ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು ವಿವಿ ಎಂಎ, ಎಎಸ್‌ಸಿ, ಎಂಕಾಂನ ಫಲಿತಾಂಶ ವಿಳಂಬ: ಹೆಚ್ಚಿದ ಆತಂಕ

ಸ್ನಾತಕೋತ್ತರ ಪದವಿಯ 2, 4ನೇ ಸೆಮಿಸ್ಟರ್ ವಿದ್ಯಾರ್ಥಿಗಳ ಅಳಲು
Last Updated 29 ಡಿಸೆಂಬರ್ 2022, 5:07 IST
ಅಕ್ಷರ ಗಾತ್ರ

ತುಮಕೂರು: ತುಮಕೂರು ವಿಶ್ವವಿದ್ಯಾನಿಲಯ ಒಂದಿಲ್ಲೊಂದು ಕಾರಣಕ್ಕೆ ವಿವಾದ ಸೃಷ್ಟಿಸಿಕೊಂಡು ಸುದ್ದಿಯಾಗುತ್ತಲೇ ಸಾಗಿದೆ. ಈಗ ಸ್ನಾತಕೋತ್ತರ ಪದವಿಯ 2ನೇ ಹಾಗೂ 4ನೇ ಸೆಮಿಸ್ಟರ್ ಫಲಿತಾಂಶ ಪ್ರಕಟಿಸದೆ ವಿದ್ಯಾರ್ಥಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ಎಂಎ, ಎಎಸ್‌ಸಿ, ಎಂಕಾಂನ ಸಾಕಷ್ಟು ಕೋರ್ಸ್‌ಗಳ ಫಲಿತಾಂಶ ಇನ್ನೂ ಪ್ರಕಟವಾಗಿಲ್ಲ. ಪರೀಕ್ಷೆ ನಡೆದು ಮೂರು ತಿಂಗಳಾಗಿದ್ದು, ಮೌಲ್ಯಮಾಪನ ಪೂರ್ಣಗೊಂಡು ಎರಡು ತಿಂಗಳು ಕಳೆದಿದೆ. ಆದರೆ ಈವರೆಗೂ ಫಲಿತಾಂಶ ನೀಡಿಲ್ಲ. ವಿದ್ಯಾರ್ಥಿಗಳು ಕೋರ್ಸ್ ಮುಗಿಸಿ ಹೊರ ಬಂದಿದ್ದರೂ ಫಲಿತಾಂಶಕ್ಕಾಗಿ ಪರದಾಡುವುದು ಮಾತ್ರ ತಪ್ಪಿಲ್ಲ.

ಅಂಕಪಟ್ಟಿ, ಇತರೆ ದಾಖಲೆಗಳು ಇಲ್ಲದೆ ಉದ್ಯೋಗಕ್ಕೂ ಪ್ರಯತ್ನ ನಡೆಸುವುದು ಕಷ್ಟಕರವಾಗಿದೆ. ಕೇಂದ್ರ, ರಾಜ್ಯ ಸರ್ಕಾರ, ಇತರೆ ಸಾರ್ವಜನಿಕ ಸಂಸ್ಥೆಗಳು ಉದ್ಯೋಗಕ್ಕೆ ಅರ್ಜಿ ಕರೆದಿದ್ದರೂ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಸರ್ಕಾರದ ಪ್ರೋತ್ಸಾಹ ಧನ, ವಿದ್ಯಾರ್ಥಿ ವೇತನ ಸೇರಿದಂತೆ ಇತರೆ ಸೌಲಭ್ಯ ಪಡೆಯಲು ಅಂಕಪಟ್ಟಿ ಇಲ್ಲದೆ ಅರ್ಜಿ ಸಲ್ಲಿಸಲು
ಸಾಧ್ಯವಿಲ್ಲ.

ಪ್ರೋತ್ಸಾಹ ಧನಕ್ಕೆ ಅರ್ಜಿ ಸಲ್ಲಿಸುವ ಅವಧಿ ಡಿ.31ಕ್ಕೆ ಕೊನೆಗೊಳ್ಳುತ್ತಿದ್ದು, ಈ ಸೌಲಭ್ಯದಿಂದಲೂ ವಿದ್ಯಾರ್ಥಿಗಳು ವಂಚಿತರಾಗುತ್ತಿದ್ದಾರೆ. ಒಂದೆರಡು ದಿನದಲ್ಲಿ ಫಲಿತಾಂಶ ಪ್ರಕಟಿಸಿದರೂ ತಕ್ಷಣಕ್ಕೆ ಅಂಕಪಟ್ಟಿ ಸಿಗುವುದಿಲ್ಲ. ಅಂಕಪಟ್ಟಿ ಪಡೆದುಕೊಂಡು ಅರ್ಜಿ ಸಲ್ಲಿಸುವುದರ ಒಳಗೆ ಸಮಯ ಮೀರಿರುತ್ತದೆ. ಏನು ಮಾಡಬೇಕು ಎಂಬುದೇ ಗೊತ್ತಾಗುತ್ತಿಲ್ಲ. ಈ ಬಾರಿ ಪ್ರೋತ್ಸಾಹ ಧನ ಪಡೆಯುವುದರಿಂದ ವಂಚಿತರಾಗುತ್ತಿದ್ದೇವೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.

ಸಿಗದ ಫಲಿತಾಂಶ: ಸ್ನಾತಕೋತ್ತರ ಪದವಿಯ ಎರಡನೇ ಸೆಮಿಸ್ಟರ್ ಜತೆಗೆ ಅಂತಿಮ ಪದವಿಯ ಕನ್ನಡ, ಇಂಗ್ಲಿಷ್, ಇತಿಹಾಸ, ಸಾರ್ವಜನಿಕ ಆಡಳಿತ, ಮನಃಶಾಸ್ತ್ರ, ಪತ್ರಿಕೋದ್ಯಮ ವಿಭಾಗ, ಎಂಎಸ್‌ಡಬ್ಲ್ಯೂ ಹಾಗೂ ಇತರ ವಿಭಾಗಗಳ ಫಲಿತಾಂಶ ಹೊರ
ಬಂದಿಲ್ಲ.

ಸಾಮಾನ್ಯವಾಗಿ ಸ್ನಾತಕೋತ್ತರ ಪದವಿಯ ಪರೀಕ್ಷೆಗಳು ನಡೆದ ಕೆಲವೇ ವಾರಗಳಲ್ಲಿ ಬಹುತೇಕ ವಿಶ್ವವಿದ್ಯಾಲಯಗಳು ಫಲಿತಾಂಶ ಪ್ರಕಟಿಸಿ, ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುತ್ತವೆ. ಆದರೆ ತುಮಕೂರು ವಿ.ವಿಯಲ್ಲಿ ಮೌಲ್ಯಮಾಪನ ಮುಗಿದು ಎರಡು ತಿಂಗಳಾಗಿದ್ದರೂ ಫಲಿತಾಂಶ ನಮ್ಮ ಕೈಸೇರಿಲ್ಲ. ಇಂತಹ ಅವ್ಯವಸ್ಥೆ ಹಿಂದಿನ ವರ್ಷಗಳಲ್ಲೂ ನಡೆದಿದ್ದು, ಈಗಲೂ ಮುಂದುವರಿದಿದೆ. ಶೈಕ್ಷಣಿಕ, ಆಡಳಿತ– ಎರಡೂ ವಿಚಾರದಲ್ಲೂ ವಿ.ವಿ ಹಿನ್ನಡೆಯನ್ನು ಕಾಯ್ದುಕೊಳ್ಳುತ್ತಲೇ ಸಾಗಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

ಶುಲ್ಕ ಪಾವತಿಸಿಲ್ಲ: ಸ್ನಾತಕೋತ್ತರ ಪದವಿಯ 4ನೇ ಸೆಮಿಸ್ಟರ್‌ನ ಶೇ 75ರಷ್ಟು ಕೋರ್ಸ್‌ಗಳ ಫಲಿತಾಂಶ ಪ್ರಕಟಿಸಲಾಗಿದೆ. 7 ಕೋರ್ಸ್‌ಗಳ ಫಲಿತಾಂಶ ಪ್ರಕಟಿಸಬೇಕಿದೆ. ವಿದ್ಯಾರ್ಥಿಗಳು ಶುಲ್ಕ ಬಾಕಿ ಉಳಿಸಿಕೊಂಡಿರುವುದರಿಂದ ಪ್ರಕಟಿಸಿಲ್ಲ. ಆಯಾ ವಿಭಾಗಗಳ ಮುಖ್ಯಸ್ಥರು ಫಲಿತಾಂಶ ಪ್ರಕಟಿಸುವಂತೆ ಕೋರಿಕೊಂಡರೆ ನೀಡಲಾಗುವುದು ಎಂದು ವಿ.ವಿ ಕುಲಸಚಿವ (ಮೌಲ್ಯಮಾಪನ) ಪ್ರೊ.ನಿರ್ಮಲರಾಜು ತಿಳಿಸಿದರು.

ಹೊಸ ಶಿಕ್ಷಣ ನೀತಿಯನ್ನು ಅಳವಡಿಸಿ ಕೊಂಡಿರುವುದರಿಂದ ಎರಡನೇ ಸೆಮಿಸ್ಟರ್ ಫಲಿತಾಂಶ ಮತ್ತಷ್ಟು ತಡವಾಗಲಿದೆ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT