ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುರುವೇಕೆರೆ | ಜಾನುವಾರುಗಳಿಗೆ ಮೇವಿಲ್ಲದೆ ರೈತರ ಪರದಾಟ

ಪಾಂಡುರಂಗಯ್ಯ ಎ.ಹೊಸಹಳ್ಳಿ
Published 8 ಮೇ 2024, 7:39 IST
Last Updated 8 ಮೇ 2024, 7:39 IST
ಅಕ್ಷರ ಗಾತ್ರ

ತುರುವೇಕೆರೆ: ತಾಲ್ಲೂಕಿನಾದ್ಯಂತ ತೀವ್ರ ಬರಗಾಲ ಆವರಿಸಿದ್ದು ಜಾನುವಾರಗಳಿಗೆ ಮೇವು ನೀರಿಲ್ಲದೆ ಸೊರಗಿದ್ದು, ತಾಲ್ಲೂಕು ಆಡಳಿತ ಕೂಡಲೇ ಮೇವು ಬ್ಯಾಂಕ್ ತೆರೆಯಬೇಕು ಎಂಬುದು ತಾಲ್ಲೂಕಿನ ರೈತರು ಆಗ್ರಹಿಸಿದ್ದಾರೆ.

ಮಳೆ ಬಾರದೆ ಬಿಸಿಲಿನ ತಾಪ ಭೀಕರ ಸ್ವರೂಪ ಪಡೆದುಕೊಂಡಿದೆ. ಕಳೆದ ಸಾಲಿನಲ್ಲಿ ಪೂರ್ವ ಮುಂಗಾರು ಮತ್ತು ಹಿಂಗಾರು ಮಳೆ ಸಮರ್ಪಕವಾಗಿ ಬೀಳದ ಕಾರಣ ಕೆಲವೇ ರೈತರಲ್ಲಿ ರಾಗಿ ಹುಲ್ಲು, ಭತ್ತದ ಹುಲ್ಲು ಮಾತ್ರ ಇತ್ತು. ಈಗ ಅದೂ ಇಲ್ಲಿಯ ತನಕ ಆಗಿದೆ, ಮುಂದೇನು ಎಂಬ ಚಿಂತೆ ರೈತರದು.

ಕೊಳವೆ ಬಾವಿ ಇರುವ ಕೆಲವು ರೈತರು ತಮ್ಮ ತೋಟಗಳಲ್ಲಿ ಮೇವು ಬೆಳೆದುಕೊಂಡಿದ್ದಾರೆ. ಕೆಲವು ಕೊಳವೆ ಬಾವಿಗಳಲ್ಲಿ ನೀರು ನಿಂತು ನಿಂತು ಬರುತ್ತಿದ್ದು ಅಡಿಕೆ ಮತ್ತು ತೆಂಗಿನ ಬೆಳೆ ಉಳಿಸಿಕೊಂಡರೆ ಸಾಕು ಎನ್ನುವ ಮಟ್ಟಕ್ಕೆ ರೈತರು ಬಂದಿದ್ದಾರೆ.

ಕೆಲ ರೈತರು ತಾವು ಸಾಕಿದ ಜಾನುವಾರು ಮೇವಿಲ್ಲದೆ ನರಳುವುದನ್ನು ನೋಡಲಾಗದೆ ಮಾರುತ್ತಿದ್ದಾರೆ.

ಕೆಲ ರೈತರು ಬಾಳೆ ದಿಂಡನ್ನು ಸಣ್ಣಗೆ ಕತ್ತರಿಸಿ ಹಸು, ಎಮ್ಮೆಗಳಿಗೆ ಹಾಕುತ್ತಿದ್ದಾರೆ. ಇನ್ನೂ ಕೆಲವರು ಅರಳಿ ಮರದ ಎಲೆ, ಆಲುಗೊಣದ ಸೊಪ್ಪು ತಂದು ಹಾಕುವ ಸ್ಥಿತಿ ಬಂದಿದೆ ಎನ್ನುತ್ತಾರೆ ರೈತ ಬಸವರಾಜು.

‘ಬೆಟ್ಟ, ಗುಡ್ಡ, ತೋಟ, ಹೊಲದ ಬದುಗಳಲ್ಲಿನ ಹುಲ್ಲು ಮತ್ತು ಗಿಡಗಳಿಗೆ ಬೆಂಕಿ ಬಿದ್ದು ಸುಟ್ಟಿವೆ. ಮೇಕೆ, ಕುರಿಗಳಿಗೆ ಸೊಪ್ಪು ಕೂಡಿಸುವುದೇ ದೊಡ್ಡ ಸವಾಲಾಗಿದೆ’ ಎಂದು ಅಕ್ಕಳಸಂದ್ರಗೊಲ್ಲರಟ್ಟಿ ಶಾಂತಯ್ಯ ಅಳಲು ತೋಡಿಕೊಂಡರು.

ದಂಡಿನಶಿವರ, ದುಂಡಾ, ಸಾರಿಗೇಹಳ್ಳಿ, ಅಮ್ಮಸಂದ್ರ, ಸಂಪಿಗೆ, ಹುಲ್ಲೇಕೆರೆ, ರಾಗದೇವನಹಳಳ್ಳಿ, ಈ ಭಾಗಗಳಲ್ಲಿ ಅಡಿಕೆ ಬೆಳೆಯನ್ನು ಹೆಚ್ಚು ಬೆಳೆಯುವುದರಿಂದ ಅಡಿಕೆ ಪಟ್ಟೆ ಧಾರಾಳವಾಗಿ ಸಿಗುತ್ತಿದೆ. ಈ ಹಿಂದೆ ರೈತರು ತಮ್ಮ ತೋಟಗಳಲ್ಲಿ ಬಿದ್ದ ಅಡಿಕೆ ಪಟ್ಟೆಗಳನ್ನು ಮಾರುತ್ತಿದ್ದರು. ಈಗ ಹಸು, ಎಮ್ಮೆಗಳಿಗೆ ಮೇವಿಲ್ಲದೆ ಹಸಿ ಅಡಿಕೆ ಪಟ್ಟೆಯನ್ನು ಸೀಳಿ ಮೇವಾವಾಗಿ ಬಳಸುತ್ತಿದ್ದಾರೆ.

ಲೋಕಮ್ಮನಹಳ್ಳಿ, ಆನೇಕೆರೆ ಮತ್ತು ಬಾಣಸಂದ್ರಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲಾಘಟ್ಟ, ಆನೇಕೆರೆ, ನೀರುಗುಂದ, ಅಜ್ಜೇನಹಳ್ಳಿ, ಲೋಕಮ್ಮನಹಳ್ಳಿಗೊಲ್ಲರಹಟ್ಟಿ, ಪಿ.ಕಲ್ಲಹಳ್ಳಿ, ಶೆಟ್ಟಿಗೊಂಡನಹಳ್ಳಿ, ಗೂರಲಮಠಮಾಯಸಂದ್ರ ಮತ್ತು ದಬ್ಬೇಘಟ್ಟ ಹೋಬಳಿಯಲ್ಲಿ ಮೇವಿನ ಕೊರತೆ ತೀವ್ರವಾಗಿದೆ.

ತಾಲ್ಲೂಕಿನ ಕಸಬಾದಲ್ಲಿ 14,334 ದನ ಮತ್ತು ಎಮ್ಮೆ, 21,519 ಕುರಿ ಮೇಕೆ, ದಂಡಿನಶಿವರ ಹೋಬಳಿಯಲ್ಲಿ ದನ ಮತ್ತು ಎಮ್ಮೆ 12,190, ಕುರಿ ಮೇಕೆ 11,785, ದಬ್ಬೇಘಟ್ಟ ಹೋಬಳಿಯಲ್ಲಿ ದನ ಮತ್ತು ಎಮ್ಮೆ 15,805, ಕುರಿ ಮೇಕೆ 18,998, ಮಾಯಸಂದ್ರ ಹೋಬಳಿ ದನ ಮತ್ತು ಎಮ್ಮೆ 14,980, ಕುರಿ ಮೇಕೆ 27,343 ಇವೆ.

'ಚನ್ನರಾಯಪಟ್ಟಣದಿಂದ ಹಸಿ ಮೆಕ್ಕೆಜೋಳದ ಮೇವನ್ನು ಹಸು ಇರುವವರು ಕ್ವಿಂಟಲ್‌ಗೆ ₹5 ಸಾವಿರ ನೀಡಿ ತರಿಸಿಕೊಳ್ಳುತ್ತಿದ್ದಾರೆ. ಹಣ ಇಲ್ಲದವರ ಜಾನುವಾರುಗಳ ಗತಿ ಏನು? ಎಂದು ರೈತ ಮುಖಂಡ ಲೋಕಮ್ಮನಹಳ್ಳಿ ಕಾಂತರಾಜು ಹೇಳಿದರು.

ಮಾಯಸಂದ್ರ ಹೋಬಳಿ ಟಿ.ಬಿ.ಕ್ರಾಸ್ ಬಳಿಯ ಚಿಂಚಾದ್ರಿ ರೈತ ಸಂತೆ ಮತ್ತು ದಬ್ಬೇಘಟ್ಟ ಹೋಬಳಿಯ ಅರೆಮಲ್ಲೇನಹಳ್ಳಿ ರಂಗನಾಥ ಬೆಟ್ಟದ ತಪ್ಪಲಿನಲ್ಲಿ ಗುರುವಾರ ಮೇವಿನ ಬ್ಯಾಂಕ್ ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಹಶೀಲ್ದಾರ್ ವೈ.ಎಂ.ರೇಣುಕುಮಾರ್ ಹೇಳಿದರು.

ಶೀಘ್ರವೇ ಮೇವು ಬ್ಯಾಂಕ್‌ ತಾಲ್ಲೂಕಿನಲ್ಲಿ ಮೇವಿನ ಬ್ಯಾಂಕ್ ತೆರೆಯುವ ಟೆಂಡರ್ ಆಗಿದೆ. ತಾಲ್ಲೂಕಿನಲ್ಲಿ ಎರಡು ಕಡೆ ಮೇವಿನ ಬ್ಯಾಂಕ್ ಶೀಘ್ರವೇ ತೆರೆಯಲಾಗುವುದು. ಆಯಾ ಪಶು ಇಲಾಖಾ ಕಚೇರಿ ಅಧಿಕಾರಿ ಬಳಿ ರೈತರು ಕಾರ್ಡ್ ಪಡೆದುಕೊಳ್ಳಬೇಕು. ಒಂದು ಹಸುವಿಗೆ 6 ಕೆ.ಜಿಯಂತೆ 7 ದಿನಕ್ಕೆ ಆಗುವಷ್ಟು ಮೇವು ನೀಡಲಾಗುವುದು. ಡಾ.ರೇವಣಸಿದ್ದಪ್ಪ ತಾಲ್ಲೂಕು ಪಶು ಇಲಾಖಾ ಸಹಾಯಕ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT