ಕುಣಿಗಲ್: ತಾಲ್ಲೂಕಿನ ಭಕ್ತರಹಳ್ಳಿ ಸರ್ಕಾರಿ ಆಸ್ಪತ್ರೆ, ವಸತಿ ಶಾಲೆ ಮತ್ತು ಪಟ್ಟಣದ ಮಹಾತ್ಮ ಗಾಂಧಿ ಸರ್ಕಾರಿ ಪದವಿಪೂರ್ವ ಕಾಲೇಜು, ಪುರಸಭೆ ಮತ್ತು ತಾಲ್ಲೂಕು ಆಸ್ಪತ್ರೆಗೆ ಮಂಗಳವಾರ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಹಾತ್ಮಗಾಂಧಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಚರ್ಚೆ ನಡೆಸಿದಾಗ ಕೆಲ ವಿಷಯಗಳಿಗೆ ಶಿಕ್ಷಕರು ಇಲ್ಲದಿರುವುದು ಕಂಡುಬಂತು. ಸೂಕ್ತ ವ್ಯವಸ್ಥೆಗೆ ಕ್ರಮ ತೆಗೆದುಕೊಳ್ಳಲು ಕ್ಷೇತ್ರ ಶಿಕ್ಷಣಾಧಿಕಾರಿ ಬೋರೆಗೌಡ ಅವರಿಗೆ ಸೂಚನೆ ನೀಡಿದರು.
ಉಪಪ್ರಾಂಶು ಪಾಲೆ ತೇಜಾವತಿ ಅವರೊಂದಿಗೆ ಮಾತನಾಡಿ, ‘ನಿಮ್ಮ ಮಕ್ಕಳು ಇಂಜಿನಿಯರ್ ಓದುತ್ತಿದ್ದಾರೆ. ಆದರೆ ಸರ್ಕಾರಿ ಶಾಲೆಯ ನಿಮ್ಮ ಮಕ್ಕಳು ಎಂಜಿನಿಯರ್ ಆಗುವುದು ಬೇಡವೇ? ಮಕ್ಕಳ ಹಾಜರಾತಿ, ಶೈಕ್ಷಣಿಕ ಪ್ರಗತಿ ಬಗ್ಗೆ ಗಮನಹರಿಸಬೇಕು. ನಿರಂತರ ಗೈರಾಗಿರುವ ಮಕ್ಕಳ ಪೋಷಕರೊಂದಿಗೆ ಚರ್ಚಿಸಬೇಕು’ ಎಂದು ಸೂಚನೆ ನೀಡಿದರು.
ಪುರಸಭೆಗೆ ಭೇಟಿ ನೀಡಿ, ತೆರಿಗೆ ವಸೂಲಾತಿಯಲ್ಲಿ ಜಿಲ್ಲೆಗೆ ಹತ್ತನೇ ಸ್ಥಾನದಲ್ಲಿರುವ ಬಗ್ಗೆ ಸೇರಿದಂತೆ ಸರ್ಕಾರಿ ಯೋಜನೆಗಳ ಅನುಷ್ಠಾನದಲ್ಲಿ ಕಳಪೆ ಸಾಧನೆ ಮಾಡಿರುವ ಕಾರಣ ಸೋಮವಾರ ನಡೆದ ಕೆಡಿಪಿ ಸಭೆಯಲ್ಲಿ ಕಾರಣ ಕೇಳಿ ನೋಟೀಸ್ ಜಾರಿ ಮಾಡಲು ನಿರ್ಣಯ ಕೈಗೊಳ್ಳಲಾಗಿದ್ದು, ವಾರದಲ್ಲಿ ಉತ್ತರ ಬರದಿದ್ದಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಾಧಿಕಾರಿ ಶಿವಪ್ರಸಾದ್ ಮತ್ತು ಕಂದಾಯ ಅಧಿಕಾರಿ ಮುನಿಯಪ್ಪ ಅವರಿಗೆ ಎಚ್ಚರಿಕೆ ನೀಡಿದರು.
ತಾಲ್ಲೂಕು ಆಸ್ಪತ್ರೆಯಲ್ಲಿ ಕಿಟಕಿ ಗಾಜುಗಳು ಒಡೆದಿರುವ ಬಗ್ಗೆ, ಸೊಳ್ಳೆ ಹಾವಳಿ ಕಂಡು ಫಾಗಿಂಗ್ ಮಾಡಲೂ ಸೂಚಿಸಿದರು. ಡೆಂಗಿ ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳಲು ಸೂಚಿಸಿದರು.
ತಾಲ್ಲೂಕು ಆಸ್ಪತ್ರೆಯಲ್ಲಿ ನರ್ಸ್‌ಗಳ ಕೊರತೆ ಮತ್ತು ತಾಯಿ ಮಗು ತುರ್ತು ಚಿಕಿತ್ಸಾ ವಾಹನ ಇಲ್ಲದಿರುವ ಬಗ್ಗೆ ಸಾರ್ವಜನಿಕರು ಗಮನ ಸೆಳೆದಾಗ, ಸಮಸ್ಯೆಗೆ ಸ್ಪಂದಿಸುವುದಾಗಿ ತಿಳಿಸಿದರು.
ನಂತರ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ‘ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಹೆಚ್ಚಿಸಲು ಅಗತ್ಯ ಕ್ರಮ ತೆಗೆದುಕೊಳ್ಳಲು ನಿರ್ಣಯ ಕೈಗೊಳ್ಳಲಾಗಿದೆ. ಮೊದಲಿಗೆ ವಿದ್ಯಾರ್ಥಿಗಳ ಹಾಜರಾತಿ ಬಗ್ಗೆ ಗಮನ ಹರಿಸಲು, ಡಿಸೆಂಬರ್ ಒಳಗೆ ಪಾಠಗಳನ್ನು ಮುಗಿಸಿ, ಜನವರಿಯಿಂದ ಪುನಾವರ್ತನೆಗೆ ಸೂಚನೆ ನೀಡಲಾಗಿದೆ. ಸಿಸಿ ಟಿವಿ ಕ್ಯಾಮರ ಇರಲಿ, ಬಿಡಲಿ ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ ಯಶಸ್ವಿಯಾಗುವಂತೆ ಸಿದ್ಧಪಡಿಸಲು ಶಿಕ್ಷಕರಿಗೆ ಸೂಚನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ನಿರಂತರವಾಗಿ ಮುಖ್ಯ ಶಿಕ್ಷಕರ ಸಭೆ ನಡೆಸಿ, ವ್ಯವಸ್ಥಿತ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ತಿಳಿಸಿದರು.
ವರ್ಗಾವಣೆ ಪ್ರಕ್ರಿಯೆಗಳು ನಡೆದಿರುವುದರಿಂದ ತಾಲ್ಲೂಕಿನಲ್ಲಿ ಶಿಕ್ಷಕರ ಕೊರತೆ ಇರುವುದರಿಂದ ಅತಿಥಿ ಶಿಕ್ಷಕರ ನೇಮಕಾತಿ ಜತೆಗೆ ಪರ್ಯಾಯ ವ್ಯವಸ್ಥೆಗೆ ಅಧಿಕಾರಿಗಳಿಗೆ ಸಲಹೆ ನೀಡಲಾಗಿದೆ ಎಂದರು.
ತಹಶೀಲ್ದಾರ್ ರಶ್ಮೀ, ತಾಲ್ಲೂಕು ಆರೋಗ್ಯಾಧಿಕಾರಿ ಮರಿಯಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಬೋರೆಗೌಡ, ಆಡಳಿತ ವೈದ್ಯಾಧಿಕಾರಿ ಗಣೇಶ್ ಬಾಬು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.