ಭಾನುವಾರ, ಸೆಪ್ಟೆಂಬರ್ 19, 2021
23 °C
ಲಾಠಿ ಪ್ರಹಾರಕ್ಕೆ ಖಂಡನೆ: ಸೆ. 25ರಂದು ಭಾರತ್ ಬಂದ್‍ಗೆ ರೈತ ಒಕ್ಕೂಟ ಕರೆ

ರೈತರ ಮೇಲೆ ದೌರ್ಜನ್ಯ: ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ರೈತರ ಮೇಲೆ ಕೇಂದ್ರ ಸರ್ಕಾರ ದೌರ್ಜನ್ಯ ನಡೆಸುತ್ತಿರುವುದನ್ನು ಖಂಡಿಸಿ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ರೈತರು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. ಚಿಕ್ಕಹಳ್ಳಿ ಮಹಿಳೆ ಮೇಲೆ ಅತ್ಯಾಚಾರ ನಡೆಸಿದ ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿದರು.

ಬಿಜಿಎಸ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದರು. ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಹರಿಯಾಣದಲ್ಲಿ ರೈತರ ಮೇಲೆ ಪೊಲೀಸರು ಹಲ್ಲೆ ನಡೆಸಿರುವುದನ್ನು ಖಂಡಿಸಿದರು. ದೌರ್ಜನ್ಯ ಮುಂದುವರಿದರೆ ಹೋರಾಟ ಮತ್ತಷ್ಟು ತೀವ್ರಗೊಳಿಸುವ ಎಚ್ಚರಿಕೆ ನೀಡಿದರು.

ರೈತರ ಮೇಲೆ ನಡೆಯುತ್ತಿರುವ ದೌರ್ಜನ್ಯ ವಿರೋಧಿ ಸೆ. 25ರಂದು ಭಾರತ್ ಬಂದ್‍ಗೆ ರೈತ ಒಕ್ಕೂಟ ಕರೆ ನೀಡಿದ್ದು, ರಾಜ್ಯದಲ್ಲೂ ಬಂದ್‍ಗೆ ಬೆಂಬಲ ನೀಡಲಾಗುವುದು. ಬಂದ್ ಯಶಸ್ವಿಗೊಳಿಸಲು ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಕಾರ್ಯ ನಿರ್ವಹಿಸಲಿದ್ದಾರೆ ಎಂದು ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಪ್ರಕಟಿಸಿದರು.

ರೈತರ ಮೇಲಿನ ದೌರ್ಜನ್ಯ, ದಬ್ಬಾಳಿಕೆ ನಿಲ್ಲಿಸಬೇಕು. ಸುಪ್ರೀಂ ಕೋರ್ಟ್ ನಿರ್ದೇಶನ ಪಾಲಿಸಬೇಕು. ಕೇಂದ್ರ ಸರ್ಕಾರ ರೈತರನ್ನು ಉಗ್ರಗಾಮಿಗಳಂತೆ ನೋಡುತ್ತಿದೆ. ರೈತ ವಿರೋಧಿ ಕಾನೂನು ವಿರೋಧಿಸಿ ಪ್ರತಿಭಟಿಸುತ್ತಿರುವವರ ಮೇಲೆ ದೌರ್ಜನ್ಯ ನಡೆಸಿ, ಕೀಳು ಮಟ್ಟದಲ್ಲಿ ನಡೆದುಕೊಂಡಿದೆ ಎಂದು
ಟೀಕಿಸಿದರು.

ಹರಿಯಾಣ ಮುಖ್ಯಮಂತ್ರಿ ಚಳವಳಿ ಹತ್ತಿಕ್ಕಲು ಪದೇ ಪದೇ ರೈತರ ಮೇಲೆ ಲಾಠಿ ಪ್ರಹಾರ ಮಾಡಿಸುವ ಮೂಲಕ ಪೊಲೀಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅಹಿಂಸಾತ್ಮಕ ಹೋರಾಟ ಮಾಡುತ್ತಿರುವವರ ಮೇಲೆ ಹಿಂಸಾತ್ಮಕವಾಗಿ ಪ್ರಚೋದನೆ ನೀಡುತ್ತಿದ್ದಾರೆ ಎಂದು
ಆರೋಪಿಸಿದರು.

ರೈತ ವಿರೋಧಿಯಾಗಿರುವ ಕಾನೂನನ್ನು ಒಂದೂವರೆ ವರ್ಷ ಜಾರಿಗೆ ತರಬಾರದು ಎಂದು ಸುಪ್ರೀಂ ಕೋರ್ಟ್ ಸೂಚನೆ ನೀಡಿದ್ದರೂ ಸಹ, ಖಾಸಗೀಕರಣ, ನಗರೀಕರಣದ ಘೋಷಣೆಗಳನ್ನು ಕೇಂದ್ರ ಮಾಡುತ್ತಲೇ ಸಾಗಿದೆ. ದೆಹಲಿ ಹೊರ ವಲಯದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರೊಂದಿಗೆ ಪ್ರಧಾನಿ ಮಾತುಕತೆ ನಡೆಸಬೇಕು ಎಂದು ಆಗ್ರಹಿಸಿದರು.

ಮೈಸೂರು, ತುಮಕೂರು, ಬೆಳಗಾವಿಯಲ್ಲಿ ಅತ್ಯಾಚಾರ ನಡೆದಿದೆ. ಗೃಹ ಇಲಾಖೆ ಮುಗ್ಗರಿಸಿದ್ದು, ಆಡಳಿತ ವೈಫಲ್ಯ ಎದುರಿಸುತ್ತಿದೆ. ರಾಜ್ಯದಲ್ಲಿ ಬೆಳಕಿಗೆ ಬಂದಿರುವ ಮಾದಕ ದ್ರವ್ಯ ಪ್ರಕರಣದಲ್ಲಿ ಸಿನಿಮಾ ನಟ, ನಟಿಯರನ್ನು ಬಂಧಿಸಿದರಷ್ಟೇ ಸಾಲದು, ಮಾದಕ ವಸ್ತು ನಿಯಂತ್ರಣಕ್ಕೆ ಕಠಿಣ ಕಾನೂನು ರೂಪಿಸಬೇಕು ಎಂದು ಒತ್ತಾಯಿಸಿದರು.

ಹರಿಯಾಣ ಸರ್ಕಾರ ರೈತರನ್ನು ಆತಂಕವಾದಿಗಳಂತೆ ನಡೆಸಿಕೊಂಡಿದೆ. ಇಂತಹ ಜನವಿರೋಧಿ ನೀತಿಯನ್ನು ಖಂಡಿಸಬೇಕು ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆನಂದ್‍ ಪಟೇಲ್ ಹೇಳಿದರು.

ರಾಜ್ಯದಲ್ಲಿ ನಡೆಯುತ್ತಿರುವ ಅತ್ಯಾಚಾರ, ಮಹಿಳಾ ದೌರ್ಜನ್ಯವನ್ನು ನಿಯಂತ್ರಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರ ಮತ್ತು ಪೊಲೀಸರು ಕಾರ್ಯನಿರ್ವಹಿಸಬೇಕು ಎಂದು ಆಗ್ರಹಿಸಿದರು.

ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಭಕ್ತರಹಳ್ಳಿ ಬೈರೇಗೌಡ, ಕಾರ್ತಿಕ್ ಹೊಸಪೇಟೆ, ಮಹಾಂತೇಶ್ ಪೂಜಾರಿ, ಉಪಾಧ್ಯಕ್ಷರಾದ ಮಂಜುನಾಥಗೌಡ, ಶಾಂತರೆಡ್ಡಿ, ದುರ್ಗಪ್ಪ, ಉಮಾ, ಈರಣ್ಣ, ಗಣೇಶ್ ಇಬ್ಬನಗೆರೆ, ಭೀಮೋಶಿ ಗಡ್ಡದ್, ಧನಂಜಯ ಆರಾಧ್ಯ ಮೊದಲಾದವರು ಭಾಗವಹಿಸಿದ್ದರು.

ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಜಿಲ್ಲಾ ಮಟ್ಟದಲ್ಲಿ ರೈತರ ಸಮಸ್ಯೆ ಬಗೆಹರಿಸಲು ಬದ್ಧವಾಗಿರುವುದಾಗಿ ತಿಳಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.