನೆಯಿಂದ ಉತ್ತಮ ಪೌಷ್ಟಿಕ ಮಟ್ಟವನ್ನು ಕಾಪಾಡಿಕೊಳ್ಳಬಹುದು. ಅಂಗನವಾಡಿ ಕೇಂದ್ರದಿಂದ ನೀಡುವ ಪೂರಕ ಪೌಷ್ಟಿಕ ಆಹಾರದ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳು ಪಡೆದುಕೊಳ್ಳಿ ಎಂದರು.
ಮೇಲ್ವಿಚಾರಕಿ ಗೌರವ್ವ ಮಾತನಾಡಿ, ತಾಲ್ಲೂಕಿನ ಆಯ್ದ ಗ್ರಾಮಗಳಲ್ಲಿ ಪೌಷ್ಟಿಕ ಆಹಾರ ಸಪ್ತಾಹ ಹಮ್ಮಿಕೊಳ್ಳಲಾಗಿದೆ. ಮಕ್ಕಳು ಮತ್ತು ಮಹಿಳೆಯರಿಗೆ ಪೌಷ್ಟಿಕ ಆಹಾರದ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಸ್ಥಳೀಯವಾಗಿ ಸಿಗುವ ಸೊಪ್ಪು, ತರಕಾರಿ, ಹಣ್ಣುಗಳನ್ನು ದಿನನಿತ್ಯದ ಆಹಾರದಲ್ಲಿ ಉಪಯೋಗಿಸುವಂತೆ ಮಾಹಿತಿ ನೀಡಲಾಗುವುದು. ಪ್ರತಿ ಮನೆಯಲ್ಲೂ ಕೈತೋಟ ಮಾಡಿಕೊಳ್ಳುವುದು ಅತ್ಯಗತ್ಯ ಎಂದು ತಿಳಿಸಿದರು.
ಮುಖಂಡ ಲೋಕೇಶ್ವರ ಮಾತನಾಡಿ, ಅಪೌಷ್ಟಿಕತೆ ಇತರೆ ರೋಗಗಳಿಗೆ ದಾರಿಯಾಗುತ್ತದೆ. ದೇಶವನ್ನು ಅಭಿವೃದ್ಧಿ ಪಥದತ್ತ ಸಾಗಿಸಲು ಪೌಷ್ಟಿಕ ಆಹಾರದ ಮಹತ್ವದ ಬಗ್ಗೆ ಅರಿವು ಮೂಡಿಸುವುದು ಮುಖ್ಯ. ಗರ್ಭಿಣಿಯರು ಪೌಷ್ಟಿಕ ಆಹಾರ ಸೇವಿಸದಿದ್ದರೆ ಮಕ್ಕಳ ಬೆಳವಣಿಗೆಯಲ್ಲಿ ತೊಂದರೆ ಉಂಟಾಗುವ ಸಾಧ್ಯತೆ ಹೆಚ್ಚು ಎಂದು ತಿಳಿಸಿದರು.
ಗರ್ಭಿಣಿಯರ ಮಡಿಲು ತುಂಬುವ ಕಾರ್ಯಕ್ರಮ ನಡೆಯಿತು. ಶಿಶು ಅಭಿವೃದ್ಧಿ ಅಧಿಕಾರಿ ಪಿ.ಓಂಕಾರಪ್ಪ, ಅಂಗನವಾಡಿ ಬಾಲ ವಿಕಾಸ ಸಮಿತಿ ಅಧ್ಯಕ್ಷೆ ಚೈತ್ರಾ, ಗ್ರಾ.ಪಂ.ಸದಸ್ಯ ತಿಮ್ಮರಾಜು, ಅಂಗನವಾಡಿ ಕಾರ್ಯಕರ್ತೆ ಮಮತಾ, ಗ್ರಾಮಸ್ಥರಾದ ಕೃಷ್ಣಪ್ಪ, ಪ್ರಭುದೇವ್, ನಂದೀಶ್ ಕುಮಾರ್, ಚಿದಾನಂದ್, ಸಂದೀಪ್, ಯೋಗೀಶ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.