ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲಿನ ಜನ್ಮದಿನ ಆಚರಿಸಿದ ಪ್ರಯಾಣಿಕರು

ಸಿಂಗಾರಗೊಂಡು ಕಂಗೊಳಿಸಿದ ರೈಲು : ಪ್ರಯಾಣಿಕರಿಗೆ ಸಿಹಿ ಹಂಚಿಕೆ
Last Updated 3 ಆಗಸ್ಟ್ 2019, 19:57 IST
ಅಕ್ಷರ ಗಾತ್ರ

ತುಮಕೂರು: ಅಲ್ಲಿ ರೈಲು ಬಾಳೆಕಂದು, ಮಾವಿನ ಸೊಪ್ಪು, ಬಲೂನ್‌, ಹೂಗಳಿಂದ ಸಿಂಗಾರಗೊಂಡಿತ್ತು. ರೈಲಿನ ಪ್ರಯಾಣಿಕರು ಮನೆಯ ಶುಭ ಸಮಾರಂಭದಲ್ಲಿ ಓಡಾಡುವಂತೆ ಲಘುಬಗೆಯ ಉತ್ಸಾಹದಲ್ಲಿದ್ದರು. ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ ಮೇಲೆ ಕೇಕ್‌ ಕತ್ತರಿಸಿ ಹಂಚಿದರು.

ಇದೆಲ್ಲವು ಕಂಡು ಬಂದಿದ್ದು ಶನಿವಾರ ನಡೆದ ತುಮಕೂರು–ಬೆಂಗಳೂರು ರೈಲಿನ ಜನ್ಮದಿನದ ಸಮಾರಂಭದಲ್ಲಿ.ತುಮಕೂರು ಬೆಂಗಳೂರು ರೈಲ್ವೆ ಪ್ರಯಾಣಿಕರ ವೇದಿಕೆಯು ಈ ವಿಶೇಷ ಕಾರ್ಯಕ್ರಮವನ್ನು ಸಂತಸದಿಂದ ಆಚರಿಸಿದರು.

ಶನಿವಾರ ಬೆಳ್ಳಂಬೆಳಗ್ಗೆಯೇ ನಿಲ್ದಾಣಕ್ಕೆ ಬಂದ ವೇದಿಕೆಯ ಪದಾಧಿಕಾರಿಗಳು, ಸದಸ್ಯರು ಪ್ರಯಾಣಿಕರ ಸಹಕಾರದೊಂದಿಗೆ ರೈಲನ್ನು ಅಲಂಕರಿಸಿದರು. ಬಲೂನ್‌, ಬಂಟಿಂಗ್ಸ್‌ಗಳನ್ನು ಕಟ್ಟಿ ಖುಷಿಪಟ್ಟರು.

ರೈಲಿನ ಚಾಲಕರಾದ ವಿ.ಎನ್‌.ಪ್ರಸಾದ್‌, ಸಹ ಚಾಲಕರಾದ ವಿಶ್ವೇಶ್ವರ್‌ ಪ್ರಸಾದ್‌ ಮತ್ತು ಗಾರ್ಡ್‌ ಎನ್‌.ಕೆ.ನಿರಾಲ ಅವರಿಂದ ಕೇಕ್‌ ಕತ್ತರಿಸಿ ಸಂಭ್ರಮಿಸಿದರು. ವೇದಿಕೆ ಪದಾಧಿಕಾರಿಗಳು ಪ್ರಯಾಣಿಕರಿಗೆ ಕೇಕ್‌ ವಿತರಿಸಿ ಸಂತಸವನ್ನು ಇಮ್ಮಡಿಗೊಳಿಸಿಕೊಂಡರು. ಅದೇ ರೈಲಿನಲ್ಲಿ ಬೆಂಗಳೂರಿಗೆ ತೆರಳಿದ ಪದಾಧಿಕಾರಿಗಳು ದಾರಿಯುದ್ದಕ್ಕೂ ಎಲ್ಲ ಪ್ರಯಾಣಿಕರಿಗೂ ಸಿಹಿ ವಿತರಿಸಿದರು.

ವೇದಿಕೆ ಅಧ್ಯಕ್ಷೆ ಬಾ.ಹ.ರಮಾಕುಮಾರಿ, ರೈಲ್ವೆ ಸುರಕ್ಷಾ ಪಡೆಯ ಉಪನಿರೀಕ್ಷಕ ಕುಬೇರಪ್ಪ ಮತ್ತು ತುಮಕೂರು ರೈಲ್ವೆ ವ್ಯವಸ್ಥಾಪಕ ರಮೇಶ್‌ ಬಾಬು ಮತ್ತು ಸಿಬ್ಬಂದಿ, ಡಿಆರ್‌ಸಿಸಿ ಸದಸ್ಯ ರಘೋತ್ತಮರಾವ್‌ ಇದ್ದರು.

ಉದ್ಯೋಗ ನಿಮಿತ್ತ ಬೆಂಗಳೂರಿಗೆ ಪ್ರತಿನಿತ್ಯ ಸಂಚರಿಸುವ ಉದ್ಯೋಗಿಗಳಿಗೆ ಅನುಕೂಲವಾಗಿದ್ದ ಬೆಳಗ್ಗೆ 8ಕ್ಕೆ ತುಮಕೂರು ಮಾರ್ಗವಾಗಿ ತೆರಳುತ್ತಿದ್ದ ಸೊಲ್ಲಾಪುರ–ಬೆಂಗಳೂರು ರೈಲಿನ ವೇಳೆ ಬದಲಾವಣೆ ಮಾಡಲಾಗಿತ್ತು. ಅದರಿಂದ ಉಂಟಾದ ತೊಂದರೆ ನಿವಾರಣೆಗೆ ಹೊಸರೈಲು ಆರಂಭಿಸಿಲು ಸಮಾನ ಮನಸ್ಕ ಪ್ರಯಾಣಿಕರು ವೇದಿಕೆ ರೂಪಿಸಿಕೊಂಡು ರೈಲ್ವೆ ಸಚಿವರನ್ನು ಒತ್ತಾಯಿಸಿದ್ದರು. ಅದರ ಫಲವಾಗಿ ಈ ರೈಲು ಸೇವೆ ನೀಡಲಾಗಿತ್ತು.

ಪ್ರತಿಭಾ ಪುರಸ್ಕಾರ: ವೇದಿಕೆ ಆರಂಭದ ಆರನೇ ವರ್ಷಾಚರಣೆ ಅಂಗವಾಗಿ ಆಗಸ್ಟ್ 11ರ ಭಾನುವಾರ ಬೆಳಗ್ಗೆ 9 ಗಂಟೆಯಿಂದ ಉಚಿತ ಆರೋಗ್ಯ ತಪಾಸಣೆ, ಕೀಲು-ಮೂಳೆ ಮತ್ತು ನೇತ್ರ ತಪಾಸಣೆ ಹಾಗೂ ರಕ್ತದಾನ ಶಿಬಿರ ನಡೆಯಲಿದೆ. ಇದರೊಂದಿಗೆ ರೈಲ್ವೆ ಪ್ರಯಾಣಿಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ನಿವೃತ್ತ ಪ್ರಯಾಣಿಕರಿಗೆ ಅಭಿನಂದನಾ ಸಮಾರಂಭ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT