ಕ್ರಿಯಾಶೀಲತೆ, ಬುದ್ಧಿವಂತಿಕೆಯೇ ಸಾಧನೆಗೆ ಮಾನದಂಡ

ತುಮಕೂರು: ಸಾಧನೆಗೆ ವ್ಯಕ್ತಿಯ ಕ್ರಿಯಾಶೀಲತೆ ಮತ್ತು ಬುದ್ಧಿಮತ್ತೆಯೇ ಮಾನದಂಡಗಳಾಗಬೇಕೇ ಹೊರತು ಕುಲ-ಧರ್ಮಗಳಲ್ಲ ಎಂದು ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ವೈ.ಎಸ್ ಸಿದ್ದೇಗೌಡ ಹೇಳಿದರು.
ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ವಿಶ್ವವಿದ್ಯಾಲಯದ ಸಾವಯವ ರಸಾಯನ ವಿಜ್ಞಾನ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಹಯೋಗದಲ್ಲಿ ಸೋಮವಾರ ನಡೆದ ‘ಅಡ್ವಾನ್ಸಸ್ ಇನ್ ಕೆಮಿಕಲ್ ಸೈನ್ಸಸ್’ ಕುರಿತ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿಜ್ಞಾನ ಕ್ಷೇತ್ರದಲ್ಲಿ ವಿಜ್ಞಾನಿಗಳು ಹಲವು ಮೈಲಿಗಲ್ಲುಗಳನ್ನು ಸಾಧಿಸಿದ್ದಾರೆ. ಆದರೂ ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ಇಂದು ಹೊಸತು ಎನಿಸಿದ ಜ್ಞಾನ ನಾಳೆಗೆ ಹಳೆಯದಾಗುತ್ತದೆ. ಸಂಶೋಧನೆಗಳು ಕ್ರಿಯಾಶೀಲ ಹಾಗೂ ಸಮಾಜಮುಖಿಯಾಗಿ ಆಗಬೇಕಿದೆ ಎಂದರು.
ರಸಾಯನ ವಿಜ್ಞಾನ ಜೀವನಕ್ಕೂ ಅನ್ವಯವಾಗುತ್ತದೆ. ಆಹಾರದಲ್ಲಿ ರಾಸಾಯನಿಕಗಳ ಪಾತ್ರ ಮಹತ್ವದ್ದು. ವಿಜ್ಞಾನ ಇನ್ನು ಬೆಳವಣಿಗೆಯಾಗದ ಕಾಲದಲ್ಲಿ ಮಾನವ ಆರೋಗ್ಯವಾಗಿಯೇ ಇದ್ದ. ಆದರೆ, ವಿಜ್ಞಾನದ ಬೆಳವಣಿಗೆಯ ಜೊತೆಗೆ ಆರೋಗ್ಯ ಕ್ಷೀಣಿಸುತ್ತಿದೆ. ಇದನ್ನು ಅವಲೋಕಿಸಬೇಕು ಎಂದು ಹೇಳಿದರು.
ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಕಾರ್ಯನಿರ್ವಹಣಾಧಿಕಾರಿ ಡಾ. ಎ.ಎಂ.ರಮೇಶ್, ‘ಭವಿಷ್ಯದಲ್ಲಿ ಸಂಶೋಧನೆಯಲ್ಲಿ ಮುಂದುವರಿಯಬೇಕಾದರೆ ವಿದ್ಯಾರ್ಥಿಗಳು ಇಂದಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು’ ಎಂದರು.
‘ಹೆಸರಾಂತ ವಿಜ್ಞಾನಿಗಳಿಂದ ಉಪನ್ಯಾಸ ಏರ್ಪಡಿಸುವ ಮೂಲಕ ಸಂಶೋಧನೆಯ ಹೊಸ ಆಯಾಮಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಇರಾದೆ ಅಕಾಡೆಮಿಗೆ ಇದೆ’ ಎಂದು ಹೇಳಿದರು.
ಹಿರಿಯ ಪ್ರಾಧ್ಯಾಪಕರಾದ ಪ್ರೊ.ಎನ್.ಸೂರ್ಯಪ್ರಕಾಶ್, ಪ್ರೊ.ವಿ.ರಾಮನಾಥನ್, ಪ್ರೊ.ಎಸ್.ರಘೋತ್ತಮ, ಪ್ರೊ.ಇ. ಕೃಷ್ಣಕುಮಾರ್ ವಿವಿಧ ವಿಷಯಗಳ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದ ಸಂಯೋಜಕ ಡಾ. ಎಸ್. ಶ್ರೀನಿವಾಸ, ಶೇಟ್ ಪ್ರಕಾಶ್ ಇದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.