ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು| ಅಧೀಕ್ಷಕರ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿ ಪತ್ರ ಬರೆದ ಜೈಲು ಕೈದಿಗಳು

ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ ಪತ್ರ
Last Updated 14 ಜನವರಿ 2023, 8:08 IST
ಅಕ್ಷರ ಗಾತ್ರ

ತುಮಕೂರು: ನಗರ ಹೊರವಲಯದ ಊರುಕೆರೆ ಬಳಿ ಇರುವ ಜಿಲ್ಲಾ ಕಾರಾಗೃಹದ ಅಧಿಕಾರಿ ವಿರುದ್ಧ ಅಲ್ಲಿನ ಕೈದಿಗಳು ಸಿಡಿದೆದ್ದಿದ್ದು, ಅಧೀಕ್ಷಕರ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ ಎನ್ನಲಾದ ಪತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಸೆಷನ್ಸ್ ನ್ಯಾಯಾಧೀಶರು, ಜಿಲ್ಲಾಧಿಕಾರಿ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳಿಗೆ ಬರೆದಿದ್ದಾರೆ ಎನ್ನಲಾದ ಪತ್ರವನ್ನು ಜಾಲ ತಾಣದಲ್ಲಿ ಹರಿಯ ಬಿಡಲಾಗಿದೆ.

ಕಳೆದ ಕೆಲ ದಿನಗಳ ಹಿಂದೆ ಗುಣಮಟ್ಟದ ಊಟ, ತಿಂಡಿ ಕೊಡುತ್ತಿಲ್ಲ ಎಂದು ಆರೋಪಿಸಿ ಕೈದಿಗಳು ಜೈಲಿನಲ್ಲಿ ಪ್ರತಿಭಟನೆ ನಡೆಸಿದರು. ವಿಷಯ ತಿಳಿದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ನ್ಯಾಯಾಧೀಶರಾದ ನೂರುನ್ನಿಸಾ ಅವರು ಜೈಲಿಗೆ ಭೇಟಿನೀಡಿ ಪರಿಶೀಲನೆ ನಡೆಸಿದರು. ನಂತರದ ದಿನಗಳಲ್ಲಿ ಈ ಪತ್ರ ಹರಿದಾಡುತ್ತಿರುವುದು ಮಹತ್ವ ಪಡೆದುಕೊಂಡಿದೆ.

‘ಜೈಲಿಗೆ ಭೇಟಿ ನೀಡುವ ಉನ್ನತ ಅಧಿಕಾರಿಗಳಿಗೆ ಅವರ ದರ್ಜೆಗೆ ತಕ್ಕಂತೆ ಲಕ್ಷಗಟ್ಟಲೆ ಲಂಚ ನೀಡುತ್ತಿದ್ದೇನೆ. ಇಲ್ಲಿಗೆ ಬರುವುದು ನಿಮ್ಮಗಳ (ಕೈದಿಗಳು) ಯೋಗಕ್ಷೇಮ ವಿಚಾರಿಸುವುದಕ್ಕಲ್ಲ. ಮಾಮೂಲಿ ಲಂಚದ ಹಣ ಪಡೆದುಕೊಳ್ಳಲು ಬರುತ್ತಾರೆ. ನೀವುಗಳು ಯಾರಿಗೇ ದೂರು ನೀಡಿದರೂ ಏನು ಮಾಡಿಕೊಳ್ಳಲು ಸಾಧ್ಯವಿಲ್ಲ. ಬಾಲ ಬಿಚ್ಚಿದರೆ ಅಂತಹವರ ಮನೆ, ಮಠ ಮಾರಿಸುತ್ತೇನೆ. ಹೆಂಡತಿ, ಮಕ್ಕಳನ್ನು ಅಡಮಾನ ಇರಿಸುವಂತೆ, ಸಾಯುವವರೆಗೂ ಜೈಲಿನಲ್ಲೇ ಕೊಳೆಯುವಂತೆ ಮಾಡುತ್ತೇನೆ’ ಎಂದು ಅಧೀಕ್ಷಕರು ಬೆದರಿಕೆ ಹಾಕುತ್ತಿದ್ದಾರೆ ಎಂದು ಪತ್ರದಲ್ಲಿ ನಮೂದಿಸಲಾಗಿದೆ.

‘ನಿಮಗೆ ಹೇಳುವವರು, ಕೇಳುವವರು ಯಾರೂ ಇಲ್ಲ. ಹೊಡೆದು ಕೊಂದರೂ ಪ್ರಕರಣ ಮುಚ್ಚಿಹಾಕಿ ಜೀರ್ಣಿಸಿಕೊಳ್ಳುವ ಶಕ್ತಿ, ಅಧಿಕಾರ ನನ್ನ ಬಳಿ ಇದೆ ಎಂದು ಭಯ ಹುಟ್ಟಿಸುತ್ತಾರೆ’ ಎಂದು ದೂರಲಾಗಿದೆ.

‘ಜೈಲಿನಲ್ಲಿ ಇರುವವರನ್ನು ಭೇಟಿಯಾಗಲು ಬಂದವರು ಹಣ ಕೊಟ್ಟರೆ ಮಾತ್ರ ಪ್ರವೇಶ ನೀಡಲಾಗುತ್ತದೆ. ನ್ಯಾಯಾಧೀಶರು, ಅಧಿಕಾರಿಗಳು ಭೇಟಿ ನೀಡುವ ವಿಚಾರ ಮೊದಲೇ ತಿಳಿದುಕೊಂಡು ದೂರು ನೀಡದಂತೆ ನಮ್ಮನ್ನು ಬೆದರಿಸುತ್ತಾರೆ. ಭಯದಿಂದ ಕಾರಾಗೃಹಕ್ಕೆ ಬಂದ ಅಧಿಕಾರಿಗಳಿಗೆ ದೂರು ನೀಡಲು ಸಾಧ್ಯವಾಗುತ್ತಿಲ್ಲ. ಭದ್ರತೆ, ಸುರಕ್ಷತೆ ದೃಷ್ಟಿಯಿಂದ ಸ್ಥಾಪಿಸಿರುವ ಸೆಲ್‌ಗಳಲ್ಲಿ ತಂಗಲು ಕೆಲವು ಕೈದಿಗಳಿಗೆ ಅವಕಾಶ ಮಾಡಿಕೊಟ್ಟು, ಅಂತಹವರಿಂದ ಹಣ ವಸೂಲಿ ಮಾಡಲಾಗುತ್ತಿದೆ’ ಎಂದು ಪತ್ರದಲ್ಲಿ ಆರೋಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT