ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು | ವರ್ಷದ ತೊಡಕು ಬಲು ಜೋರು

ಎಲ್ಲೆಡೆ ಮಾಂಸಕ್ಕೆ ಬೇಡಿಕೆ; ಬೆಲೆ ದುಬಾರಿ
Published 11 ಏಪ್ರಿಲ್ 2024, 7:07 IST
Last Updated 11 ಏಪ್ರಿಲ್ 2024, 7:07 IST
ಅಕ್ಷರ ಗಾತ್ರ

ತುಮಕೂರು: ಎಲ್ಲೆಡೆ ಯುಗಾದಿ ಹಬ್ಬದ ‘ವರ್ಷದ ತೊಡಕನ್ನು ಬುಧವಾರ ಆಚರಿಸಿದರು. ಸಾರ್ವಜನಿಕರು ಬೆಳಗಿನ ಜಾವದಿಂದಲೇ ಮಾಂಸದಂಗಡಿಗಳ ಮುಂದೆ ಸರತಿ ಸಾಲಿನಲ್ಲಿ ನಿಂತಿದ್ದರು. ಗ್ರಾಮೀಣ ಭಾಗದಲ್ಲಿ ಗುಡ್ಡೆ ಮಾಂಸ ಖರೀದಿಗೆ ಮುಗಿ ಬಿದ್ದಿದ್ದರು.

ನಗರದ ಕೋತಿತೋಪು, ಬೆಳಗುಂಬ ರಸ್ತೆ, ಹನುಮಂತಪುರ, ಮಂಡಿಪೇಟೆ, ಗುಬ್ಬಿ ರಸ್ತೆ, ರಿಂಗ್ ರಸ್ತೆ, ಕುಣಿಗಲ್‌ ರಸ್ತೆ ಸೇರಿದಂತೆ ವಿವಿಧೆಗಳಲ್ಲಿ ಮಾಂಸ ಮಾರಾಟ, ಖರೀದಿ ಜೋರಾಗಿತ್ತು. ಬಿಸಿಲಿನ ಪ್ರಮಾಣ ಹೆಚ್ಚಾಗಿದ್ದು, ಜನರಿಗೆ ಸಮಸ್ಯೆಯಾಗದಂತೆ ಅಂಗಡಿಗಳ ಮುಂದೆ ಶಾಮಿಯಾನ ಹಾಕಿ ಮಾಂಸ ಮಾರಾಟ ಮಾಡಲಾಯಿತು.

ಜಗನ್ನಾಥಪುರ, ಶೆಟ್ಟಿಹಳ್ಳಿ, ಗೂಳಹರಿವೆ, ಕೆಸರಡುಮಡು, ಹೊನ್ನುಡಿಕೆ, ಕುಮಂಚಿಪಾಳ್ಯ, ಮಲ್ಲಸಂದ್ರ, ಹೆಗ್ಗೆರೆ, ಬುಗುಡನಹಳ್ಳಿ ಸೇರಿದಂತೆ ಇನ್ನಿತರೆ ಹಳ್ಳಿಗಳಲ್ಲಿ ಗುಡ್ಡೆ ಮಾಂಸಕ್ಕೆ ಬೇಡಿಕೆ ಹೆಚ್ಚಾಗಿತ್ತು.

ಸಾರ್ವಜನಿಕರು ಮೀನು, ಕುರಿ, ಮೇಕೆ ಮತ್ತು ಕೋಳಿ ಮಾಂಸ ಖರೀದಿಯಲ್ಲಿ ತೊಡಗಿಸಿಕೊಂಡಿದ್ದ ದೃಶ್ಯಗಳು ಕಂಡು ಬಂದವು. ಮಾಂಸ ಖರೀದಿಗೆ ಮುಂದಾದವರಿಗೆ ಬೆಲೆ ಏರಿಕೆಯ ಬಿಸಿಯೂ ತಟ್ಟಿತು. ಕುರಿ, ಮೇಕೆ ಮಾಂಸ ಕೆ.ಜಿ ₹700, ₹800ಕ್ಕೆ ಏರಿಕೆಯಾಗಿತ್ತು. ರೆಡಿ ಚಿಕನ್‌ ಕೆ.ಜಿ ₹300ಗೆ ಮಾರಾಟವಾಯಿತು.

ಮಾಂಸದ ಅಂಗಡಿಗಳಲ್ಲಿ ಮಂಗಳವಾರ ರಾತ್ರಿಯಿಂದಲೇ ಕುರಿ, ಮೇಕೆ ಮತ್ತು ಕೋಳಿ ಮಾಂಸ ಮಾರಾಟಕ್ಕೆ ವ್ಯಾಪಾರಸ್ಥರು ಸಿದ್ಧತೆ ಮಾಡಿಕೊಂಡಿದ್ದರು. ಬೆಳಗಿನ ಜಾವದಿಂದ ವ್ಯಾಪಾರ ನಡೆಯಿತು. ಮಧ್ಯಾಹ್ನದ ವರೆಗೂ ಮಾಂಸದ ಅಂಗಡಿಗಳ ಮುಂದೆ ಜನ ಸಂದಣಿ ಕಡಿಮೆಯಾಗಲಿಲ್ಲ. ಗಂಟೆಗಟ್ಟಲೇ ಸರತಿ ಸಾಲಿನಲ್ಲಿ ನಿಂತು ಮಾಂಸ ಖರೀದಿಸಿದರು.

ಯುಗಾದಿ ಹಬ್ಬದ ಮಾರನೇ ದಿನ ವರ್ಷದ ತೊಡಕು ಆಚರಿಸುತ್ತಾರೆ. ಇದು ಯುಗಾದಿಯಷ್ಟೇ ಪ್ರಾಮುಖ್ಯತೆ ಪಡೆದುಕೊಂಡಿದೆ. ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಅಡೆತಡೆ, ತೊಡಕುಗಳು ಬಾರದಿರಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT