ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು | ಬೆಂಕಿ ಅವಘಡ: ನೀರಿಗಾಗಿ ಪರದಾಟ

ಅನಧಿಕೃತವಾಗಿ ಪಟಾಕಿ ಸಂಗ್ರಹ, ಬೆಂಕಿ ನಂದಿಸಲು ಹರಸಾಹಸ
Published 3 ಸೆಪ್ಟೆಂಬರ್ 2024, 2:29 IST
Last Updated 3 ಸೆಪ್ಟೆಂಬರ್ 2024, 2:29 IST
ಅಕ್ಷರ ಗಾತ್ರ

ತುಮಕೂರು: ನಗರದ ಮಂಡಿಪೇಟೆಯ ನೇತಾಜಿ ಟ್ರೇಡರ್ಸ್‌ ಗೋದಾಮಿನಲ್ಲಿ ಸೋಮವಾರ ಬೆಂಕಿ ಕಾಣಿಸಿಕೊಂಡು ಅಪಾರ ಪ್ರಮಾಣದ ನಷ್ಟವಾಗಿದ್ದು, ಬೆಂಕಿ ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಪರದಾಡಿದರು.

ಗೋದಾಮಿನಲ್ಲಿ ಅಕ್ರಮವಾಗಿ ಪಟಾಕಿ ಸಂಗ್ರಹಿಸಲಾಗಿತ್ತು. ಮಾಲೀಕರು ಪಟಾಕಿ ಮಾರಾಟ, ಸಂಗ್ರಹಕ್ಕೆ ಯಾವುದೇ ಅನುಮತಿ ಪಡೆದಿರಲಿಲ್ಲ ಎಂಬುವುದು ಅವಘಡದ ನಂತರ ಗೊತ್ತಾಗಿದೆ. ಕಾರ್ಯಾಚರಣೆ ವೇಳೆ ಪಟಾಕಿ ಸಿಡಿಯುತ್ತಿದ್ದರಿಂದ ಬೆಂಕಿಯ ತೀವ್ರತೆ ಮತ್ತಷ್ಟು ಹೆಚ್ಚಾಗಿತ್ತು. ಬೆಂಕಿ ಕಾಣಿಸಿಕೊಂಡ ಕಟ್ಟಡಕ್ಕೆ ಹೋಗಲು ದಾರಿ ಇಲ್ಲದೆ ಹೆಚ್ಚಿನ ಸಮಸ್ಯೆಯಾಯಿತು.

ತುಮಕೂರು, ಗುಬ್ಬಿ, ನೆಲಮಂಗಲ ಅಗ್ನಿಶಾಮಕ ಠಾಣೆಯ 5 ವಾಹನಗಳು ಬೆಂಕಿ ನಂದಿಸುವ ಕಾರ್ಯ ನಡೆಸಿದವು. 30ಕ್ಕೂ ಹೆಚ್ಚು ಸಿಬ್ಬಂದಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಸಮಯಕ್ಕೆ ಸರಿಯಾಗಿ ನೀರಿನ ಸರಬರಾಜು ಆಗದೆ ಬೆಂಕಿ ನಂದಿಸುವ ಕಾರ್ಯ ನಿಧಾನಗತಿಯಲ್ಲಿ ಸಾಗಿತು. ಒಂದು ಕಡೆ ಬೆಂಕಿ ಆರಿಸುವ ಹೊತ್ತಿಗೆ ಮತ್ತೊಂದು ಕಡೆ ಹೊಗೆಯಾಡಲಾರಂಭಿಸಿತು. ಇದರಿಂದ ಅಗ್ನಿ ಶಾಮಕ ದಳದ ಸಿಬ್ಬಂದಿ ಪೇಚಿಗೆ ಸಿಲುಕಿದ್ದರು.

ಮಂಡಿಪೇಟೆಯ ಮೆಟ್ರೊ ಮಾಲ್‌ನಲ್ಲಿ ಸಂಗ್ರಹಿಸಿದ್ದ ಸುಮಾರು 60 ಸಾವಿರ ಲೀಟರ್‌ ನೀರು ಬೆಂಕಿ ನಂದಿಸಲು ಬಳಸಲಾಯಿತು. ಇದರ ಜತೆಗೆ ಮಧ್ಯಾಹ್ನ 12 ಗಂಟೆಯ ವರೆಗೆ ಹತ್ತಿರದ ಜಲ ಮೂಲಗಳಿಂದ ಸುಮಾರು 1 ಲಕ್ಷ ಲೀಟರ್‌ ನೀರು ತಂದು ಬಳಸಿದರೂ ಸಂಪೂರ್ಣವಾಗಿ ಬೆಂಕಿ ಆರಿಸಲು ಸಾಧ್ಯವಾಗಲಿಲ್ಲ. ಸಿಬ್ಬಂದಿ ನೀರಿಲ್ಲದೆ ಬರಿಗೈನಲ್ಲಿ ನಿಂತಿದ್ದ ದೃಶ್ಯಗಳು ಕಂಡು ಬಂದವು. ಹತ್ತಿರದ ಪ್ರದೇಶದಲ್ಲಿ ನೀರು ಸಿಗದಿರುವುದರಿಂದ ತೊಂದರೆಯಾಯಿತು.

‘ಹೆಸರಿಗೆ ಮಾತ್ರ ಸ್ಮಾರ್ಟ್‌ ಸಿಟಿ, ತುರ್ತು ಸಮಯದಲ್ಲಿ ನೀರಿನ ಬಳಕೆಗೆ ಅವಕಾಶವೇ ಇಲ್ಲ. ನಗರದ ಪ್ರಮುಖ ಪ್ರದೇಶಗಳಲ್ಲಿ ತುರ್ತು ಸಂದರ್ಭದಲ್ಲಿ ಅಗ್ನಿ ಶಾಮಕ ದಳದ ವಾಹನಗಳ ಬಳಕೆಗಾಗಿ ನೀರು ಸಂಗ್ರಹಿಸಿಡಬೇಕು. ಅಧಿಕಾರಿಗಳು ಈ ನಿಟ್ಟಿನಲ್ಲಿ ಯಾವುದೇ ಕ್ರಮಕೈಗೊಂಡಿಲ್ಲ. ಇಂತಹ ಅಪಘಡಗಳು ಸಂಭವಿಸಿದಾಗ ಮಾತ್ರ ಎಲ್ಲರೂ ಎಚ್ಚರಗೊಳ್ಳುತ್ತಾರೆ’ ಎಂದು ಮಂಡಿಪೇಟೆ ವ್ಯಾಪಾರಸ್ಥರು ಅಸಮಾಧಾನ ವ್ಯಕ್ತಪಡಿಸಿದರು.

‘ಸ್ಮಾರ್ಟ್‌ ಸಿಟಿಯಿಂದ ಮಂಡಿಪೇಟೆ ರಸ್ತೆಯನ್ನು ಎರಡು ಬಾರಿ ರಿಪೇರಿ ಮಾಡಲಾಯಿತು. ಚೆನ್ನಾಗಿದ್ದ ರಸ್ತೆಯನ್ನು ಅಗೆಯಲಾಗಿದೆ. ಇದರ ಬದಲಾಗಿ ಕೊಳವೆ ಬಾವಿ ಕೊರೆಸಿ, ನೀರು ಸಂಗ್ರಹಕ್ಕೆ ಯೋಜನೆ ರೂಪಿಸಿದ್ದರೆ ತುರ್ತು ವೇಳೆಯಲ್ಲಿ ಪ್ರಯೋಜನವಾಗುತ್ತಿತ್ತು. ಅಧಿಕಾರಿಗಳು ಬೇಡದ ಕೆಲಸಕ್ಕೆ ಹೆಚ್ಚಿನ ಆಸಕ್ತಿ ತೋರುತ್ತಾರೆ’ ಎಂದು ವರ್ತಕರು ಕಿಡಿಕಾರಿದರು.

ರಸ್ತೆ ಬಂದ್‌: ಮಂಡಿಪೇಟೆ ವೃತ್ತದಿಂದ ಮೆಟ್ರೊ ಮಾಲ್‌ ವರೆಗಿನ ಮುಖ್ಯರಸ್ತೆ ಬಂದ್‌ ಮಾಡಲಾಗಿತ್ತು. ಬೆಂಕಿ ಕಾಣಿಸಿಕೊಂಡ ಗೋದಾಮಿನ ಸುತ್ತಮುತ್ತಲಿನ ಅಂಗಡಿಗಳು ಮುಚ್ಚಿದ್ದವು. ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿತ್ತು. ನಗರ, ತಿಲಕ್‌ ಪಾರ್ಕ್‌ ಠಾಣೆ ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.

ತುಮಕೂರಿನ ಮಂಡಿಪೇಟೆಯ ಮೆಟ್ರೊ ಮಾಲ್‌ನಿಂದ ವಾಹನಕ್ಕೆ ನೀರು ತುಂಬಿಸಲಾಯಿತು
ತುಮಕೂರಿನ ಮಂಡಿಪೇಟೆಯ ಮೆಟ್ರೊ ಮಾಲ್‌ನಿಂದ ವಾಹನಕ್ಕೆ ನೀರು ತುಂಬಿಸಲಾಯಿತು

ಅಕ್ರಮವಾಗಿ ಪಟಾಕಿ ಸಂಗ್ರಹ

ನೇತಾಜಿ ಟ್ರೇಡರ್ಸ್‌ನಲ್ಲಿ ಪೂಜೆ ಅಭಿಷೇಕ ಹೋಮದ ಸಾಮಗ್ರಿ ಗ್ರಂಧಿಗೆ ಸಾಮಗ್ರಿ ಹಾರ ಶಾಲು ಪೇಟ ಬಲೂನ್‌ಗಳ ಮಾರಾಟಕ್ಕೆ ಮಾತ್ರ ಅವಕಾಶ ಇದೆ. ಕಟ್ಟಡದ ಮೊದಲ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಮಹಡಿಯ ಶೇ 85ರಷ್ಟು ಜಾಗದಲ್ಲಿ ಗ್ರಂಧಿಗೆ ಸಾಮಗ್ರಿ ತುಂಬಿಸಿದ್ದರು. ಉಳಿದ ಪ್ರದೇಶದಲ್ಲಿ ಪಟಾಕಿ ಸಂಗ್ರಹಿಸಲಾಗಿತ್ತು. ಬೆಳಿಗ್ಗೆ 7 ಗಂಟೆ ಸಮಯದಲ್ಲಿ ಅವಘಡ ಸಂಭಿವಿಸಿದ್ದು ಮಧ್ಯಾಹ್ನ 1 ಗಂಟೆಯಾದರೂ ಬೆಂಕಿ ನಂದಿಸುವ ಕಾರ್ಯ ಪೂರ್ಣಗೊಳ್ಳಲಿಲ್ಲ.

ಬೆಂಕಿಯ ತೀವ್ರತೆ ಹೆಚ್ಚಿತ್ತು

ಬೆಂಕಿ ತೀವ್ರತೆ ಹೆಚ್ಚಿದ್ದಾಗ ಸಾಕಷ್ಟು ಪ್ರಮಾಣದಲ್ಲಿ ನೀರು ಬೇಕಾಗುತ್ತದೆ. ಅವಘಡ ಸಂಭವಿಸಿದ ಪ್ರದೇಶದ ಅಕ್ಕ–ಪಕ್ಕದಲ್ಲಿನ ನೀರಿನ ಮೂಲಗಳಿಂದ ನೀರು ತರಿಸಿಕೊಳ್ಳಲಾಗುತ್ತದೆ. ಬೆಂಕಿ ಕಾಣಿಸಿಕೊಂಡ ಕಟ್ಟಡಕ್ಕೆ ಹೋಗಲು ಯಾವುದೇ ವ್ಯವಸ್ಥೆ ಇರಲಿಲ್ಲ. ಜೆಸಿಬಿ ವಾಹನದ ಮೂಲಕ ಕಟ್ಟಡದ ಹಿಂಭಾಗ ಮತ್ತು ಪಕ್ಕದಲ್ಲಿದ್ದ ಗೋಡೆ ಒಡೆದು ಕಾರ್ಯಾಚರಣೆ ನಡೆಸಬೇಕಾಯಿತು. ಕಾನೂನು ಬಾಹಿರವಾಗಿ ಪಟಾಕಿ ಸಂಗ್ರಹಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಶಶಿಧರ್‌ ಜಿಲ್ಲಾ ಅಗ್ನಿಶಾಮಕ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT