ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು | ಸರ್ಕಾರಿ ಶಾಲೆಗೆ ಸಿಗದ ಅವಕಾಶ; ಖಾಸಗಿಯವರಿಗೆ ಮಣೆ

ಸರ್ಕಾರಿ ಶಾಲೆಗಳ ಉಪೇಕ್ಷೆ; ಗಣರಾಜ್ಯೋತ್ಸವದಲ್ಲಿ 12 ಖಾಸಗಿ ಶಾಲೆಗಳಿಗೆ ಅವಕಾಶ
Published 25 ಜನವರಿ 2024, 5:33 IST
Last Updated 25 ಜನವರಿ 2024, 5:33 IST
ಅಕ್ಷರ ಗಾತ್ರ

ತುಮಕೂರು: ಈಗಾಗಲೇ ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವವರು ಹೆಚ್ಚಾಗಿದ್ದು, ಇದೀಗ ಸರ್ಕಾರಿ ಕಾರ್ಯಕ್ರಮಗಳಲ್ಲೂ ಸರ್ಕಾರಿ ಶಾಲೆಯ ಮಕ್ಕಳ ಬಗ್ಗೆ ‘ಉಪೇಕ್ಷೆ’ ಮುಂದುವರಿದಿದೆ.

ರಾಷ್ಟ್ರೀಯ ಹಬ್ಬಗಳು, ಕರ್ನಾಟಕ ರಾಜ್ಯೋತ್ಸವದ ಸಮಯದಲ್ಲಿ ಜಿಲ್ಲಾ ಆಡಳಿತದಿಂದ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಖಾಸಗಿ ಶಾಲಾ–ಕಾಲೇಜುಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಸರ್ಕಾರಿ ಶಾಲೆಗಳ ಮಕ್ಕಳು ಅವಕಾಶದಿಂದ ವಂಚಿತರಾಗುತ್ತಿದ್ದಾರೆ.

ಈ ಬಾರಿ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು 12 ತಂಡಗಳಿಗೆ ಅವಕಾಶ ನೀಡಿದ್ದು, ಇದರಲ್ಲಿ ಒಂದೇ ಒಂದು ಸರ್ಕಾರಿ ಶಾಲೆಯ ತಂಡವಿಲ್ಲ. ಜ. 26ರಂದು ಜಿಲ್ಲಾ ಕ್ರೀಡಾಂಗಣದಲ್ಲಿ 4 ತಂಡಗಳು, ಸಂಜೆ ಗುಬ್ಬಿ ವೀರಣ್ಣ ಕಲಾ ಕ್ಷೇತ್ರದಲ್ಲಿ 8 ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಇಲ್ಲಿ ಖಾಸಗಿ ಶಾಲೆಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ಧ್ವಜಾರೋಹಣದ ನಂತರ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡುವುದು ಸಂಪ್ರದಾಯ. ನವೆಂಬರ್‌ನಲ್ಲಿ ನಡೆದ ರಾಜ್ಯೋತ್ಸವ ಸಮಯದಲ್ಲಿ ಸರ್ಕಾರಿ ಜೂನಿಯರ್‌ ಕಾಲೇಜು, ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಎಂಪ್ರೆಸ್‌ ಕಾಲೇಜು ವಿದ್ಯಾರ್ಥಿಗಳಿಗೆ ಅವಕಾಶ ಸಿಕ್ಕಿತ್ತು. ಈ ಬಾರಿ ಸರ್ಕಾರಿ ಶಾಲೆ ಮಕ್ಕಳಿಗೆ ಅವಕಾಶವೇ ಇಲ್ಲವಾಗಿದೆ.

ಪ್ರತಿ ಬಾರಿ ಒಂದು ತಂಡಕ್ಕಾದರೂ ಅವಕಾಶ ಸಿಗುತ್ತಿತ್ತು. ಈ ಸಲ ಅದೂ ಇಲ್ಲದಂತಾಗಿದೆ. ಸರ್ಕಾರಿ ಅಧಿಕಾರಿಗಳೇ ಸರ್ಕಾರಿ ಶಾಲೆಗಳ ಬಗ್ಗೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ, ದಾಖಲಾತಿ ಹೆಚ್ಚಿಸುವ ಬಗ್ಗೆ ಯಾರೂ ಆಸಕ್ತಿ ತೋರುತ್ತಿಲ್ಲ. ಎಷ್ಟೇ ಪ್ರತಿಭೆ ಇದ್ದರೂ ಪ್ರದರ್ಶನಕ್ಕೆ ಒಂದು ಸೂಕ್ತ ವೇದಿಕೆ ಸಿಗದೆ ಮಕ್ಕಳು ಮೂಲೆಗುಂಪಾಗುತ್ತಿದ್ದಾರೆ ಎಂದು ಶಿಕ್ಷಕರೊಬ್ಬರು ತಿಳಿಸಿದರು.

ಖಾಸಗಿ ಶಾಲೆ ಮಕ್ಕಳು ಬಣ್ಣ–ಬಣ್ಣದ ಉಡುಗೆ ತೊಟ್ಟು ಮಿಂಚುತ್ತಾರೆ. ವಿವಿಧ ವೇಷಭೂಷಣ ಧರಿಸಿ, ನಾನಾ ತರಹದ ಉಪಕರಣಗಳನ್ನು ಬಳಸಿ ನೃತ್ಯ ಪ್ರದರ್ಶಿಸುತ್ತಾರೆ. ಅವರಿಗೆ ಹಲವು ದಿನಗಳಿಂದ ತರಬೇತಿಯನ್ನೂ ನೀಡಲಾಗುತ್ತದೆ. ಆದರೆ, ಸರ್ಕಾರಿ ಶಾಲೆಗಳಲ್ಲಿ ಬಡವರು, ಮಧ್ಯಮ ವರ್ಗದಿಂದ ಬಂದ ಮಕ್ಕಳಿರುತ್ತಾರೆ. ಅವರಿಗೆ ತರಬೇತಿ ಇರಲಿ ನೃತ್ಯ ಪ್ರದರ್ಶನಕ್ಕೆ ಬೇಕಾದ ಉಡುಗೆ ಕೊಳ್ಳುವುದು ಕಷ್ಟಕರ. ಶಾಲೆಯ ಸಮವಸ್ತ್ರದಲ್ಲೇ ಮಕ್ಕಳು ನೃತ್ಯ ಪ್ರದರ್ಶಿಸಿದ ಉದಾಹರಣೆಗಳಿವೆ. ಇದರಿಂದ ಶಾಲೆಯ ಶಿಕ್ಷಕರು, ಅಧಿಕಾರಿಗಳು ನಮಗೇಕೆ ಈ ‘ಉಸಾಬರಿ’ ಎಂದು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ.

ತುಮಕೂರು ಜಿಲ್ಲಾ ಕ್ರೀಡಾಂಗಣ
ತುಮಕೂರು ಜಿಲ್ಲಾ ಕ್ರೀಡಾಂಗಣ

ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಅವಕಾಶ ನೀಡಲಾಗುತ್ತಿದೆ. ಈ ಹಿಂದೆ ಜೂನಿಯರ್‌ ಕಾಲೇಜು ಎಂಪ್ರೆಸ್‌ ಶಾಲೆ ವಿದ್ಯಾರ್ಥಿಗಳು ನೃತ್ಯ ಪ್ರದರ್ಶಿಸಿದ್ದರು. ಸರ್ಕಾರಿ ಶಾಲೆಗಳನ್ನು ಎಂದಿಗೂ ನಿರ್ಲಕ್ಷ್ಯ ಮಾಡಿಲ್ಲ. -ಸಿ.ರಂಗಧಾಮಯ್ಯ ಡಿಡಿಪಿಐ

ಮಕ್ಕಳ ಸಂಖ್ಯೆ ಕಡಿಮೆ

ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಎಂಪ್ರೆಸ್‌ ಶಾಲೆಯ ವಿದ್ಯಾರ್ಥಿನಿಯರು ನೃತ್ಯ ಪ್ರದರ್ಶಿಸಿ ಗಮನ ಸೆಳೆದಿದ್ದರು. ಕಾರ್ಯಕ್ರಮದ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಸಚಿವ ಜಿ.ಪರಮೇಶ್ವರ ವಿದ್ಯಾರ್ಥಿನಿಯರ ಪ್ರತಿಭೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ‘ಖಾಸಗಿ ಶಾಲೆಯ ವಿದ್ಯಾರ್ಥಿಗಳಿಗಿಂತ ಉತ್ತಮವಾಗಿ ನೃತ್ಯ ಪ್ರದರ್ಶಿಸಿದರು’ ಎಂದು ಅಭಿನಂದಿಸಿದ್ದರು. ಮಕ್ಕಳನ್ನು ಪ್ರೋತ್ಸಾಹಿಸಿ ಮತ್ತಷ್ಟು ಅವಕಾಶ ನೀಡಬೇಕಿದ್ದ ಅಧಿಕಾರಿಗಳಿಂದ ಸ್ಪಂದನೆ ಇಲ್ಲವಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಸರ್ಕಾರಿ ಶಾಲೆ ಮಕ್ಕಳನ್ನು ಪೂರ್ತಿಯಾಗಿ ಹೊರಗಿಟ್ಟಿದ್ದಾರೆ. ‘ಖಾಸಗಿ ಶಾಲೆಯ ಒಂದು ತಂಡದಲ್ಲಿ 500ರಿಂದ 600 ಮಕ್ಕಳು ನೃತ್ಯ ಪ್ರದರ್ಶಿಸುತ್ತಾರೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇರುವುದರಿಂದ ಅವಕಾಶ ನೀಡಲು ಆಗುತ್ತಿಲ್ಲ’ ಎಂಬುವುದು ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳ ವಿವರಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT