ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಸಾರಥ್ಯಕ್ಕೆ ಪೈಪೋಟಿ

ಆಕಾಂಕ್ಷಿಗಳಿಂದ ನಾನಾ ಲೆಕ್ಕಾಚಾರ; ಯಾರಿಗೆ ಒಲಿಯಲಿದೆ ಅದೃಷ್ಟ
Last Updated 8 ಆಗಸ್ಟ್ 2020, 14:41 IST
ಅಕ್ಷರ ಗಾತ್ರ

ತುಮಕೂರು: ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ (ಟೂಡಾ) ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಮುಖಂಡರಲ್ಲಿ ಈಗಾಗಲೇ ಪೈ‍ಪೋಟಿ ಆರಂಭವಾಗಿದೆ. ಯಾವ ‘ಪ್ರಭಾವಿ’ಗೆ ಸ್ಥಾನ ಒಲಿಯಲಿದೆ ಎನ್ನುವುದು ಪಕ್ಷದ ಕಾರ್ಯಕರ್ತರಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ವಿಶ್ವಹಿಂದೂ ಪರಿಷತ್ ಜಿಲ್ಲಾ ಸಂಚಾಲಕ ಜಿ.ಕೆ.ಶ್ರೀನಿವಾಸ್, ಉದ್ಯಮಿ ಎನ್‌.ಎಸ್.ಜಯಕುಮಾರ್, ಪಾಲಿಕೆ ಮಾಜಿ ಸದಸ್ಯ ಬಾವಿಕಟ್ಟೆ ನಾಗೇಶ್, ಲಕ್ಷ್ಮಿಶ್ ಹೆಸರುಗಳು ಪ್ರಮುಖವಾಗಿ ಕೇಳಿಬರುತ್ತಿವೆ. ಸ್ಥಾನ ಪಡೆಯಲು ಆಕಾಂಕ್ಷಿಗಳು ತಮ್ಮದೇ ಆದ ಹಾದಿಯಲ್ಲಿ ಪ್ರಯತ್ನ ನಡೆಸಿದ್ದಾರೆ.

ಶ್ರೀನಿವಾಸ್ ಮತ್ತು ಲಕ್ಷ್ಮಿಶ್ ಸಂಘ ಪರಿವಾರದ ಹಿನ್ನೆಲೆ ಹೊಂದಿರುವ ಪ್ರಮುಖರು. ಉದ್ಯಮಿ ಎನ್‌.ಎಸ್.ಜಯಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ, ಸಂಸದ ಜಿ.ಎಸ್.ಬಸವರಾಜ್, ಶಾಸಕ ಜ್ಯೋತಿ ಗಣೇಶ್ ಆಪ್ತರು.

ಜಾತಿ ಲೆಕ್ಕಾಚಾರ, ಹಣ ಬಲ, ಪ್ರಭಾವವೇ ಆಕಾಂಕ್ಷಿಗಳಿಗೆ ಪ್ರಮುಖವಾಗಿದೆ. ಬಿಜೆಪಿ ಜಿಲ್ಲಾ ಅಧ್ಯಕ್ಷ ಸುರೇಶ್ ಗೌಡ, ಜ್ಯೋತಿ ಗಣೇಶ್, ಜಿ.ಎಸ್.ಬಸವರಾಜ್, ಜೆ.ಸಿ.ಮಾಧುಸ್ವಾಮಿ ಅವರಿಗೆ ‘ಆಪ್ತ’ರಾದವರು ಹುದ್ದೆ ಪಡೆಯಲಿದ್ದಾರೆ ಎನ್ನುವ ಲೆಕ್ಕಾಚಾರಗಳು ಬಿಜೆಪಿಯೊಳಗೆ ಕೇಳಿ ಬಂದಿವೆ.

ಅಧ್ಯಕ್ಷ ಸ್ಥಾನವನ್ನು ತಮ್ಮ ಸಮುದಾಯಕ್ಕೆ ನೀಡುವಂತೆ ಇತ್ತೀಚೆಗೆ ನೇಕಾರ ಸಮುದಾಯದ ಧನಿಯಾಕುಮಾರ್ ಹಾಗೂ ಮಾದಿಗ ಸಮುದಾಯದ ಮುಖಂಡರು ಸುದ್ದಿಗೋಷ್ಠಿ ನಡೆಸಿ ಆಗ್ರಹಿಸಿದ್ದರು. ‘ಪ್ರಭಾವಿ’ಗಳಿಗೆ ಅವಕಾಶ ಕಲ್ಪಿಸಿದರೆ ಮುಂದಿನ ಚುನಾವಣೆಗಳಲ್ಲಿ ಬಿಜೆಪಿಗೂ ಅನುಕೂಲ ಎನ್ನುವ ಲೆಕ್ಕಾಚಾರಗಳು ಇದ್ದಂತೆ ಇವೆ.

ಲಿಂಗಾಯತರು ಜಿಲ್ಲೆಯ ಆಯಕಟ್ಟಿನ ಹುದ್ದೆಗಳಲ್ಲಿ ಮತ್ತು ರಾಜಕೀಯವಾಗಿಯೂ ಪ್ರಮುಖವಾಗಿರುವ ಕಾರಣ ಮತ್ತೆ ಅದೇ ಸಮುದಾಯಕ್ಕೆ ಅಧ್ಯಕ್ಷ ಸ್ಥಾನ ಕೊಟ್ಟರೆ ಉಳಿದ ಸಮುದಾಯಗಳು ಸಹಜವಾಗಿ ಅಸಮಾಧಾನಗೊಳ್ಳಬಹುದು. ಈ ಕಾರಣದಿಂದ ಲಿಂಗಾಯತೇತರರಿಗೆ ಅವಕಾಶ ಕಲ್ಪಿಸಬೇಕು ಎನ್ನುವ ಲೆಕ್ಕಾಚಾರವೂ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಈ ನಡುವೆ ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿಎಂ.ಬಿ.ನಂದೀಶ್ ಆಯ್ಕೆಯಾಗಿರುವುದು ತುಮಕೂರು ನಗರದ ರಾಜಕಾರಣ ಏಕಪಕ್ಷೀಯವಲ್ಲ ಎನ್ನುವ ಸಂದೇಶವನ್ನು ತಲುಪಿಸಿದೆ. ಬಿಜೆಪಿ ತೀರ್ಮಾನಗಳಲ್ಲಿ ಸಂಘ ಪರಿವಾರದ ಮುಖಂಡರದ್ದೇ ಪ್ರಮುಖ ನಿರ್ಣಯ ಎನ್ನುವುದು ಬಹಿರಂಗ ಸತ್ಯ. ಈ ವಿಚಾರವಾಗಿ ನೋಡುವುದಾರೆ ‘ಸಂಘ’ದ ಪ್ರಭಾವವನ್ನು ಬಳಸಿ ಅಧ್ಯಕ್ಷ ಸ್ಥಾನ ಪಡೆಯುವ ಪ್ರಯತ್ನಗಳು ನಡೆದಿವೆ. ಅಲ್ಲದೆ ಈ ಎಲ್ಲ ಹೆಸರುಗಳ ನಡುವೆ ಹೊಸಬರು ಅಧ್ಯಕ್ಷ ಸ್ಥಾನಕ್ಕೆ ಬಂದರೂ ಅಚ್ಚರಿ ಇಲ್ಲ.

‘ಪಕ್ಷಕ್ಕಾಗಿ ದುಡಿದವರಿಗೆ ಅವಕಾಶ ನೀಡಬೇಕು. ಜಾತಿ, ಪ್ರಭಾವಗಳಿಗಿಂತ ಪಕ್ಷನಿಷ್ಠೆಯೇ ಪ್ರಮುಖವಾಗಬೇಕು’ ಎಂಬ ಬೇಡಿಕೆ ವ್ಯಕ್ತವಾಗಿದೆ.

ಆಯುಕ್ತರ ಹುದ್ದೆಗೆ ನಾಗಣ್ಣ ಕಣ್ಣು
ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಉಪನಿರ್ದೇಶಕ ಡಾ.ನಾಗಣ್ಣ, ಈ ಹಿಂದಿನಿಂದಲೂ ಟೂಡಾ ಆಯುಕ್ತರ ಹುದ್ದೆಯ ಮೇಲೆ ಕಣ್ಣಿಟ್ಟವರು. ಆ ಸ್ಥಾನಕ್ಕೆ ಬರಲು ಈ ಹಿಂದೆ ಪ್ರಯತ್ನ ಸಹ ನಡೆಸಿದ್ದರು. ಆ ಪ್ರಯತ್ನ ಈಗಲೂ ಮುಂದುವರಿದಿದ್ದು ಅವರು ಸಹ ಟೂಡಾಕ್ಕೆ ಬರಲು ತುದಿಗಾಲಲ್ಲಿ ನಿಂತಿದ್ದಾರೆ ಎನ್ನುತ್ತವೆ ಮೂಲಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT