ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು: ಪ್ರಜಾವಾಣಿ ವತಿಯಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪ್ರೇರಣಾ ಶಿಬಿರ

ಸಮಗ್ರ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಲಹೆ
Published 6 ಮಾರ್ಚ್ 2024, 8:30 IST
Last Updated 6 ಮಾರ್ಚ್ 2024, 8:30 IST
ಅಕ್ಷರ ಗಾತ್ರ

ತುಮಕೂರು: ಎಲ್ಲರು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಒಬ್ಬ ವ್ಯಕ್ತಿ, ಸದೃಢ ಶಕ್ತಿಯಾಗಿ ಬೆಳೆಯಬೇಕು. ಶಿಕ್ಷಕರು ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಬೇಕು ಎಂದು ಜಿ.ಪಂ ಸಿಇಒ ಜಿ.ಪ್ರಭು ತಿಳಿಸಿದರು.

ನಗರದಲ್ಲಿ ಬುಧವಾರ ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್ ವತಿಯಿಂದ ಶಾಲಾ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಕಾರ್ಯಾಗಾರ, ಪ್ರೇರಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಮಕ್ಕಳು ತರಗತಿಯಿಂದ ಆಚೆ ಹೊರಗಿನ ಪ್ರಪಂಚದಲ್ಲಿ ಕಲಿಯುವುದು ಶೇ 50 ರಷ್ಟು ಇರುತ್ತದೆ. ಬಾಹ್ಯ ಚಟುವಟಿಕೆಗಳ ಬಗ್ಗೆ ತಿಳಿದುಕೊಳ್ಳುವ, ಪ್ರಶ್ನಿಸುವ ಮನೋಭಾವ ರೂಢಿಸಿಕೊಳ್ಳಬೇಕು. ನಿರ್ಣಯ ತೆಗೆದುಕೊಳ್ಳುವುದನ್ನು ಕಲಿಯಬೇಕು. ಹೊರಗಿನ ಪ್ರಪಂಚದಿಂದ ನಾಯಕತ್ವದ ಗುಣ ಬರುತ್ತದೆ. ಎಲ್ಲವನ್ನು ತಿಳಿದುಕೊಳ್ಳಬೇಕು. ಸಮಗ್ರ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ಎಲ್ಲ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳಬೇಕು. ಜೀವನದ ಪಯಣವನ್ನು ಒಂದು ಕ್ರೀಡೆ ಎಂದು ಭಾವಿಸಬೇಕು. ನಿರಂತರ ಪರಿಶ್ರಮ, ಅಭ್ಯಾಸ, ಉತ್ಸಾಹ, ಛಲ, ಹಠದಿಂದ ಮುನ್ನಡೆಯಬೇಕು. ಈ ಎಲ್ಲ ಅಂಶಗಳು ನಿಮ್ಮಲ್ಲಿ ಆತ್ಮವಿಶ್ವಾಸ ತುಂಬುತ್ತವೆ ಎಂದರು.

ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ, ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯುತ್ತೇನೆ ಎಂಬುವುದನ್ನು ಇಲ್ಲಿಂದಲೇ ತೀರ್ಮಾನ ಮಾಡಬೇಕು. ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತುಮಕೂರು ಇಡೀ ರಾಜ್ಯಕ್ಕೆ ಪ್ರಥಮ ಸ್ಥಾನ ಪಡಯಬೇಕು. ಎಲ್ಲರು ಉತ್ತಮ ಅಂಕಗಳನ್ನು ಪಡೆಯಬೇಕು ಎಂದು ಹೇಳಿದರು.

ಜಿಲ್ಲಾಧಿಕಾರಿ ಶುಭ ಕಲ್ಯಾಣ್, ' ಸಕಾರಾತ್ಮಕ ಮನೋಭಾವ, ಆತ್ಮವಿಶ್ವಾಸ, ಕಠಿಣ ಪರಿಶ್ರಮದಿಂದ ಅಭ್ಯಾಸದಲ್ಲಿ‌ ತೊಡಗಿಸಿಕೊಂಡರೆ ಯಾವುದೂ ಅಸಾಧ್ಯವಲ್ಲ. ಪ್ರತಿ ಕ್ಷಣ ತುಂಬಾ ಮುಖ್ಯ. ಸಮಯ ವ್ಯರ್ಥ ಮಾಡಬಾರದು. ಎಲ್ಲರು ಪ್ರಾಮಾಣಿಕವಾಗಿ ಓದಬೇಕು. ಪ್ರತಿಯೊಂದು ಕೆಲಸದಲ್ಲಿ ಸಂಪೂರ್ಣವಾಗಿ ಪಾಲ್ಗೊಳ್ಳಬೇಕು' ಎಂದು ಸಲಹೆ ಮಾಡಿದರು.

ಇಂದಿನ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಅಭ್ಯಾಸ ನಡೆಸಬೇಕು. ಜೀವನದ ಪ್ರತಿಯೊಂದು ಸಮಸ್ಯೆಗೆ ನಿಮ್ಮ ಬಳಿಯೇ ಪರಿಹಾರ ಇದೆ. ಎಲ್ಲರು ಈ ನಿಟ್ಟಿನಲ್ಲಿ ಆಲೋಚನೆ ಮಾಡಬೇಕು ಎಂದರು.

ಡಿಡಿಪಿಐ ಸಿ.ರಂಗಧಾಮಯ್ಯ, ಬಿಇಒ ಸೂರ್ಯಕಲಾ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT