ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ಮುಂಜಾಗ್ರತಾ ಕ್ರಮಕ್ಕೆ ತುಮಕೂರು ಡಿ.ಸಿ. ಸೂಚನೆ

Last Updated 11 ಮಾರ್ಚ್ 2020, 14:29 IST
ಅಕ್ಷರ ಗಾತ್ರ

ತುಮಕೂರು: ಬೆಂಗಳೂರು ನಗರದಲ್ಲಿ 4 ಜನರಲ್ಲಿ ಕೋವಿಡ್‌ ವೈರಸ್ ದೃಢಪಟ್ಟಿದೆ. ತುಮಕೂರು ನಗರವು ಬೆಂಗಳೂರಿಗೆ ಸಮೀಪವಿರುವುದರಿಂದ ಜಿಲ್ಲೆಯಲ್ಲಿ ವೈರಸ್ ಹರಡದಂತೆ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೆ.ರಾಕೇಶ್‍ಕುಮಾರ್ ಅವರು ಅಧಿಕಾರಿಗಳಿಗೆ ಸೂಚಿಸಿದರು.

ವೈರಸ್ ನಿಯಂತ್ರಣ ಕುರಿತ ಸಭೆಯಲ್ಲಿ ಮಾತನಾಡಿದ ಅವರು, ವಿದೇಶದಿಂದ ಬರುವ ಜಿಲ್ಲೆಯ ಜನರನ್ನು ಪರೀಕ್ಷಿಸಿ, ವೈರಸ್ ಲಕ್ಷಣ ಕಂಡು ಬಂದಲ್ಲಿ ಕೂಡಲೇ ಅವರನ್ನು 14 ದಿನಗಳಿಂದ 28 ದಿನಗಳವರೆಗೆ ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗೆ ಪ್ರತ್ಯೇಕವಾಗಿ ವೈರಸ್ ಹರಡುವಿಕೆಯನ್ನು ತಡೆಯುವ ಕುರಿತು ಒಂದು ಸುತ್ತು ತರಬೇತಿ ನೀಡಲಾಗಿದೆ. ತಾಲ್ಲೂಕು ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಅವರು ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗೆ ತರಬೇತಿ ನೀಡಲಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಚಂದ್ರಿಕಾ ಅವರು ತಿಳಿಸಿದರು.

ವೈರಸ್ ಇರುವ ಬಗ್ಗೆ ಅನುಮಾನ ಬಂದ ವ್ಯಕ್ತಿಗಳ ಮಾದರಿಯನ್ನು ಸಂಗ್ರಹಿಸಿ ಹಾಸನ, ಬೆಂಗಳೂರು ಹಾಗೂ ಮೈಸೂರು ವೈದ್ಯಕೀಯ ಕಾಲೇಜುಗಳಲ್ಲಿನ ಪ್ರಯೋಗಾಲಯಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದರು.

ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ವೈದ್ಯಾಧಿಕಾರಿಗಳು ಅನುಮತಿ ಪಡೆಯದೇ ರಜೆ ತೆಗೆದುಕೊಳ್ಳುವ ಆಗಿಲ್ಲ. ದಿನದ 24 ಗಂಟೆಯೂ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ವೇಳಾಪಟ್ಟಿಯನ್ನು ತಯಾರಿಸಿಕೊಳ್ಳಬೇಕು ಎಂದರು.

‘ಕೆಮ್ಮುವ ಮಕ್ಕಳಿಗೆ ರಜೆ ನೀಡಿ’

ಕೋವಿಡ್‌-19 ಸೋಂಕು ಕುರಿತು ಶಾಲೆಗಳಲ್ಲಿ ಮುಂಜಾಗ್ರತೆ ವಹಿಸಬೇಕು. ನೆಗಡಿ, ಕೆಮ್ಮು, ಜ್ವರ ಬಂದ ಮಕ್ಕಳಿಗೆ ಕಾಯಿಲೆ ವಾಸಿಯಾಗುವವರೆಗೂ ರಜೆ ನೀಡುವಂತೆ ಎಲ್ಲಾ ಶಾಲೆಗಳ ಮುಖ್ಯ ಶಿಕ್ಷಕರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಎಂ.ಆರ್.ಕಾಮಾಕ್ಷಿ ಸೂಚನೆ ನೀಡಿದ್ದಾರೆ.

ಸರ್ಕಾರಿ, ಅನುದಾನಿತ, ಖಾಸಗಿ ಶಾಲೆಗಳ ಮಕ್ಕಳ ಆರೋಗ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ಅರಿವು ಮೂಡಿಸಬೇಕು. ರೋಗದ ಲಕ್ಷಣಗಳು ಕಂಡು ಬಂದರೆ ಕೂಡಲೇ ಅಂತಹ ಮಕ್ಕಳಿಗೆ ರಜೆ ನೀಡಿ, ಮನೆಗೆ ಕಳುಹಿಸಿ ಚಿಕಿತ್ಸೆ ಪಡೆಯಲು ಸೂಕ್ತ ಮಾರ್ಗದರ್ಶನ ಮಾಡಬೇಕು ಎಂದು ತಿಳಿಸಿದ್ದಾರೆ.

ಎಲ್ಲ ವಿದ್ಯಾರ್ಥಿಗಳಿಗೂ ಪರೀಕ್ಷಾ ಸಮಯವಾಗಿದ್ದು, ವಿದ್ಯಾರ್ಥಿಗಳ ಆರೋಗ್ಯ ಹಿತದೃಷ್ಟಿಯಿಂದ ಜಾತ್ರೆ, ಸಮಾರಂಭಗಳಲ್ಲಿ ಹೊರಗಿನ ತಿಂಡಿ, ನೀರು ಸೇವಿಸದಂತೆ ಅವರು ಸಲಹೆ ನೀಡಿದ್ದಾರೆ.

ಶೌಚಾಲಯಗಳ ಬಳಕೆ ನಂತರ ಕೈತೊಳೆಯುವ ಕ್ರಮದ ಬಗ್ಗೆ ಮಕ್ಕಳಿಗೆ ತಿಳಿಸಿಕೊಡಬೇಕು ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT