ಕುಣಿಗಲ್: ತಾಲ್ಲೂಕಿನ ಎಡೆಯೂರು ಸಿದ್ದಲಿಂಗೇಶ್ವರ ಕ್ಷೇತ್ರದ ಆನೆ ಗಂಗಾ, ವಯೋಸಹಜವಾಗಿ ಅನಾರೋಗ್ಯಕ್ಕೆ ತುತ್ತಾಗಿದ್ದು, ತಜ್ಞ ವೈದ್ಯರ ಸಲಹೆ ಮೇರೆಗೆ ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಬಳಿಯ ಆನೆ ಪುನರ್ವಸತಿ ಕೇಂದ್ರಕ್ಕೆ ಸಾಗಿಸಲಾಗಿದೆ.
70 ವರ್ಷದ ಆನೆ ಗಂಗಾ ಕಾಲಿಗೆ ಸೋಂಕು ತಗುಲಿ ಪರದಾಡುತ್ತಿದ್ದು, ಭಕ್ತರು ಈ ಬಗ್ಗೆ ಮನವಿ ಮಾಡಿದ್ದರು. ಕ್ಯೂಪಾ ಸಂಸ್ಥೆಯ ತಜ್ಞ ವೈದ್ಯರ ತಂಡ ಚಿಕಿತ್ಸೆಗಾಗಿ ಸೂಚನೆ ನೀಡಿದ ಮೇರೆಗೆ, ಮತ್ತು ಜಿಲ್ಲಾಧಿಕಾರಿ ನಿರ್ದೇಶನದ ಮೇರೆಗೆ ಆನೆಯನ್ನು ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಗಿದೆ.
ಕ್ಷೇತ್ರಕ್ಕೆ 1996ರಲ್ಲಿ ಗದಗಿನ ಡಂಬಳ ಮಠದವರು ಆನೆಯನ್ನು ಕೊಡುಗೆಯಾಗಿ ನೀಡಿದ್ದು, ಅಂದಿನ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ದೇವಾಲಯದ ಪರವಾಗಿ ಸ್ವೀಕರಿಸಿದ್ದರು.