ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಲ್ಸೇತುವೆ ಕೆಲಸ: ಸುಗಮ ಸಂಚಾರಕ್ಕೆ ಅಡ್ಡಿ

ಎಚ್.ಸಿ.ಅನಂತರಾಮು
Published 6 ಮೇ 2024, 7:02 IST
Last Updated 6 ಮೇ 2024, 7:02 IST
ಅಕ್ಷರ ಗಾತ್ರ

ಶಿರಾ: ರಾಷ್ಟ್ರೀಯ ಹೆದ್ದಾರಿ 48 (ಬೆಂಗಳೂರು- ಪುಣೆ) ರ ಚಿಕ್ಕನಹಳ್ಳಿ ಬಳಿ ನಡೆಯುತ್ತಿರುವ ಮೇಲ್ಸೇತುವೆ ಕಾಮಗಾರಿ ಮಂದಗತಿಯಿಂದ ಸಾಗುತ್ತಿದ್ದು ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ.

ಉತ್ತರ ಕರ್ನಾಟಕದ ಜನತೆ ರಾಜಧಾನಿಗೆ ತೆರಳಲು ಇದು ಹೆಬ್ಬಾಗಿಲಾಗಿದ್ದು ಇಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚಾರ ಮಾಡುತ್ತಿವೆ. ಮುಖ್ಯಮಂತ್ರಿ, ಸಚಿವರು ಸೇರಿದಂತೆ ಹಿರಿಯ ಅಧಿಕಾರಿಗಳು ಸಂಚಾರ ಮಾಡುತ್ತಿದ್ದರು ಸಹ ಕಾಮಗಾರಿ ವಿಳಂಬದ ಬಗ್ಗೆ ಯಾರು ಸಹ ಚಕಾರ ಎತ್ತದೆ ಮೌನ ವಹಿಸಿರುವುದು ಆಶ್ಚರ್ಯ ಮೂಡಿಸುತ್ತದೆ.

ಸ್ಥಳೀಯರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಫೆಬ್ರುವರಿ 2023ರಲ್ಲಿ ₹14.50 ಕೋಟಿ ವೆಚ್ಚದಲ್ಲಿ ಮೇಲ್ಸೇತುವೆ ಕಾಮಗಾರಿ ಪ್ರಾರಂಭ ಮಾಡಲಾಯಿತು. ಒಂದ ವರ್ಷ ಮೂರು ತಿಂಗಳು ಕಳೆದರೂ ಇನ್ನು ಕಾಮಗಾರಿ ಪೂರ್ಣಗೊಂಡಿಲ್ಲ. ಗುತ್ತಿಗೆದಾರರಿಗೆ ನೀಡಿದ್ದ ಅವಧಿ ಮುಕ್ತಾಯವಾದರೂ ಸಹ ಕಾಮಗಾರಿ ಕುಂಟುತ್ತಾ ಸಾಗುತ್ತಿರುವುದು ವಾಹನ ಸವಾರರು ಹಾಗೂ ಸ್ಥಳೀಯರಲ್ಲಿ ಸಂಕಷ್ಟ ಮೂಡಿಸಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವುದರಿಂದ ಇಲ್ಲಿ ಸಂಚರಿಸುತ್ತಿದ್ದ ವಾಹನಗಳು ಸರ್ವಿಸ್ ರಸ್ತೆಯಲ್ಲಿ ಸಂಚರಿಸಬೇಕಿದೆ. ಕಿರಿದಾದ ರಸ್ತೆಯಲ್ಲಿ ಒಂದರ ಹಿಂದೆ ಒಂದು ಸಂಚರಿಸಬೇಕಿರುವುದರಿಂದ ವಾಹನ ದಟ್ಟಣೆ ಹೆಚ್ಚಾಗಿ ವಾಹನ ಚಾಲನೆ ಕಷ್ಟವಾಗುತ್ತಿದೆ. ಜತೆಗೆ ಆಂಬುಲೆನ್ಸ್ ಹಾಗೂ ತುರ್ತು ಪ್ರಯಾಣ ಮಾಡುವರು ದಟ್ಟಣೆಯಲ್ಲಿ ಸಿಕ್ಕಿ ಹಾಕಿಕೊಂಡರೆ ಅವರ ನೋವು ಕೇಳುವವರು ಇಲ್ಲದಂತಾಗಿದೆ.

ಹಬ್ಬ, ಹರಿದಿನ, ವಾರಾಂತ್ಯದ ದಿನಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ವಾಹನಗಳು ಸರದಿ ಸಾಲಿನಲ್ಲಿ ನಿಲ್ಲುವಂತಾಗಿದೆ. ಕೆಲವೊಮ್ಮೆ ಗಂಟೆಗಟ್ಟಲೆ ಟ್ರಾಪಿಕ್‌ನಲ್ಲಿ ಸಿಲುಕಿಕೊಂಡು ಬಿಸಿಲಿಗೆ ಉಸಿರು ಕಟ್ಟಿದ ವಾತಾವರಣದಿಂದಾಗಿ ಹಿಡಿಶಾಪ ಹಾಕುವಂತಾಗಿದೆ.

ಟೋಲ್ ರಸ್ತೆ: ಕರೇಜವನಹಳ್ಳಿ ಟೋಲ್‌ಗೇಟ್‌ನಿಂದ ಸುಮಾರು 7 ಕಿ.ಮೀ ದೂರದಲ್ಲಿ ಕಾಮಗಾರಿ ನಡೆಯುತ್ತಿದ್ದು ಇಲ್ಲಿ ಸಂಚಾರದ ನರಕ ಅನುಭವಿಸಿದರು ಸಹ ಟೋಲ್ ಕಟ್ಟಬೇಕಾದ ದುಸ್ಥಿತಿ ನಿರ್ಮಾಣವಾಗಿದೆ. ಸುಗಮ ಸಂಚಾರದ ಹೆಸರಿನಲ್ಲಿ ಟೋಲ್ ಪಡೆಯುವ ಇವರು ಯಾವ ರೀತಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದಾರೆ ಎನ್ನುವ ಮಾತು ಕೇಳಿ ಬರುತ್ತದೆ.

ಟೋಲ್ ಪಡೆಯುವುದು ನಮ್ಮ ಹಕ್ಕು, ಸೌಲಭ್ಯಗಳ ಬಗ್ಗೆ ಏನು ಕೇಳಬೇಡಿ ಎನ್ನುವ ಧೋರಣೆ ಇಲ್ಲಿನ ಟೋಲ್ ಸಿಬ್ಬಂದಿ ಹೊಂದಿದ್ದಾರೆ. ಯಾವುದನ್ನು ಕೇಳಿದರೂ ಸಹ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಡೆ ಬೊಟ್ಟು ಮಾಡಿ ತೋರಿಸುತ್ತಾರೆ.

ಅಪಘಾತಗಳ ತಾಣ: ಮೇಲ್ಸೇತುವೆ ಕಾಮಗಾರಿ ಆರಂಭವಾದ ನಂತರ ಇಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗಿದೆ. ಅಪಘಾತಗಳ ತಾಣವಾಗಿ ಪರಿವರ್ತನೆಯಾಗಿದೆ. ಒಂದು ವರ್ಷದಲ್ಲಿ ಇಲ್ಲಿ 39 ಅಪಘಾತಗಳಾಗಿದ್ದು ಇದರಲ್ಲಿ 9 ಮಂದಿ ಸಾವನ್ನಪ್ಪಿದರೆ, 18 ಮಂದಿ ಗಾಯಗೊಂಡಿದ್ದಾರೆ. ಅಪಘಾತವಾದರೆ ಅಲ್ಲಿಗೆ ತೆರಳಿ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸುವುದು ಕಷ್ಟವಾಗುತ್ತಿದೆ. ಅಪಘಾತಗಳ ತಡೆಗೆ ಪೊಲೀಸರು ಹರಸಾಹಸ ಪಟ್ಟರು ಯಾವುದೇ ಪ್ರಯೋಜನವಾಗುತ್ತಿಲ್ಲ. ಕಾಮಗಾರಿ ವಿಳಂಬವಾದಷ್ಟು ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ.

ಕಳಪೆ ಕಾಮಗಾರಿ: ಮೇಲ್ಸೇತುವೆ ಪಕ್ಕದಲ್ಲಿ ರಸ್ತೆ ನಿರ್ಮಾಣಕ್ಕೆ ಹಾಕಿರುವ ಇಂಟರ್‌ಲಾಕ್‌ ಸಿಮೆಂಟ್ ಬ್ಲಾಕ್‌ಗಳನ್ನು ಸರಿಯಾಗಿ ಜೋಡಣೆ ಮಾಡಿಲ್ಲ. ತುಮಕೂರು ಕಡೆಯಿಂದ ಶಿರಾಕ್ಕೆ ಬರುವ ಎಡ ಭಾಗದಲ್ಲಿ ಸಿಮೆಂಟ್ ಬ್ಲಾಕ್‌ಗಳ ಗುಣಮಟ್ಟ ಸರಿ ಇಲ್ಲ ಎನ್ನುವ ಆರೋಪ ಸ್ಥಳೀಯರಿಂದ ಕೇಳಿ ಬರುತ್ತಿದೆ. ಈ ಭಾಗದಲ್ಲಿ ಸಿಮೆಂಟ್ ಬ್ಲಾಕ್‌ಗಳು ಸಮತಟ್ಟಾಗಿರದೆ ಕೆಲವು ಕಡೆ ಹಿಂದಕ್ಕೂ ಮುಂದಕ್ಕೂ ಇರುವುದು ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹೇಳುವಂತೆ ಇದು ಕಳಪೆ ಕಾಮಗಾರಿ ಅಲ್ಲ. ಒಂದು ವೇಳೆ ಕಳಪೆ ಕಾಮಗಾರಿಯಾದರೆ ಗುತ್ತಿಗೆದಾರರು ಮತ್ತೆ ಸರಿ ಪಡಿಸಬೇಕು. 10 ವರ್ಷ ಅವರೇ ಅದನ್ನು ನಿರ್ವಹಣೆ ಮಾಡಬೇಕಿರುವುದರಿಂದ ಆತಂಕ ಪಡಬೇಕಿಲ್ಲ ಎನ್ನುತ್ತಾರೆ.

ಕಾಮಗಾರಿ ಮುಗಿಯುವುದು ಯಾವಾಗ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹೇಳುವಂತೆ ಕಾಮಗಾರಿ ವಿಳಂಬವಾಗಿರುವುದು ಸತ್ಯ. ಈ ಬಗ್ಗೆ ಗುತ್ತಿಗೆದಾರರಿಗೆ ತ್ವರಿತವಾಗಿ ಕಾಮಗಾರಿ ನಡೆಸುವಂತೆ ಸೂಚಿಸಲಾಗಿದೆ. ಮೇ. 20ಕ್ಕೆ ಕಾಮಗಾರಿ ಮುಕ್ತಾಯವಾಗಿ ತಿಂಗಳ ಅಂತ್ಯಕ್ಕೆ ವಾಹನಗಳ ಸಂಚಾರಕ್ಕೆ ಮುಕ್ತವಾಗುತ್ತದೆ ಎನ್ನುತ್ತಾರೆ.

ಶಿರಾ ತಾಲ್ಲೂಕಿನ ಚಿಕ್ಕನಹಳ್ಳಿ ಬಳಿ ನಡೆಯುತ್ತಿರುವ ಮೇಲ್ಸೇತುವೆ ಕಾಮಗಾರಿ
ಶಿರಾ ತಾಲ್ಲೂಕಿನ ಚಿಕ್ಕನಹಳ್ಳಿ ಬಳಿ ನಡೆಯುತ್ತಿರುವ ಮೇಲ್ಸೇತುವೆ ಕಾಮಗಾರಿ
ಶಿರಾ ತಾಲ್ಲೂಕಿನ ಚಿಕ್ಕನಹಳ್ಳಿ ಬಳಿ ನಡೆಯುತ್ತಿರುವ ಮೇಲ್ಸೇತುವೆ ಕಾಮಗಾರಿ
ಶಿರಾ ತಾಲ್ಲೂಕಿನ ಚಿಕ್ಕನಹಳ್ಳಿ ಬಳಿ ನಡೆಯುತ್ತಿರುವ ಮೇಲ್ಸೇತುವೆ ಕಾಮಗಾರಿ
ಶಿರಾ ತಾಲ್ಲೂಕಿನ ಚಿಕ್ಕನಹಳ್ಳಿ ಬಳಿ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವುದರಿಂದ ಸರ್ವಿಸ್ ರಸ್ತೆಯಲ್ಲಿ ವಾಹನ ಸಂಚರಿಸುತ್ತಿರುವುದು
ಶಿರಾ ತಾಲ್ಲೂಕಿನ ಚಿಕ್ಕನಹಳ್ಳಿ ಬಳಿ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವುದರಿಂದ ಸರ್ವಿಸ್ ರಸ್ತೆಯಲ್ಲಿ ವಾಹನ ಸಂಚರಿಸುತ್ತಿರುವುದು
ಸ್ಥಳೀಯರಿಗೆ ಆತಂಕ‌ ಮೂಡಿಸಿರುವ ಸಿಮೆಂಟ್ ಬ್ಲಾಕ್
ಸ್ಥಳೀಯರಿಗೆ ಆತಂಕ‌ ಮೂಡಿಸಿರುವ ಸಿಮೆಂಟ್ ಬ್ಲಾಕ್
ಬಸಮ್ಮ
ಬಸಮ್ಮ
ಬಸವರಾಜು
ಬಸವರಾಜು
ಶ್ರೀನಿವಾಸ್
ಶ್ರೀನಿವಾಸ್

ಕಳಪೆ ಕಾಮಗಾರಿ ಯಾವುದೇ ರೀತಿಯ ಮುಂಜಾಗ್ರತೆ ವಹಿಸದೆ ಕಾಮಗಾರಿ ನಡೆಸಲಾಗುತ್ತಿದೆ. ಯಂತ್ರೋಪಕರಣಗಳು ಇದ್ದರು ಅವುಗಳನ್ನು ಸಮರ್ಪಕವಾಗಿ ಬಳಕೆ ಮಾಡಿಲ್ಲ. ಕ್ಯೂರಿಂಗ್ ಮಾಡಿಲ್ಲ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಗುತ್ತಿಗೆದಾರರು 10 ವರ್ಷ ನಿರ್ವಹಣೆ ಜವಾಬ್ದಾರಿ ಇರುವುದರಿಂದ ಯಾವುದೇ ತೊಂದರೆಯಾಗುವುದಿಲ್ಲ ಎಂದು ಹಾರಿಕೆಯ ಉತ್ತರ ನೀಡುತ್ತಾರೆ. ಅನಾಹುತವಾದರೆ ಯಾರು ಜವಾಬ್ದಾರಿ. ಪ್ರಾರಂಭದಲ್ಲಿಯೇ ಅದನ್ನು ಸರಿ ಪಡಿಸುವ ಕೆಲಸವಾಗಬೇಕು. ಶ್ರೀನಿವಾಸ್ ಸಾಮಾಜಿಕ ಕಾರ್ಯಕರ್ತ

ಭಯದ ವಾತಾವರಣ ಮೇಲ್ಸೇತುವೆ ಕಾಮಗಾರಿ ಪ್ರಾರಂಭವಾದ ನಂತರ ನಾವು ಭಯದ ವಾತಾವರಣದಲ್ಲಿ ಜೀವನ ನಡೆಸುತ್ತಿದ್ದೇವೆ. ವಾಹನ ದಟ್ಟಣೆ ಹೆಚ್ಚಾಗಿದ್ದು ಅಪಘಾತಗಳು ಹೆಚ್ಚಾಗಿವೆ. ರಸ್ತೆ ಪಕ್ಕದಲ್ಲಿರುವ ನಮ್ಮ ಮನೆಯ ಗೋಡೆಗೆ ಎರಡು ಬಾರಿ ವಾಹನ ಗುದ್ದಿ ಗೋಡೆ ಹಾಳಾಗಿದೆ. ಭಯದಲ್ಲಿ ರಾತ್ರಿ ನಿದ್ದೆ ಮಾಡಬೇಕಿದೆ. ಜತೆಗೆ ವಾಹನಗಳ ಕರ್ಕಶ ಹಾರನ್‌ನಿಂದಾಗಿ ನಿದ್ದೆ ಮಾಡುವುದು ಕಷ್ಟವಾಗಿದೆ. ಕಾಮಗಾರಿ ಮುಗಿದರೆ ಸಾಕು ಎನ್ನುವಂತಾಗಿದೆ. ಬಸಮ್ಮ ಊಟದ ಮೆಸ್ ಮಾಲೀಕಿ ಚಿಕ್ಕನಹಳ್ಳಿ ದೂಳುಮಯ ಮೇಲ್ಸೇತುವೆ ಕಾಮಗಾರಿ ನಿಗದಿತ ರೀತಿಯಲ್ಲಿ ನಡೆಯುತ್ತಿಲ್ಲ. ಮುಂಜಾಗ್ರತೆ ವಹಿಸದೆ ಕಾಮಗಾರಿ ನಡೆಸುತ್ತಿದ್ದಾರೆ. ಕಾಮಗಾರಿ ನಡೆಯುವ ಸ್ಥಳದಲ್ಲಿ ನೀರು ಹಾಕದೆ ಎಲ್ಲವೂ ದೂಳುಮಯವಾಗಿದ್ದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಅಪಘಾತ ಹೆಚ್ಚಾಗಿದ್ದು ಸಣ್ಣ ಪುಟ್ಟ ವಿಚಾರಕ್ಕೆ ವಾಹನ ಚಾಲಕರ ಮಧ್ಯೆ ಗಲಾಟೆ ಸಾಮಾನ್ಯವಾಗಿದೆ. ಸ್ಥಳೀಯರಿಗೆ ಹೆಚ್ಚಿನ ಕಿರಿಕಿರಿಯಾಗುತ್ತಿದೆ. ಬಸವರಾಜು ಟೀ ಅಂಗಡಿ ಚಿಕ್ಕನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT