ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಲೆ ಎತ್ತಲಿದೆ ‘ಹೈಟೆಕ್’ ಬಸ್‌ ನಿಲ್ದಾಣ

ನ. 25ರಂದು ಬಸ್‌ ನಿಲ್ದಾಣ ತೆರವು; ಜೆ.ಸಿ.ರಸ್ತೆಯಲ್ಲಿರುವ ಕೆಎಸ್‌ಆರ್‌ಟಿಸಿ ಘಟಕ- 1ಕ್ಕೆ ಸ್ಥಳಾಂತರ
Last Updated 20 ನವೆಂಬರ್ 2019, 19:45 IST
ಅಕ್ಷರ ಗಾತ್ರ

ತುಮಕೂರು: ಸ್ಮಾರ್ಟ್‌ಸಿಟಿ ಯೋಜನೆಯಡಿ ನಗರದಲ್ಲಿ ಬಹುಮಹಡಿಯ ಹೈಟೆಕ್‌ ಬಸ್‌ ನಿಲ್ದಾಣ ನಿರ್ಮಾಣಗೊಳ್ಳಲಿದೆ. ತುಮಕೂರಿಗರ ಬಹುದಿನದ ಬೇಡಿಕೆ ಇನ್ನೆರಡು ವರ್ಷದಲ್ಲಿ ಈಡೇರಲಿದೆ.

ತುಮಕೂರು ಬಸ್‌ ನಿಲ್ದಾಣದಿಂದ ರಾಜ್ಯದ ವಿವಿಧೆಡೆಗೆ ನಿತ್ಯ ಸುಮಾರು 2,992 ಬಸ್‌ಗಳು ಹೊರಡುತ್ತವೆ. (ನಗರ ಸಾರಿಗೆ, ಸಾಮಾನ್ಯ ಸಾರಿಗೆ ಹಾಗೂ ವೇಗದೂತ ಸಾರಿಗೆಗಳು ಸೇರಿ). ರಾಜ್ಯದ ಬಹುತೇಕ ಜಿಲ್ಲೆಗಳಿಗೂ ಈ ನಿಲ್ದಾಣ ಸಂಪರ್ಕ ಕೊಂಡಿಯಂತಿದೆ. ಆದರೂ ಬಸ್‌ ನಿಲ್ದಾಣ ಮೂಲ ಸೌಲಭ್ಯಗಳ ಕೊರತೆಯಿಂದ ಬಳಲುತ್ತಿತ್ತು. ಸಮರ್ಪಕ ಶೌಚಾಲಯ ವ್ಯವಸ್ಥೆ, ತಂಗಲು ಕೊಠಡಿಗಳಿಲ್ಲದೆ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದರು. ಇದನ್ನು ಮನಗಂಡು ಸ್ಮಾರ್ಟ್‌ ಸಿಟಿ ಯೋಜನೆಯಡಿ ಹೈಟೆಕ್‌ ಬಸ್‌ ನಿಲ್ದಾಣ ನಿರ್ಮಿಸಲಾಗುತ್ತಿದೆ.

25ಕ್ಕೆ ತೆರವು: ಕಾಮಗಾರಿ ಕಾರಣ ಈಗಿರುವ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣವನ್ನು ನ. 25ರಂದು ತೆರವುಗೊಳಿಸಿ ಜೆ.ಸಿ.ರಸ್ತೆಯಲ್ಲಿರುವ ಕೆಎಸ್‌ಆರ್‌ಟಿಸಿ ಘಟಕ- 1ರ ಸ್ಥಳಕ್ಕೆ ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗುತ್ತಿದೆ. ಈ ಹಿಂದೆ ನ. 18ರಂದು ಬಸ್‌ ನಿಲ್ದಾಣ ತೆರವುಗೊಳಿಸಲು ಜಿಲ್ಲಾಧಿಕಾರಿ ಗಡುವು ನೀಡಿದ್ದರು. ಬದಲಾಗುವ ಬಸ್‌ ಸಂಚಾರ ಮಾರ್ಗಗಳಲ್ಲಿ ಸ್ಮಾರ್ಟ್‌ಸಿಟಿ ಕಾಮಗಾರಿಗಳು ತ್ವರಿತವಾಗಿ ಪೂರ್ಣಗೊಳ್ಳದ ಕಾರಣ ಹಾಗೂ ತಾಂತ್ರಿಕ ಸಮಸ್ಯೆಯ ಕಾರಣಕ್ಕೆ ಸ್ಥಳಾಂತರ ತಡವಾಗಿದೆ.

ನಗರದ ಜೆ.ಸಿ.ರಸ್ತೆ, ಪ್ರಶಾಂತ್ ಚಿತ್ರಮಂದಿರ ಬಳಿ, ಅಶೋಕ ರಸ್ತೆಗಳ ಬದಿಯಲ್ಲಿರುವ ತಳ್ಳುಗಾಡಿ ಅಂಗಡಿ, ಹಣ್ಣಿನ ಅಂಗಡಿ ಸೇರಿದಂತೆ ಇತರ ಅಂಗಡಿಗಳನ್ನು ಮಹನಗರ ಪಾಲಿಕೆಯಿಂದ ತೆರವುಗೊಳಿಸುವ ಕಾರ್ಯ ಪ್ರಗತಿಯಲ್ಲಿದೆ. ಅಲ್ಲದೆ ಅಶೋಕ ರಸ್ತೆಯಿಂದ ತಾತ್ಕಾಲಿಕ ಬಸ್ ನಿಲ್ದಾಣಕ್ಕೆ ಪ್ರವೇಶಿಸುವ ದ್ವಾರದ ಬಲಬದಿಯಲ್ಲಿ ತೆರೆದ ಚರಂಡಿಗಳಿವೆ. ವಾಹನಗಳ ಸುಗಮ ಸಂಚಾರಕ್ಕೆ ಅನುವಾಗುವಂತೆ ಚರಂಡಿಗಳ ಮೇಲ್ಭಾಗದಲ್ಲಿ ಸ್ಲ್ಯಾಬ್‌ಗಳನ್ನು ಅಳವಡಿಸಲಾಗುತ್ತಿದೆ.

ವಿನಾಯಕ ಮಾರುಕಟ್ಟೆಯಲ್ಲಿ ಪಾರ್ಕಿಂಗ್ ವ್ಯವಸ್ಥೆ: ತಾತ್ಕಾಲಿಕ ಬಸ್‌ ನಿಲ್ದಾಣದ ಎರಡೂ ಕಡೆ ದ್ವಿಚಕ್ರ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಸುಮಾರು 200ರಿಂದ 300 ದ್ವಿಚಕ್ರವಾಹನಗಳು ಮಾತ್ರ ಇಲ್ಲಿ ನಿಲ್ಲಬಹುದು. ಹಾಗಾಗಿ ಸ್ಥಳದ ಅಭಾವ ಇರುವುದರಿಂದ ವಿನಾಯಕ ಮಾರುಕಟ್ಟೆಯಲ್ಲಿ ಸಾರ್ವಜನಿಕರ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಯೋಜಿಸಲಾಗಿದೆ. ಗುಬ್ಬಿ ವೀರಣ್ಣ ಕಲಾ ಕ್ಷೇತ್ರದ ಮುಂಭಾಗ ನಿಲ್ಲುವ ಭಾರಿ ವಾಹನಗಳಿಗೆ ನಗರದ ಒಳಗಡೆ ಪಾರ್ಕಿಂಗ್‌ಗೆ ಅವಕಾಶ ನೀಡದಂತೆ ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ.

ಅಲ್ಲದೆ ಮಂಡಿಪೇಟೆ ಸೇರಿದಂತೆ ನಗರದ ವಹಿವಾಟು ಪ್ರದೇಶಗಳಿಗೆ ಸರಕನ್ನು ತರುವ ಭಾರಿ ವಾಹನಗಳಿಗೆ ರಾತ್ರಿ 9ರಿಂದ ಬೆಳಿಗ್ಗೆ 8ರವರೆಗೆ ಒಳ ಪ್ರವೇಶಿಸಲು ಅವಕಾಶ ನೀಡಲು ನಿರ್ಧರಿಸಲಾಗಿದೆ. ಇದರಿಂದ ನಗರದ ಸಂಚಾರ ದಟ್ಟಣೆಯೂ ತಕ್ಕಮಟ್ಟಿಗೆ ತಗ್ಗಬಹುದು. ಹೀಗೆ ಹೈಟೆಕ್ ಬಸ್ ನಿಲ್ದಾಣ ಕಾಮಗಾರಿ ನಡೆಯಲು ಅಗತ್ಯವಾದ ಮುನ್ನಚ್ಚರಿಕೆಗಳನ್ನು ಅಧಿಕಾರಿಗಳು ಕೈಗೊಂಡಿದ್ದಾರೆ.

ಇನ್ನು ಅಶೋಕ ರಸ್ತೆ, ಗುಬ್ಬಿ ವೀರಣ್ಣ ರಸ್ತೆ, ಜೆ.ಸಿ.ರಸ್ತೆಯಲ್ಲಿ ಸ್ಮಾರ್ಟ್‌ಸಿಟಿ ಕಾಮಗಾರಿಯೂ ಭರದಿಂದ ಸಾಗಿವೆ. ಶೀಘ್ರವೇ ಅಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದ್ದು, ಆ ರಸ್ತೆಗಳೂ ಸುಗಮ ಸಂಚಾರಕ್ಕೆ ಮುಕ್ತಗೊಳ್ಳಲಿವೆ.

6 ಮಹಡಿಯಲ್ಲಿ ನಿರ್ಮಾಣ
ಒಟ್ಟು 6 ಅಂತಸ್ತುಗಳನ್ನು ಒಳಗೊಂಡ ಹೈಟೆಕ್‌ ಬಸ್‌ ನಿಲ್ದಾಣ ₹ 82 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ. 4 ಎಕರೆ ವಿಸ್ತೀರ್ಣದಲ್ಲಿ ಬಸ್‌ ನಿಲ್ದಾಣ ತಲೆಎತ್ತಲಿದೆ. ಕೆಎಸ್‌ಆರ್‌ಟಿಸಿ ಹಾಗೂ ಸ್ಮಾರ್ಟ್‌ಸಿಟಿಗೆ ಆದಾಯ ಬರುವಂತೆ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗುತ್ತಿದೆ.

2 ಕೆಳ ಅಂತಸ್ತುಗಳು ನಿರ್ಮಾಣಗೊಳ್ಳಲಿವೆ. ಅಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗುವುದು. ಅದರ ಮೇಲೆ ನಾಲ್ಕು ಅಂತಸ್ತು ನಿರ್ಮಾಣಗೊಳ್ಳಲಿದೆ. ಮೊದಲ ಅಂತಸ್ತಿನಲ್ಲಿ ನಗರ ಸಾರಿಗೆ ನಿಲ್ದಾಣ, 2ನೇ ಮಹಡಿಯಲ್ಲಿ ವೇಗದೂತ ಬಸ್‌ ನಿಲ್ದಾಣ, ಮೇಲಿನ 2 ಮಹಡಿಗಳಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗುವುದು ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಗಜೇಂದ್ರ ಕುಮಾರ್ ತಿಳಿಸಿದರು.

ತಾತ್ಕಾಲಿಕ ಬಸ್ ನಿಲ್ದಾಣಕ್ಕೆ ಬರುವ – ನಿರ್ಗಮಿಸುವ ಮಾರ್ಗಗಳ ವಿವರ

ವೇಗದೂತ ಸಾರಿಗೆ
ಮಾರ್ಗ; ಆಗಮನ; ನಿರ್ಗಮನ

ಬೆಂಗಳೂರು ಕಡೆಯಿಂದ;ಭದ್ರಮ್ಮ ಛತ್ರ- ಟೌನ್‌ಹಾಲ್ ವೃತ್ತ- ಅಶೋಕ ರಸ್ತೆ- ಬಸವೇಶ್ವರ ರಸ್ತೆ ಮೂಲಕ ಪ್ರವೇಶ;ಗುಬ್ಬಿ ವೀರಣ್ಣ ಕಲಾಕ್ಷೇತ್ರ ರಸ್ತೆಯ ನಿರ್ಗಮನ ದ್ವಾರದಿಂದ ಚರ್ಚ್ ವೃತ್ತ- ಕೋಡಿ ಬಸವೇಶ್ವರ ವೃತ್ತ- ಜಿಲ್ಲಾಧಿಕಾರಿ ಕಚೇರಿ ವೃತ್ತ- ಕೋತಿ ತೋಪು-ಶಿವಕುಮಾರ ಸ್ವಾಮೀಜಿ ವೃತ್ತ- ತುಮಕೂರು ವಿಶ್ವವಿದ್ಯಾಲಯ.

ಮೈಸೂರು, ಕುಣಿಗಲ್, ಹೊಸದುರ್ಗ, ತಿಪಟೂರು, ತುರುವೇಕೆರೆ, ಶಿವಮೊಗ್ಗ ಕಡೆಯಿಂದ;ಕಾಲ್‌ಟೆಕ್ಸ್ ವೃತ್ತ- ಜೆ.ಸಿ.ರಸ್ತೆ-ಬಸವೇಶ್ವರ ರಸ್ತೆ ಮೂಲಕ ಪ್ರವೇಶ;ಗುಬ್ಬಿ ವೀರಣ್ಣ ಕಲಾಕ್ಷೇತ್ರ ರಸ್ತೆಯ ನಿರ್ಗಮನ ದ್ವಾರದಿಂದ – ಜೆ.ಸಿ.ರಸ್ತೆ- ಕಾಲ್‌ಟೆಕ್ಸ್ ವೃತ್ತ ಮೂಲಕ ವಿವಿಧ ಕಡೆಗೆ.

ಶಿರಾ, ಮಧುಗಿರಿ, ಗೌರಿಬಿದನೂರು, ಪಾವಗಡ ಕಡೆಯಿಂದ;ಕೋಡಿ ಬಸವೇಶ್ವರ ವೃತ್ತ- ಚರ್ಚ್ ವೃತ್ತ- ಅಶೋಕ ರಸ್ತೆ- ಬಸವೇಶ್ವರ ರಸ್ತೆ ಮೂಲಕ ಪ್ರವೇಶ;ಗುಬ್ಬಿ ವೀರಣ್ಣ ಕಲಾಕ್ಷೇತ್ರ ರಸ್ತೆಯ ನಿರ್ಗಮನ ದ್ವಾರದಿಂದ ಚರ್ಚ್ ವೃತ್ತ- ಕೋಡಿ ಬಸವೇಶ್ವರ ವೃತ್ತದ ಮೂಲಕ ವಿವಿಧ ಕಡೆಗೆ.

ನಗರ ಸಾರಿಗೆ
ಮಾರ್ಗ;ಆಗಮನ;ನಿರ್ಗಮನ

ಕ್ಯಾತಸಂದ್ರ, ಸಿದ್ಧಗಂಗಾ ಮಠ, ಬಡ್ಡಿಹಳ್ಳಿ, ದೇವರಾಯ ಪಟ್ಟಣ, ಡಾಬಸ್‌ಪೇಟೆ, ನೆಲಮಂಗಲ ಮತ್ತು ಗೂಳರಿವೆ, ಶೆಟ್ಟಿಹಳ್ಳಿ ಕಡೆಯಿಂದ;ಭದ್ರಮ್ಮ ಛತ್ರ- ಟೌನ್ ಹಾಲ್ ವೃತ್ತ- ಅಶೋಕ ರಸ್ತೆ- ಬಸವೇಶ್ವರ ರಸ್ತೆ ಮೂಲಕ ಪ್ರವೇಶ; ಗುಬ್ಬಿ ವೀರಣ್ಣ ಕಲಾಕ್ಷೇತ್ರ ರಸ್ತೆಯ ನಿರ್ಗಮನ ದ್ವಾರದಿಂದ – ಚರ್ಚ್ ವೃತ್ತ- ಅಶೋಕ ರಸ್ತೆ- ಟೌನ್‌ಹಾಲ್ ವೃತ್ತ- ಭದ್ರಮ್ಮ ಛತ್ರದ ಮೂಲಕ ವಿವಿಧ ಕಡೆಗೆ.

ಗುಬ್ಬಿ, ಮರಳೂರು ದಿಣ್ಣೆ, ಗೂಳೂರು ಕಡೆಯಿಂದ;ಕಾಲ್‌ಟೆಕ್ಸ್ ವೃತ್ತ - ಜೆ.ಸಿ ರಸ್ತೆ- ಬಸವೇಶ್ವರ ರಸ್ತೆ ಮೂಲಕ ಪ್ರವೇಶ;ಗುಬ್ಬಿ ವೀರಣ್ಣ ಕಲಾಕ್ಷೇತ್ರ ರಸ್ತೆಯ ನಿರ್ಗಮನ ದ್ವಾರದಿಂದ – ಜೆ.ಸಿ.ರಸ್ತೆ- ಕಾಲ್‌ಟೆಕ್ಸ್ ವೃತ್ತ ಮೂಲಕ ವಿವಿಧ ಕಡೆಗೆ.

ಊರುಕೆರೆ, ಯಲ್ಲಾಪುರ, ಬೆಳಗುಂಬ ಕಡೆಯಿಂದ;ಕೋಡಿ ಬಸವೇಶ್ವರ ವೃತ್ತ- ಚರ್ಚ್ ವೃತ್ತ- ಅಶೋಕ ರಸ್ತೆ- ಬಸವೇಶ್ವರ ರಸ್ತೆ ರಸ್ತೆಯ ಮೂಲಕ ಪ್ರವೇಶ;ಗುಬ್ಬಿ ವೀರಣ್ಣ ಕಲಾಕ್ಷೇತ್ರ ರಸ್ತೆಯ ನಿರ್ಗಮನ ದ್ವಾರದಿಂದ- ಚರ್ಚ್ ವೃತ್ತ- ಕೋಡಿ ಬಸವೇಶ್ವರ ವೃತ್ತದ ಮೂಲಕ ವಿವಿಧ ಕಡೆಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT