ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಸುವಿನ ಆರಾಧನೆಯಲ್ಲಿ ಮಿಂದ ಕ್ರೈಸ್ತರು

ಜಿಲ್ಲೆಯ ಎಲ್ಲೆಡೆ ಕ್ರಿಸ್ಮಸ್ ಸಂಭ್ರಮ; ಹೊಸಬಟ್ಟೆ ತೊಟ್ಟು ಚರ್ಚ್‌ಗಳತ್ತ ಧಾವಿಸಿದ ಭಕ್ತರು
Last Updated 26 ಡಿಸೆಂಬರ್ 2019, 10:20 IST
ಅಕ್ಷರ ಗಾತ್ರ

ತುಮಕೂರು: ವಿಶ್ವಕ್ಕೆ ಶಾಂತಿ ಸಂದೇಶ ಸಾರಿದ ಏಸುಕ್ರಿಸ್ತನ ಜನ್ಮದಿನವನ್ನು ಜಿಲ್ಲೆಯ ಎಲ್ಲೆಡೆ ಸಂಭ್ರಮದಿಂದ ಆಚರಿಸಲಾಯಿತು. ಎಲ್ಲ ಚರ್ಚ್‌ಗಳಲ್ಲೂ ಏಸುವನ್ನು ಆರಾಧಿಸಿ ಧನ್ಯತೆಯ ಭಾವ ಮೆರೆದರು.

ಕ್ರೈಸ್ತರು ಮುಂಜಾನೆಯೇ ಹೊಸಬಟ್ಟೆ ತೊಟ್ಟು ಚರ್ಚ್‌ಗಳತ್ತ ಧಾವಿಸಿದರು. ಪರಸ್ಪರ ಹಬ್ಬದ ಶುಭಾಶಯ ಕೋರಿ ಪ್ರಾರ್ಥನೆ ಸಲ್ಲಿಸಿದರು. ಏಸು ಜನ್ಮದಿನದ ಅಂಗವಾಗಿ ನೆರೆದಿದ್ದವರಿಗೆ ಕೇಕ್‌ ವಿತರಿಸಿ ಸಂಭ್ರಮಿಸಿದರು.

ಕ್ರಿಸ್ಮಸ್‌ ಸ್ವಾಗತಕ್ಕಾಗಿ ವಾರದಿಂದಲೇ ನಗರದಲ್ಲಿ ಸಿದ್ಧತೆಗಳು ಭರದಿಂದ ಸಾಗಿದ್ದವು. ನಗರದಲ್ಲಿರುವ 170 ವರ್ಷಗಳ ಇತಿಹಾಸ ಸಾರುವ ವೆಸ್ಲಿ ಚರ್ಚ್‌, ಶಿರಾ ಗೇಟ್‌ ಸಮೀಪದ ಟಾಮ್ಲಿನ್ಸನ್, ಗಾಯತ್ರಿ ಚಿತ್ರಮಂದಿರ ಸಮೀಪದ ಸಿಎಸ್‌ಐ ಚರ್ಚ್‌, ಹೊರಪೇಟೆಯ ಆರ್‌.ಸಿ ಲೂರ್ದು ಮಾತೆ ದೇವಾಲಯ, ರೈಲ್ವೆ ನಿಲ್ದಾಣ ಸಮೀಪದ ಶಾಂತಿನಗರ ಚರ್ಚ್‌, ಕುರಿಪಾಳ್ಯ ಸ್ಟೀನ್ ಚರ್ಚ್‌, ದೇವನೂರಿನ ಸಾಡೇ ಸ್ಮಾರಕ ಚರ್ಚ್, ಬೆತ್ತಲೂರಿನ ಬೇತಲ್ ಚರ್ಚ್, ಸಾಡೇಪುರದ ಚರ್ಚ್‌ ಸೇರಿದಂತೆ ನಗರದ ಹಲವು ಚರ್ಚ್‌ಗಳಲ್ಲಿ ಕ್ರೈಸ್ತರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಏಸು ಮಧ್ಯರಾತ್ರಿ ಹುಟ್ಟಿದ್ದರಿಂದ ಅದರ ಸಂಕೇತವಾಗಿ ಹೊರಪೇಟೆಯ ಆರ್‌.ಸಿ ಲೂರ್ದು ಮಾತೆ ದೇವಾಲಯದಲ್ಲಿ ಪ್ರತಿವರ್ಷ ರಾತ್ರಿ 12 ಗಂಟೆಗೆ (24ರ ರಾತ್ರಿ) ಪ್ರಾರ್ಥನೆ ಸಲ್ಲಿಸಿ ವಿಶೇಷವಾಗಿ ಆಚರಣೆ ಮಾಡಲಾಗುತ್ತದೆ. ಉಳಿದ ಚರ್ಚ್‌ಗಳಲ್ಲಿ ಬೆಳಿಗ್ಗೆ ಪ್ರಾರ್ಥನೆ ಸಲ್ಲಿಸಲಾಯಿತು.

ಚರ್ಚ್‌ಗಳಲ್ಲಿ ಪ್ರಮುಖ ಆಕರ್ಷಣೆ ಏಸುಕ್ರಿಸ್ತನ ಜನ್ಮವೃತ್ತಾಂತ ಸಾರುವ ಗೋದಲಿ. ಪುಟ್ಟ ಪುಟ್ಟ ಗೊಂಬೆಗಳನ್ನು ಆಕರ್ಷಕವಾಗಿ ಪೇರಿಸಿಡಲಾಗಿತ್ತು. ಗುಡಿಸಲಿನಲ್ಲಿ ಬಾಲ ಯೇಸು ಜನಿಸಿದ ಸಂದರ್ಭದಿಂದ ಹಿಡಿದು ಆತನನ್ನು ಶಿಲುಬೆಗೇರಿಸುವವರೆಗಿನ ಸಂದರ್ಭಗಳನ್ನು ತಮ್ಮದೇ ಶೈಲಿಯಲ್ಲಿ ಕಟ್ಟಿಕೊಟ್ಟಿದ್ದಾರೆ.

ಹಬ್ಬದ ಕೇಂದ್ರಬಿಂದು ಕ್ರಿಸ್ಮಸ್‌ ಟ್ರೀಗಳು ಎಲ್ಲರನ್ನು ಸ್ವಾಗತಿಸುತ್ತಿವೆ. ಕೃತಕ ಹಾಗೂ ಪ್ರಕೃತಿದತ್ತವಾದ ಕ್ರಿಸ್ಮಸ್ ಟ್ರೀಗೆ ಅಲಂಕಾರ ಮಾಡಲಾಗಿದೆ. ಇನ್ನು ನಕ್ಷತ್ರಾಕಾರದ ಆಕಾಶಬುಟ್ಟಿಗಳು ಕಣ್ಮನ ಸೆಳೆಯುತ್ತಿವೆ.

ಖಾದ್ಯ ವೈವಿಧ್ಯ: ಕ್ರೈಸ್ತರ ಪ್ರತಿ ಮನೆಗಳಲ್ಲಿ ಕ್ರಿಸ್‌ಮಸ್‌ ಹಬ್ಬದ ಅಂಗವಾಗಿ ವೈವಿಧ್ಯ ಖಾದ್ಯ ತಯಾರಿಸಲಾಗುತ್ತದೆ. ಎಲ್ಲ ಧರ್ಮಿಯರನ್ನೂ, ಸ್ನೇಹಿತರನ್ನು ಮನೆಗೆ ಆಹ್ವಾನಿಸಿ ಉಟೋಪಚಾರ ಮಾಡುವುದು ಈ ಹಬ್ಬದ ವಿಶೇಷ. ಕಲ್ಕಲ, ರೋಸ್‌ಪೊಪ್ಪು, ಕರ್ಜಿಕಾಯಿ, ರವೆವುಂಡೆ, ಫ್ಲಂ ಕೇಕ್‌ ಕ್ರಿಸ್‌ಮಸ್‌ ಹಬ್ಬದಲ್ಲಿ ತಯಾರಾಗುವ ವಿಶಿಷ್ಟ ಖಾದ್ಯಗಳು. ಬೇಕರಿಗಳಲ್ಲಿ ಮಾರಾಟಕ್ಕಿಟ್ಟಿರುವ ವಿಶಿಷ್ಟ ಕೇಕ್‌ಗಳನ್ನು ಕೇಕ್‌ ಪ್ರಿಯರನ್ನು ಸೆಳೆಯುತ್ತಿವೆ.

ಚರ್ಚ್‌ಗಳು ವಿದ್ಯುದೀಪಗಳಿಂದ ವಿಶೇಷವಾಗಿ ಅಲಂಕೃತಗೊಂಡು ಕಣ್ಮನ ಸೆಳೆಯುತ್ತಿವೆ. ಬಡವರು, ಶ್ರೀಮಂತರು ಎನ್ನದೇ ಎಲ್ಲರೂ ತಮ್ಮ ಶಕ್ತ್ಯಾನುಸಾರ ಈ ಹಬ್ಬ ಆಚರಿಸಿದರು. ಕೆಲ ಚರ್ಚ್‌ಗಳಲ್ಲಿ ಸಂಜೆ ಕ್ರಿಸ್‌ಮಸ್‌ ಕ್ರೀಡೆಗಳ ನಡೆದವು. ವಿಜೇತರಿಗೆ ಉಡುಗೊರೆ ನೀಡಲಾಯಿತು.

*

ಅಶಕ್ತರಿಗೆ ಬಟ್ಟೆ ದಾನ

ಕ್ರಿಸ್‌ಮಸ್‌ ಎಂದರೆ ಸಂಭ್ರಮ ಮಾತ್ರವಲ್ಲ, ಪರರ ದುಃಖದಲ್ಲಿ ಭಾಗಿಯಾಗುವುದು, ಹಸಿದವರಿಗೆ, ಬಡತನದ ಬೇಗೆಯಲ್ಲಿರುವವರಿಗೆ ನೆರವು ನೀಡುವ ಹಬ್ಬ. ಕ್ರಿಸ್ಮಸ್‌ ದಿನ ಎಲ್ಲರೂ ಹೊಸಬಟ್ಟೆ ಹಾಕಿ ಏಸುವಿನ ಜನ್ಮದಿನವನ್ನು ಸಂಭ್ರಮದಿಂದ ಬರಮಾಡಿಕೊಳ್ಳಬೇಕು ಎಂಬ ಉದ್ದೇಶದಿಂದ ವಾರದ ಮುಂಚೆಯೇ ಅಶಕ್ತರಿಗೆ ಮತ್ತು ಬಡವರಿಗೆ ಬಟ್ಟೆ, ಉಡುಗೊರೆ, ಹಣ ನೀಡುವ ಮೂಲಕ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT