ತುಮಕೂರು: ತಿರುಪತಿ ಲಾಡುಗಳಲ್ಲಿ ಪ್ರಾಣಿಗಳ ಕೊಬ್ಬು ಬೆರೆಸಿದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ದೇವಸ್ಥಾನಗಳ ಮಹಾ ಸಂಘದಿಂದ ಜಿಲ್ಲಾಧಿಕಾರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.
‘ತಿರುಪತಿ ದೇವಸ್ಥಾನ ಕೋಟ್ಯಂತರ ಭಕ್ತರ ಆರಾಧನೆಯ ಸ್ಥಳ. ಪುಣ್ಯ ಭೂಮಿಯ ಪ್ರಸಾದಕ್ಕೆ ಪ್ರಾಣಿಗಳ ಕೊಬ್ಬು ಬಳಸಿರುವುದು ಆಘಾತಕಾರಿ. ಇದು ಹಿಂದೂಗಳ ಧಾರ್ಮಿಕ ಶ್ರದ್ಧೆಯ ಮೇಲಾದ ದೊಡ್ಡ ಹೊಡೆತ. ಹಿಂದೂಗಳಿಗೆ ಮಾಡಿದ ದ್ರೋಹ, ಹಿಂದೂಗಳನ್ನು ಭ್ರಷ್ಟರನ್ನಾಗಿಸಲು ಉದ್ದೇಶ ಪೂರ್ವಕವಾಗಿ ನಡೆಸಿದ ಷಡ್ಯಂತ್ರ’ ಎಂದು ಮಹಾಸಂಘದ ಚಂದ್ರಶೇಖರ ಆಚಾರ್ಯ ಅಸಮಾಧಾನ ವ್ಯಕ್ತಪಡಿಸಿದರು.
ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್‌ರೆಡ್ಡಿ ಅವರ ತಂದೆ ರಾಜಶೇಖರ ರೆಡ್ಡಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದರು. ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ತಿರುಪತಿ ಲಾಡು ತಯಾರಿಕೆಯ ಗುತ್ತಿಗೆಯನ್ನು ಕ್ರಿಶ್ಚಿಯನ್ ಸಂಸ್ಥೆಗೆ ನೀಡಿದ್ದರು. ಆಗಲೂ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ದೇವಸ್ಥಾನದ ಆಡಳಿತಾಧಿಕಾರಿಯನ್ನಾಗಿ ಕ್ರಿಶ್ಚಿಯನ್ನರನ್ನು ನೇಮಿಸುತ್ತಿದ್ದರು. ದೇವಸ್ಥಾನದ ಒಳಗೆ ಮತಾಂತರ ಮಾಡುತ್ತಿದ್ದರು ಎಂದು ಆರೋಪಿಸಿದ್ದಾರೆ.
ಜಗನ್‌ಮೋಹನ್ ರೆಡ್ಡಿ ತಮ್ಮ ತಂದೆಯನ್ನು ಅನುಸರಿಸಿರಬಹುದು. ಜಗನ್ ಮತ್ತು ರಾಜಶೇಖರ ರೆಡ್ಡಿ ಅವಧಿಯಲ್ಲಿ ತಿರುಪತಿ ದೇವಸ್ಥಾನಕ್ಕೆ ಸಂಬಂಧಿಸಿದಂತೆ ತೆಗೆದುಕೊಂಡ ಎಲ್ಲ ನಿರ್ಧಾರಗಳನ್ನು ಕೂಲಂಕಷವಾಗಿ ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.
ಮಹಾಸಂಘದ ಪ್ರಮುಖರಾದ ಸುಬ್ರಹ್ಮಣ್ಯ, ವೆಂಕಟೇಶ್, ಮಂಜುನಾಥ ಹಾಜರಿದ್ದರು.
ಪ್ರಮುಖ ಬೇಡಿಕೆ
* ದೇವಸ್ಥಾನಗಳಲ್ಲಿ ನೀಡುವ ಪ್ರಸಾದ ಸಾತ್ವಿಕ, ಶುದ್ಧ ಮತ್ತು ಪವಿತ್ರವಾಗಿರಬೇಕು
* ಪ್ರಸಾದ ತಯಾರಿಕೆ, ವಿತರಣೆಗೆ ಹಿಂದೂಗಳನ್ನು ಮಾತ್ರ ನೇಮಿಸಬೇಕು
* ಧಾರ್ಮಿಕ ಸ್ಥಳಗಳ ರಕ್ಷಣೆಗೆ ಒತ್ತು ನೀಡಬೇಕು
* ಇತರೆ ಧರ್ಮದವರನ್ನು ದೇಗುಲದ ಟ್ರಸ್ಟಿ, ಪದಾಧಿಕಾರಿಗಳಾಗಿ ನೇಮಿಸಬಾರದು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.