ಬೆಂಗಳೂರು–ತುಮಕೂರು ಮೆಟ್ರೊ ಸಂಚಾರ ಕಾರ್ಯಸಾಧುವಲ್ಲ. ವೆಚ್ಚ, ಸಮಯ, ಪ್ರಯಾಣ ದರ ಎಲ್ಲವೂ ಅಧಿಕವಾಗುವುದರಿಂದ ವಿಫಲಗೊಳ್ಳುವ ಸಾಧ್ಯತೆ ಇದೆ. ಅದಕ್ಕಿಂತ ಉಪ ನಗರ ರೈಲು ಯೋಜನೆಯಾದರೆ ಕಡಿಮೆ ವೆಚ್ಚದಲ್ಲಿ ಯೋಜನೆ ಅನುಷ್ಠಾನ ಮಾಡಬಹುದು. ಪ್ರಯಾಣ ದರವೂ ಕಡಿಮೆ ಇರುತ್ತದೆ. ಈಗಿನ ಮೆಟ್ರೊ ದರದ ಪ್ರಕಾರ ಮಾದಾವರದಿಂದ ತುಮಕೂರಿಗೆ ಹೋಗಲು ಕನಿಷ್ಠ ₹ 125 ನೀಡಬೇಕಾಗುತ್ತದೆ. ಅದೇ ಈಗ ರೈಲಿನಲ್ಲಿ ಬೆಂಗಳೂರಿನಿಂದ ತುಮಕೂರಿಗೆ ₹ 20 ಇದೆ. ಉಪ ನಗರ ರೈಲಿಗೆ ಇದರ ಎರಡೂವರೆ ಪಟ್ಟು ಅಂದರೂ ₹ 50ರಷ್ಟು ಆಗಬಹುದು.
– ರಾಜಕುಮಾರ್ ದುಗರ್, ಸಿಟಜನ್ಸ್ ಫಾರ್ ಸಿಟಿಜನ್ಸ್ (ಸಿ4ಸಿ) ಸಂಸ್ಥಾಪಕ
ಮೆಟ್ರೊ ರೈಲು ಸಂಪರ್ಕ ಮಾರ್ಗವು ಹೆದ್ದಾರಿಯ ನಡುವೆ ಇಲ್ಲವೇ ಪಕ್ಕದಿಂದಲೇ ಹಾದು ಹೋಗುವುದರಿಂದ ಕಾಮಗಾರಿ ನಡೆಯುವಾಗ ವಾಹನ ಸಂಚಾರಕ್ಕೆ ತೊಡಕಾಗುತ್ತದೆ. ಉಪ ನಗರ ರೈಲು ಈಗಿರುವ ರೈಲು ಹಳಿಗಳ ಪಕ್ಕದಲ್ಲಿ ಹಾದುಹೋಗುತ್ತದೆ. ರೈಲು ಸಂಪರ್ಕವಿಲ್ಲದ ಮಾಕಳಿ, ನೆಲಮಂಗಲ, ಟಿ. ಬೇಗೂರಿನಂತಹ ಕೆಲವು ಪ್ರದೇಶಗಳನ್ನು ಮೆಟ್ರೊ ಸಂಪರ್ಕಸುತ್ತದೆ ಎಂಬುದಷ್ಟೇ ಸಕಾರಾತ್ಮಕ ಅಂಶ. ಮೆಟ್ರೊ ಯೋಜನೆ ಅನುಷ್ಠಾನ ತರಲು ಮಾಡಿದಂತಿಲ್ಲ. ಮೆಟ್ರೊ ಹೆಸರಲ್ಲಿ ರಿಯಲ್ ಎಸ್ಟೇಟ್ ವ್ಯವಹಾರವನ್ನು ಹೆಚ್ಚಿಸಿಕೊಳ್ಳಲು ಮಾಡಿದಂತೆ ಕಾಣುತ್ತಿದೆ.