ಭಾನುವಾರ, ಜೂನ್ 20, 2021
29 °C
ಹೊಸ ಬಟ್ಟೆ ತೊಟ್ಟು, ಭಾಗಿನ ಕೊಟ್ಟು ಸಂಭ್ರಮಿಸಿದ ಮುತ್ತೈದೆಯರು

ವರಮಹಾಲಕ್ಷ್ಮಿ ಸರಳ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಅಷ್ಟೈಶ್ವರ್ಯ ಕರುಣಿಸುವ ವರಮಹಾಲಕ್ಷ್ಮಿ ಹಬ್ಬ ನಗರದಲ್ಲಿ ಸರಳ, ಸಂಭ್ರಮದಿಂದ ನಡೆಯಿತು. ಮನೆಮನೆಗಳಲ್ಲಿ ಹಬ್ಬದ ಸಡಗರ ನೆಲೆಸಿತ್ತು. ಮುತ್ತೈದೆಯರು ಕೊರೊನಾ ಪರಿಣಾಮ ಸರಳ ಆಚರಣೆಗೆ ಮೊರೆಹೋಗಿದ್ದರು.

ಮಕ್ಕಳು, ಮಹಿಳೆಯರು ಹೊಸ ಬಟ್ಟೆ ತೊಟ್ಟು ಸಂಭ್ರಮಿಸಿದರು. ಅಕ್ಕಪಕ್ಕದ ಒಂದೆರಡು ಮನೆಯವರನ್ನಷ್ಟೇ ಪೂಜೆಗೆ ಕರೆದು ಅರಿಸಿನ, ಕುಂಕುಮ, ಭಾಗಿನ ಕೊಟ್ಟು ಆಶೀರ್ವಾದ ಪಡೆದರು. ಒಬ್ಬಟ್ಟು, ಕರ್ಜಿಕಾಯಿ, ಕರಿಗಡುಬು ಮತ್ತಿತರ ಸಿಹಿ ಅಡುಗೆ ಮಾಡಿ ಲಕ್ಷ್ಮಿಗೆ ನೈವೇದ್ಯಕ್ಕಿಟ್ಟು ಬಳಿಕ ಸವಿದರು.

ಲಕ್ಷ್ಮಿಗೆ ವಿಶೇಷ ಅಲಂಕಾರ ಮಾಡುವುದು ಈ ಹಬ್ಬದ ವಿಶೇಷಗಳಲ್ಲಿ ಒಂದು. ಸುಂದರ ಮಂಟಪ ನಿರ್ಮಿಸಿ ವೈವಿಧ್ಯಮಯವಾಗಿ ಅಲಂಕರಿಸಿ ಲಕ್ಷ್ಮಿಯನ್ನು ಕೂರಿಸಿ ಸಂಭ್ರಮಿಸಿದರು. ಕೊರೊನಾ ಕಾರಣ ಮನೆಮಂದಿಯೆಲ್ಲ ಮನೆಯಲ್ಲೇ ಇರುವುದರಿಂದ ಅಲಂಕಾರಕ್ಕೆ ಎಲ್ಲರೂ ಕೈಜೋಡಿಸಿ ಖುಷಿಪಟ್ಟರು. ನೈವೇದ್ಯ, ಹಣ್ಣಿನ ಜತೆಗೆ ಒಡವೆ, ಹಣವಿಟ್ಟು ನಮಿಸಿದರು.

ಈ ಹಬ್ಬದಲ್ಲಿ ಮುತ್ತೈದೆಯರಿಗೆ ಭಾಗಿನ ಕೊಡುವ ಸಂಪ್ರದಾಯ ಮಹತ್ವವಾದುದು. ಆದರೆ, ಕೊರೊನಾ ಪರಿಣಾಮ ಈ ಆಚರಣೆಗೆ ಅಲ್ಪ ತಡೆ ಬಿದ್ದಿದೆ. ಅಪರಿಚಿತರನ್ನು ಕುಂಕುಮಕ್ಕೆ ಕರೆದರೂ ನಿರಾಕರಿಸದೆ ಬರುತ್ತಿದ್ದವರು ಈ ಬಾರಿ ಬೇರೆಯವರ ಮನೆಗಳಿಗೆ ಹೋಗಲು ಭಯಪಡುತ್ತಿದ್ದಾರೆ.

‘ವರಮಹಾಲಕ್ಷ್ಮಿ ಹಬ್ಬದ ಸಮಯದಲ್ಲಿ ನಮ್ಮ ಮನೆಗೆ ನೂರಾರು ಮುತ್ತೈದೆಯರು ಭಾಗಿನ ಪಡೆಯಲು ಬರುತ್ತಿದ್ದರು. ಪ್ರತಿವರ್ಷವೂ ಬಿಡುವಿಲ್ಲದ ಕೆಲಸವಿರುತ್ತಿತ್ತು. ಆದರೆ, ಈ ಬಾರಿ ಸಂಭ್ರಮ ಇಲ್ಲವಾಗಿದೆ. ಸರಳವಾಗಿ ಆಚರಿಸಿದ್ದೇವೆ. ಬಹುತೇಕರು ಕರೆಮಾಡಿ ಈ ಬಾರಿ ಭಾಗಿನಕ್ಕೆ ಬರುವುದಿಲ್ಲ ಕರೆಯಬೇಡಿ ಎಂದು ಹೇಳಿದರು. ಕೊರೊನಾ ಈ ಬಗೆಯ ಭಯ ಸೃಷ್ಟಿಸಿದೆ’ ಎಂದು ಗಾಂಧಿನಗರದ ನಿವಾಸಿ ಹರ್ಷವರ್ಧಿನಿ ಪ್ರಸೂನ್‌ ಹೇಳಿದರು.

ದೇಗುಲಗಳಲ್ಲಿ ವಿಶೇಷ ಪೂಜೆ: ಇನ್ನು ನಗರದ ಲಕ್ಷ್ಮಿ ದೇವಾಲಯಗಳಲ್ಲೂ ಹಬ್ಬದ ವಾತಾವರಣ ಮನೆಮಾಡಿತ್ತು. ವಿಶೇಷ ಪೂಜೆ ನೆರವೇರಿಸಿ, ಭಕ್ತರಿಗೆ ಪ್ರಸಾದ ವಿನಿಯೋಗಿಸಲಾಯಿತು. ಕೊರೊನಾ ಆತಂಕದಿಂದ ದೇವಾಲಯಗಳಲ್ಲಿ ಭಕ್ತರ ಸಂಖ್ಯೆಯೂ ಕಡಿಮೆಯಿತ್ತು.

***

ಈ ಬಾರಿಯೂ ಹಳೆಯ ಅಲಂಕಾರ

ಗಾಂಧಿನಗರದ ಹರ್ಷವರ್ಧಿನಿ ಅವರು ಪ್ರತಿ ವರ್ಷವೂ ಒಂದೊಂದು ಬಗೆಯ ಅಲಂಕಾರ ಮಾಡಿ ವರಮಹಾಲಕ್ಷ್ಮಿಯನ್ನು ಪೂಜಿಸುತ್ತಾರೆ. ಆ ಅಲಂಕಾರವನ್ನು ವರ್ಷಪೂರ್ತಿ ಉಳಿಸಿಕೊಳ್ಳುತ್ತಾರೆ. ಮುಂದಿನ ವರ್ಷಕ್ಕೆ ಅದನ್ನು ತೆರವು ಮಾಡಿ ಬೇರೆ ಬಗೆಯ ಅಲಂಕಾರ ಮಾಡುತ್ತಾರೆ. ಅದಕ್ಕಾಗಿ ಅವರು ತಿಂಗಳುಗಟ್ಟಲೆ ತಯಾರಿ ನಡೆಸುತ್ತಾರೆ. ಆದರೆ, ಈ ಬಾರಿ ಲಾಕ್‌ಡೌನ್‌ ಕಾರಣದಿಂದ ಅಗತ್ಯದ ವಸ್ತುಗಳು ಸಿಗದಿದೆ ಕಳೆದ ವರ್ಷದ ಅಲಂಕಾರವನ್ನೇ ಉಳಿಸಿಕೊಂಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.