ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಸಿಯೂಟ ಸಿಬ್ಬಂದಿಗೆ ಸಿಗದ ಗೌರವಧನ

ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ಪ್ರತಿಭಟನೆ
Last Updated 8 ನವೆಂಬರ್ 2022, 6:26 IST
ಅಕ್ಷರ ಗಾತ್ರ

ತುಮಕೂರು: ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ತಯಾರಿಕೆ ಸಿಬ್ಬಂದಿಗೆ ಕಳೆದ ನಾಲ್ಕು ತಿಂಗಳಿನಿಂದ ಗೌರವಧನ ಪಾವತಿಯಾಗಿಲ್ಲ. ಸರ್ಕಾರದಿಂದ ಬರುವ ಹಣ ನಂಬಿ ಜೀವನ ಸಾಗಿಸುತ್ತಿದ್ದವರಿಗೆ ದಾರಿ ತೋಚದಂತಾಗಿದೆ.

ಯೋಜನಾ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಬಿಸಿಯೂಟ ಸಿಬ್ಬಂದಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಗೌರವಧನ ಪಾವತಿಯಾಗಬೇಕಿದೆ. ನೌಕರರ ನಿರಂತರ ಹೋರಾಟದ ಫಲವಾಗಿ ಗೌರವ ಧನವನ್ನು ಈಚೆಗೆ ಹೆಚ್ಚಳ ಮಾಡಲಾಗಿದೆ. ಮುಖ್ಯ ಅಡುಗೆಯವರಿಗೆ ₹3,700, ಸಹಾಯಕರಿಗೆ ₹3,600ರಂತೆ ಪಾವತಿಯಾಗುತ್ತಿದೆ.

ಈ ವರ್ಷದ ಜೂನ್‌ನಲ್ಲಿ ಕೊನೆಯ ಬಾರಿಗೆ ಗೌರವ ಧನ ನೀಡಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೆ ಗೌರವ ಧನ ನೀಡಿಲ್ಲ. ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಮೇ 15ರಿಂದ ಸಿಬ್ಬಂದಿ ತಮ್ಮ ಕೆಲಸಕ್ಕೆ ಹಾಜರಾಗಿದ್ದಾರೆ. ಆದರೆ, ಮೇ ತಿಂಗಳ ಗೌರವಧನ ಪಾವತಿಸುವಲ್ಲಿ ಸರ್ಕಾರ ಮೀನಮೇಷ ಎಣಿಸುತ್ತಿದೆ.

ವಿಧವೆಯರು, ವಿಚ್ಛೇದಿತರು, ಒಂಟಿ ಮಹಿಳೆಯರು ಹೆಚ್ಚಾಗಿ ಅಡುಗೆ ಕೆಲಸದಲ್ಲಿ ತೊಡಗಿಸಿಕೊಂಡಿದ್ದು, ಜೀವನ ನಿರ್ವಹಣೆಗಾಗಿ ಸರ್ಕಾರದಿಂದ ಬರುವ ಗೌರವ ಧನವನ್ನೇ ನಂಬಿದ್ದಾರೆ. ಪ್ರತಿ ತಿಂಗಳು ಹಣ ಬಿಡುಗಡೆ ಆಗದಿರುವುದು ಇವರನ್ನು ಸಂಕಷ್ಟಕ್ಕೆ ತಳ್ಳಿದೆ.

ಬಿಸಿಯೂಟ ತಯಾರಿಕೆ ಸಿಬ್ಬಂದಿಯಲ್ಲಿ ಕೆಲವರು ಬಾಡಿಗೆ ಮನೆಯಲ್ಲಿ ವಾಸವಿದ್ದು, ಬಾಡಿಗೆ ಹಣ ನೀಡಲು ಆಗದೆ ತೊಂದರೆ ಅನುಭವಿಸಿದ್ದಾರೆ. ದಸರಾ, ಗಣೇಶ ಚತುರ್ಥಿ, ದೀಪಾವಳಿ ಸಮಯದಲ್ಲಿ ಗೌರವ ಧನ ಪಾವತಿಯಾಗಬಹುದು ಎಂದು ಕಾಯುತ್ತಿದ್ದವರಿಗೆ ನಿರಾಸೆ ಎದುರಾಗಿತ್ತು.

ಪ್ರತಿಭಟನೆ: ಗೌರವ ಧನ ಪಾವತಿಸುವಂತೆ ಆಗ್ರಹಿಸಿ ನಗರದ ಜಿ.ಪಂ ಕಚೇರಿ ಆವರಣದಲ್ಲಿ ಸೋಮವಾರ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ (ಎಐಟಿಯುಸಿ) ವತಿಯಿಂದ ಪ್ರತಿಭಟನೆ ನಡೆಯಿತು. ಜಿಲ್ಲೆಯ ವಿವಿಧ ಭಾಗಗಳಿಂದ ಬಂದಿದ್ದ ಸಿಬ್ಬಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಮಕ್ಕಳ ವಿದ್ಯಾಭ್ಯಾಸ, ವಯೋವೃದ್ಧ ತಂದೆ- ತಾಯಂದಿರ ಆರೈಕೆ ಕಷ್ಟವಾಗಿದ್ದು, ತಡೆ ಹಿಡಿದಿರುವ ಗೌರವ ಧನ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.

ಫೆಡರೇಷನ್‌ ರಾಜ್ಯ ಘಟಕದ ಅಧ್ಯಕ್ಷ ಹೊನ್ನಪ್ಪ ಮರೆಮ್ಮನವರ, ಕಾಂತರಾಜು, ಎ.ಬಿ.ಉಮಾದೇವಿ, ರಾಧಮ್ಮ, ಪುಷ್ಪಲತಾ, ಸಾವಿತ್ರಮ್ಮ, ವನಜಾಕ್ಷಿ, ಲಕ್ಷ್ಮಮ್ಮ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT