ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಗೆ ಸಕಾಲದಲ್ಲಿ ಸಾಲ: ರಾಜಣ್ಣ

Last Updated 17 ಜೂನ್ 2021, 3:38 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯಲ್ಲಿ ಮುಂಗಾರು ಆರಂಭಗೊಂಡಿದ್ದು, ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಗ್ರಾಮೀಣ ಭಾಗದ ಎಲ್ಲಾ ಸಹಕಾರಿ ಸಂಸ್ಥೆಗಳಲ್ಲಿ ರೈತರಿಗೆ ಸಕಾಲದಲ್ಲಿ ಸಾಲ ನೀಡಲಾಗುತ್ತಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಬುಧವಾರ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ‘ಜಿಲ್ಲೆಯಲ್ಲಿ ಸಾಲ ವಿತರಣೆಯಲ್ಲಿ ಡಿಸಿಸಿ ಬ್ಯಾಂಕ್ ಪಾಲು ಶೇ 30ರಷ್ಟಿದ್ದರೆ, ಶೇ 70ರಷ್ಟು ಇತರೆ ಬ್ಯಾಂಕುಗಳು ಸಾಲ ನೀಡುತ್ತವೆ. ಬ್ಯಾಂಕ್‌ನ ಆರ್ಥಿಕ ಲಭ್ಯತೆ ನೋಡಿಕೊಂಡು ಸಾಲ ನೀಡಲಾಗುತ್ತಿದೆ. ಜತೆಗೆ ಹೊಸದಾಗಿ ರೈತರಿಗೆ ಸಾಲ ನೀಡಲಾಗುತ್ತಿದೆ’ ಎಂದು ಹೇಳಿದರು.

ಕೋವಿಡ್‌ನಿಂದಾಗಿ ರಾಜ್ಯ ಸರ್ಕಾರ ಸಾಲ ಮರುಪಾವತಿಗೆ ಮೂರು ತಿಂಗಳು ಹೆಚ್ಚುವರಿ ಕಾಲಾವಕಾಶ ಕಲ್ಪಿಸಿದ್ದು, ರೈತರು ಸಾಲ ಮರುಪಾವತಿಗೆ ಸಮಯಾವಕಾಶ ಸಿಕ್ಕಿದೆ ಎಂದರು.

ಇಂಧನ ಬೆಲೆ ಏರಿಕೆ: ಇಂಧನ ಬೆಲೆ ಹೆಚ್ಚಳದಿಂದ ಜನಸಾಮಾನ್ಯರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ರೈತರು ಟ್ರ್ಯಾಕ್ಟರ್‌ಗೆ ಡೀಸೆಲ್ ಹಾಕಿಸಲು ಯೋಚನೆ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಡಾ.ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಒಂದು ಬ್ಯಾರಲ್ ಖಚ್ಚಾ ತೈಲ ಬೆಲೆ 125 ಡಾಲರ್ ಇತ್ತು. ಆಗ ಲೀಟರ್ ಪೆಟ್ರೋಲ್ ₹60, ಡೀಸೆಲ್ ₹50ಕ್ಕೆ ಸಿಗುತ್ತಿತ್ತು. ಈಗ ಒಂದು ಬ್ಯಾರಲ್ ಖಚ್ಚಾ ತೈಲ ಬೆಲೆ 71 ಡಾಲರ್ ಇದೆ. ಅರ್ಧದಷ್ಟು ಬೆಲೆ ಇಳಿಸಬೇಕಿತ್ತು. ಅದನ್ನು ಬಿಟ್ಟು ಪ್ರತಿದಿನ ಹೆಚ್ಚು ಮಾಡುತ್ತಿದ್ದಾರೆ. ತೆರಿಗೆ ಇಳಿಸಿದರೆ ಪೆಟ್ರೋಲ್ ಲೀಟರ್ ₹30ಕ್ಕೆ ನೀಡಬಹುದು ಎಂದು ಸಲಹೆ ಮಾಡಿದರು.

ಎಣ್ಣೆ ಕಾಳುಗಳು ಯುಪಿಎ ಸರ್ಕಾರದಲ್ಲಿ ಕೆ.ಜಿ ₹75ಕ್ಕೆ ಸಿಗುತ್ತಿದ್ದವು. ಈಗ ₹130ಕ್ಕೆ ಏರಿಕೆಯಾಗಿದೆ. ಅಡುಗೆ ಎಣ್ಣೆ ಲೀಟರ್ ₹200 ತಲುಪಿದೆ. ಜತೆಗೆ ಈಗ ವಿದ್ಯುತ್ ದರವನ್ನೂ ಹೆಚ್ಚಿಸಿ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೇಂದ್ರ, ರಾಜ್ಯ ಸರ್ಕಾರಗಳು ಬೆಲೆ ಏರಿಕೆಯನ್ನೇ ಉದ್ಯೋಗ ಮಾಡಿಕೊಂಡಿವೆ ಎಂದು ಆರೋಪಿಸಿದರು.

ಕೋವಿಡ್‌ನಿಂದ ಜನರಿಗೆ ದುಡಿಯುವ ಶಕ್ತಿ ಕಡಿಮೆಯಾಗಿದೆ. ಕೆಲಸವಿಲ್ಲದೆ, ಕೈಯಲ್ಲಿ ಹಣವಿಲ್ಲದ ಸಮಯದಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಮೋದಿ ಸರ್ಕಾರ ಜನಪರವಾಗಿ ಕೆಲಸ ಮಾಡುತ್ತಿಲ್ಲ ಎಂಬುದು ಈಗಾಗಲೇ ದೇಶದ ಜನರಿಗೆ ಗೊತ್ತಾಗಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒತ್ತಾಯಕ್ಕೆ ಮಣಿದು ಕೋವಿಡ್ ಲಸಿಕೆಯನ್ನು ಕೇಂದ್ರ ಸರ್ಕಾರ ಕೊಡುವುದಾಗಿ ಒಪ್ಪಿಕೊಂಡಿದೆ ಹೇಳಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT