ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಳಿಯಾರು | ಹೆಸರುಕಾಳಿಗೆ ಇನ್ನೂ ನಿಗದಿಯಾಗದ ಬೆಲೆ

Published 22 ಜುಲೈ 2023, 6:03 IST
Last Updated 22 ಜುಲೈ 2023, 6:03 IST
ಅಕ್ಷರ ಗಾತ್ರ

ಹುಳಿಯಾರು: ಹೋಬಳಿ ಸೇರಿದಂತೆ ಚಿಕ್ಕನಾಯಕನಹಳ್ಳಿ ತಾಲ್ಲೂಕು ವ್ಯಾಪ್ತಿಯಲ್ಲಿ ಹೆಸರು ಬೆಳೆ ಕೊಯ್ಲು ಹಂತಕ್ಕೆ ಬಂದಿದ್ದು ಗಿಡಗಳಿಂದ ಕಾಳು ಬೇರ್ಪಡಿಸುವ ಕಾರ್ಯದಲ್ಲಿ ರೈತರು ಮಗ್ನರಾಗಿದ್ದಾರೆ. ಆದರೆ ಮಾರುಕಟ್ಟೆಯಲ್ಲಿ ಇನ್ನೂ ಹೆಸರಿಗೆ ಬೆಲೆ ಮಾತ್ರ ನಿಗದಿಯಾಗಿಲ್ಲ.

ಹಂದನಕೆರೆ, ಶೆಟ್ಟಿಕೆರೆ, ಚಿಕ್ಕನಾಯಕನಹಳ್ಳಿ ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಹೆಸರು ಬೆಳೆ ಅಲ್ಪಸ್ವಲ್ಪ ಬಂದಿದೆ. ಅಶ್ವಿನಿ ಹಾಗೂ ಭರಣಿ ಮಳೆ ಕೈಕೊಟ್ಟ ಕಾರಣ ಹೆಸರು ಬಿತ್ತನೆಗೆ ಹಿನ್ನಡೆಯಾಗಿತ್ತು. ತಡವಾಗಿ ಬಿತ್ತನೆ ಆಗಿದ್ದರಿಂದ ಬೆಳೆ ಬರುವುದು ತಡವಾಗಿದೆ. ಒಣಗಿರುವ ಕಾಯಿಗಳನ್ನು ಗಿಡಗಳಿಂದ ಬಿಡಿಸುವ ಸಿದ್ಧತೆ ನಡೆದಿದೆ. ಹೆಸರು ಹೈಬ್ರಿಡ್‌ ತಳಿಯಾದರೇ ಒಂದೇ ಬಾರಿ ಒಣಗುವುದರಿಂದ ಗಿಡಗಳನ್ನೇ ಭೂಮಿಯಿಂದ ಕಿತ್ತು ಕಾಳನ್ನು ಪಡೆಯಬಹುದು. ಆದರೆ ರೈತರ ಶೇಖರಣೆ ಮಾಡಿಕೊಂಡಿರುವ ನಾಟಿ ಹೆಸರುಕಾಳು ಹಂತ ಹಂತದಲ್ಲಿ ಕಾಯಿ ಒಣಗುತ್ತದೆ. ಸುಮಾರು ಮುರ್ನಾಲ್ಕು ಬಾರಿ ಬಿಡಿಸಬಹುದಾಗಿರುವುದರಿಂದ ಕೂಲಿ ಆಳುಗಳ ಸಮಸ್ಯೆ ಎದುರಾಗುತ್ತದೆ.

ಈಗಾಗಲೇ ಎಲ್ಲ ಕಡೆ ಕಾಯಿ ಒಣಗಿರುವುದರಿಂದ ಆಳುಗಳ ಸಮಸ್ಯೆ ಎದುರಾಗಿ ಕೆಲ ಕಡೆ ಮುಯ್ಯಾಳು ಪದ್ದತಿ ಮೂಲಕ ಬಿಡಿಸುವ ಕಾರ್ಯ ನಡೆಯುತ್ತಿದೆ. ರೈತರು ಕೃಷಿ ಚಟುವಟಿಕೆಗಳಿಗೆ ಹೆಸರುಕಾಳು ಮಾರಾಟ ಮಾಡಿ ಬಂದ ಹಣ ಸಹಾಯಕವಾಗುವುದರಿಂದ ರೈತರು ನಾ ಮುಂದು ತಾ ಮುಂದು ಗಿಡಗಳಿಂದ ಕಾಳು ಬೇರ್ಪಡಿಸಲು ಮುಂದಾಗಿದ್ದಾರೆ. ಆದರೆ ಆಗಾಗ ಬಂದು ಹೋಗುವ ಸೋನೆ ಮಳೆ ಕೊಯ್ಲಿಗೆ ತೊಂದರೆಯಾಗುತ್ತದೆ. ಅಲ್ಲದೆ ಮೋಡ ಮುಸುಕಿದ ವಾತಾವರಣ ಕೂಡ ಕಾಳು ಬೇರ್ಪಡಿಸಲು, ಒಣಗಿಸಲು ಹಿನ್ನಡೆಯಾಗುತ್ತಿದೆ ಎಂದು ರೈತರು ಹೇಳುತ್ತಾರೆ.

ನಿರ್ದಿಷ್ಟ ಬೆಲೆ ಇಲ್ಲ

ಸಾಮಾನ್ಯವಾಗಿ ಹೆಸರುಕಾಳು ಹೆಚ್ಚಾಗಿ ಮಾರುಕಟ್ಟೆಗೆ ಪ್ರವೇಶ ಮಾಡಿದಾಗಲೇ ಬೆಲೆ ನಿಗದಿಯಾಗುವುರಿಂದ ಈಗಲೇ ನಿರ್ದಿಷ್ಟ ಬೆಲೆ ಗೊತ್ತಾಗುವುದಿಲ್ಲ. ಹುಳಿಯಾರು ಮಾರುಕಟ್ಟೆಯಿಂದ ಬೇರೆ ಬೇರೆ ರಾಜ್ಯಗಳಿಗೆ ಈ ಭಾಗದ ಹೆಸರು ರವಾನೆಯಾಗುತ್ತದೆ. ಉತ್ತಮ ಫಸಲು ಬಂದು ಹೊರ ರಾಜ್ಯಗಳಿಗೆ ಹೋದರೆ ಉತ್ತಮ ಬೆಲೆಯೂ ಸಿಗುತ್ತದೆ ಎನ್ನುವುದು ರೈತರ ಅಭಿಪ್ರಾಯ.

ಮಾರುಕಟ್ಟೆಗೆ ಆವಕವಾಗುವ ಹೆಸರಿನ ಮೇಲೆ ಬೆಲೆ ನಿದಿಯಾಗುತ್ತದೆ. ಹೊರ ರಾಜ್ಯಗಳಲ್ಲಿ ಬೇಡಿಕೆ ಬಂದು ಹೊರಗಿನವರು ಖರೀದಿಗೆ ಬಂದರೆ ಮಾತ್ರ ಉತ್ತಮ ಬೆಲೆ ರೈತರಿಗೆ ಲಭಿಸುತ್ತದೆ. ಹೆಸರುಕಾಳು ಮಾರುಕಟ್ಟೆ ಪ್ರವೇಶಿಸಿದ್ದು ನಿತ್ಯ ನಾಲ್ಕೈದು ಕ್ವಿಂಟಲ್‌ ಮಾತ್ರ ಬರುತ್ತಿದೆ. ಸದ್ಯಕ್ಕೆ ಯಾವ ಬೆಲೆಗೆ ಕೊಳ್ಳಬೇಕು ಎನ್ನುವುದು ನಮಗೂ ತಿಳಿಯುತ್ತಿಲ್ಲ. ಕ್ವಿಂಟಲ್‌ಗೆ ಸದ್ಯಕ್ಕೆ ₹9 ಸಾವಿರ (ಮಿಂಚುಕಾಳಿಗೆ), ನಾಟಿ ಕಾಳಿಗೆ ₹8,500ಕ್ಕೆ ಕೊಳ್ಳುತ್ತಿದ್ದಾರೆ. ಹೊರ ರಾಜ್ಯಗಳಲ್ಲಿನ ಬೇಡಿಕೆ ಮೇಲೆ ಬೆಲೆ ನಿಗದಿಯಾಗುತ್ತದೆ ಎಂದು ಎಪಿಎಂಸಿ ವರ್ತಕ ಎಚ್.ಜಿ.ಬಸವರಾಜು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT