ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ವಿಸ್ತರಣೆಗೆ ಬಲಿಯಾಗುತ್ತಿವೆ ಮರಗಳು

Last Updated 1 ಮಾರ್ಚ್ 2021, 5:32 IST
ಅಕ್ಷರ ಗಾತ್ರ

ಚಿಕ್ಕನಾಯಕನಹಳ್ಳಿ: ಶತಮಾನಗಳ ಕಾಲ ನೆರಳನ್ನು ನೀಡಿ, ಸಾವಿರಾರು ಪ್ರಯಾಣಿಕರಿಗೆ ತಂಗುದಾಣದಂತಿದ್ದ ಅರಳಿಮರಗಳು ರಸ್ತೆ ವಿಸ್ತರಣೆಗಾಗಿ ಧರೆಗುರುಳುತ್ತಿವೆ. ಇದರ ಜೊತೆ ರಸ್ತೆಯ ಉದ್ದಕ್ಕೂ ಇದ್ದ ನೂರಾರುಮರಗಳ ಮಾರಣ ಹೋಮ ನಡೆಯುತ್ತಿದೆ.

ಪಟ್ಟಣದಲ್ಲಿ ಡಿಸಿಸಿ ಬ್ಯಾಂಕ್ ಎದುರಿಗಿದ್ದ ಅರಳಿಮರ, ಬಸ್‌ನಿಲ್ದಾಣದೊಳಗಿದ್ದ ಅರಳಿಮರ ಹಾಗೂ ಹುಳಿಯಾರು ರಸ್ತೆಯ ದಾರಿ ಸಮೀಪವಿದ್ದ ಅರಳಿಮರಗಳು ಶತಮಾನಗಳ ಕಾಲದಿಂದ ಲಕ್ಷಾಂತರ ಪ್ರಯಾಣಿಕರಿಗೆ ನೆರಳನ್ನು ನೀಡಿದ್ದವು. ನಾಗರಕಲ್ಲುಗಳಿಗೆ ನೆರಳಾಗಿದ್ದವು, ಅನಾಥರಿಗೆ ಆಶ್ರಯವಾಗಿದ್ದ ಅರಳಿಮರಗಳೇ ಇಂದು ಅನಾಥವಾಗಿವೆ.ಕೆಲವರು ಈ ಮರಗಳ ಕೆಳಗೆ ಸಣ್ಣ ಪುಟ್ಟ ಅಂಗಡಿಗಳನ್ನು ಇಟ್ಟುಕೊಂಡು ಜೀವನವನ್ನೂ ನಡೆಸುತ್ತಿದ್ದರು. ಅದರಲ್ಲೂ ಸರ್ಕಾರಿ ಕಚೇರಿ, ಬ್ಯಾಂಕ್‌ಗಳಿಗೆ ಬಂದ ಹಿರಿಯರು, ಮಕ್ಕಳು, ಮಹಿಳೆಯರು ಇದೇ ನೆರಳಿನಲ್ಲಿ ವಿಶ್ರಮಿಸುತ್ತಿದ್ದರು.

ಬಸ್‌ನಿಲ್ದಾಣ ಬಳಿ ಇದ್ದ ಅರಳಿಮರದ ಕೆಳಗೆ ಬೆಂಗಳೂರು ಕಡೆಗೆ ಹೋಗುವ ನೂರಾರು ಪ್ರಯಾಣಿಕರು ಇದೇ ನೆರಳಿನಲ್ಲಿ ವಿಶ್ರಮಿಸುತ್ತಿದ್ದರು. ಈ ಅರಳಿಮರದ ಸುತ್ತಾ ಕಟ್ಟೆ ಕಟ್ಟಿ ಅಲ್ಲಿ ನಾಗರ ಕಲ್ಲು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದ್ದೂ ಉಂಟು. 60 ವರ್ಷಗಳಿಂದ ಸಾವಿರಾರು ಪಕ್ಷಿಗಳಿಗೆ ಆಶ್ರಯ ನೀಡುತ್ತಿದ್ದ ಜೊತೆಗೆ ಪಕ್ಷಿಗಳಿಗೆ ಈ ಅರಳಿಮರ ನೆಲಯನ್ನೂ ನೀಡಿತ್ತು. ರಸ್ತೆಯ ಎರಡೂ ಬದಿ ಸದಾ ಹಸಿರಿನಿಂದ ಕಂಗೊಳಿಸುತ್ತಿದ್ದ ಮರಗಳು ಇಲ್ಲವಾದ್ದರಿಂದ ರಸ್ತೆಗಳು ಬೋಳು ಬೋಳಾಗಿ ಕಾಣುತ್ತಿದೆ.

ಒಂದು ಮರ ಬೆಳೆಸಲು 8ರಿಂದ 10 ವರ್ಷ ಕಾಯಬೇಕು. ಒಂದು ಮರ ಕಡಿದರೆ ಬೇರೆ ಜಾಗದಲ್ಲಿ 10 ಗಿಡಗಳನ್ನು ನೆಡುವುದರ ಮೂಲಕ ಪರಿಸರ ಸಮತೋಲನ ಕಾಪಾಡಬೇಕು. ಸರ್ಕಾರ ಗಿಡ ನೆಡಿ, ಪರಿಸರ ಉಳಿಸಿ, ಪರಿಸರವಿದ್ದರೆ ನಾಡಿಗೆ ಮಳೆ, ಮಳೆ ಇದ್ದರೆ ಬೆಳೆ ಎಂದು ಪ್ರಚಾರ ಮಾಡುತ್ತದೆ. ಇನ್ನೊಂದೆಡೆ ಗಿರ-ಮರಗಳನ್ನು ಪರೋಕ್ಷವಾಗಿ ಕಡಿಸುತ್ತಿದೆ. ಹೆದ್ದಾರಿ ವಿಸ್ತರಣೆ ಸಲುವಾಗಿ ಮರವನ್ನು ಕತ್ತರಿಸಲಾಗಿದೆ. ಹೀಗಾಗಿ ರಸ್ತೆ ಬದಿಯಲ್ಲಿ ನೆರಳು ಮಾಯವಾಗುತ್ತಿದೆ. ಮರಗಳನ್ನು ಕಡಿದ ಪ್ರಮಾಣದಲ್ಲೇ ಪಟ್ಟಣದಲ್ಲಿ ಬೇರೆ ಸಸಿಗಳನ್ನು ನೆಡುವುದು ಅಗತ್ಯವಾಗಿದೆ ಎಂದು ಪರಿಸರ ಪ್ರಿಯರು ಒತ್ತಾಯಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT