ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿರುಮಲಾಪುರ ಕೆರೆ ಏರಿಗೆ ಅಪಾಯ: ಜನರ ಆತಂಕ

Last Updated 15 ನವೆಂಬರ್ 2021, 6:14 IST
ಅಕ್ಷರ ಗಾತ್ರ

ಹುಳಿಯಾರು: ಪಟ್ಟಣದ ಕೆರೆಗೆ ನೀರು ಹರಿಸುವ ಹಿನ್ನೆಲೆಯಲ್ಲಿ ಸಮೀಪದ ತಿರುಮಲಾಪುರ ಕೆರೆಯ ಎರಡು ಕೋಡಿಗಳಿಗೆ ಮರಳು ತುಂಬಿದ ಚೀಲಗಳನ್ನು ಇಟ್ಟಿರುವುದರಿಂದ ಏರಿಗೆ ತೊಂದರೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ಹೇಮಾವತಿ ನೀರು ಹಾಗೂ ಇತ್ತೀಚೆಗೆ ಬಿದ್ದ ಮಳೆಯಿಂದ ತಿರುಮಲಾಪುರ ಕೆರೆ ಕೋಡಿ ಹರಿಯುತ್ತಿದೆ. ಒಂದು ಕೋಡಿಯ ಪಕ್ಕದಿಂದ ಹುಳಿಯಾರು ಪಟ್ಟಣದ ಕೆರೆಗೂ ಸಣ್ಣದಾಗಿ ನೀರು ರಾಜಗಾಲುವೆ ಮೂಲಕ ಹರಿಯುತ್ತಿದೆ. ಆದರೆ, ಹುಳಿಯಾರು ಕೆರೆಗೆ ಹೆಚ್ಚಿನ ನೀರು ಹರಿದು ಬರಲಿ ಎಂದು ಪಟ್ಟಣದ ಕೆಲವರು ಹಾಗೂ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ತಿರುಮಲಾಪುರ ಕೆರೆಗೆ ಇರುವ ಎರಡು ಕೋಡಿಗಳಿಗೆ ಮರಳು ತುಂಬಿದ ಚೀಲಗಳನ್ನು ಜೋಡಿಸಿದ್ದಾರೆ.

ಇದರಿಂದ ಸಹಜವಾಗಿ ಕೆರೆ ಹಿನ್ನೀರಿನ ಅಂಗಳ ಹೆಚ್ಚಿದ್ದು ಈಗಾಗಲೇ ಜಲಾವೃತವಾಗಿರುವ ಚಂದ್ರಮೌಳೇಶ್ವರ ದೇಗುಲದ ಸುತ್ತಮುತ್ತ ಹೆಚ್ಚು ನೀರು ಸುತ್ತುವರಿದಿದೆ. ಇನ್ನೂ ತಿರುಮಲಾಪುರ ಗ್ರಾಮದ ಶಾಲೆ ಮುಂಭಾಗದ ರಸ್ತೆವರೆಗೂ ಜಲಾವೃತವಾಗಿದೆ.

ಏರಿಯ ಎರಡು ಕಡೆ ಸ್ವಲ್ಪ ಶಿಥಿಲ ಕೂಡ ಆಗಿರುವುದು ಗ್ರಾಮಸ್ಥರು ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಕೆರೆ ಸುಮಾರು ಐದಾರು ಕಿ.ಮೀ ಉದ್ದವಿದ್ದು ಹೆಚ್ಚು ನೀರು ಸಂಗ್ರಹವಾಗುತ್ತದೆ. ಏರಿಯ ಮುಂಭಾಗದಲ್ಲಿ ಸೂರಗೊಂಡನಹಳ್ಳಿ ಕೂಡ ಇರುವುದರಿಂದ ಮರಳು ಚೀಲ ಇಟ್ಟಿರುವುದು ಸಮಸ್ಯೆಯನ್ನು ಮತ್ತಷ್ಟು ಜಟಿಲಗೊಳಿಸಿದೆ ಗ್ರಾಮದ ಹಿರಿಯೊಬ್ಬರು ಹೇಳಿದರು.

ಈ ಬಗ್ಗೆ ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್‌ಗಳು ಖುದ್ದು ಸ್ಥಳ ಪರಿಶೀಲನೆ ನಡೆಸಬೇಕು ಎಂದು ಗ್ರಾಮಸ್ಥರುಒತ್ತಾಯಿಸಿದ್ದಾರೆ.

‘ಕೋಡಿ ಮೂಲಕ ಹರಿಯುವ ನೀರನ್ನು ತಡೆದಿರುವುದರಿಂದ ಗ್ರಾಮದ ಕಡೆಗೆ ಕೆರೆಯ ನೀರು ಸಂಗ್ರಹವಾಗುತ್ತಿದೆ. ಕೆರೆ ಸಮೀಪ ಸಂಗ್ರಹಿಸಿದ್ದ ಹುಲ್ಲಿನ ಬವಣೆಗೆ ನೀರು ನುಗ್ಗಿದೆ. ಕೆಲವು ವಾಸದ ಮನೆಗಳ ಕಡೆಗೆ ನೀರು ಹರಿದಿದೆ. ಈ ಬಗ್ಗೆ ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಜಿಲ್ಲಾಡಳಿತ ಕೂಡಲೇ ಇತ್ತ ಗಮನಹರಿಸಿ ಗ್ರಾಮದ ಜನರ ಸಮಸ್ಯೆಯನ್ನು ಪರಿಹರಿಸಬೇಕು’ ಎಂದು ಗ್ರಾಮಸ್ಥ ಪ್ರದೀಪ್‌ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT