ಗುಬ್ಬಿ: ಅಂತರ್ಜಲ ವೃದ್ಧಿಸುವ ನಿಟ್ಟಿನಲ್ಲಿ ಕೆರೆ- ಕಟ್ಟೆಗಳಲ್ಲಿ ಹೂಳು ತೆಗೆದು ನೀರು ಸಂಗ್ರಹಿಸಬೇಕಾದ ಅಗತ್ಯವಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದ ನಿರ್ದೇಶಕ ಸತೀಶ್ ಸುವರ್ಣ ತಿಳಿಸಿದರು.
ತಾಲ್ಲೂಕಿನ ಪಟ್ರಾವರ್ತನಹಳ್ಳಿಯಲ್ಲಿ ಗುರುವಾರ ಪುನಃಶ್ಚೇತನಗೊಳಿಸಿದ್ದ ಕೆರೆಯ ಅಂಗಳದಲ್ಲಿ ನೀರು ಮತ್ತು ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಿ ಮಾತನಾಡಿದರು.
ಹೆಚ್ಚು ನೀರು ಸಂಗ್ರಹಿಸುವ ಉದ್ದೇಶದಿಂದಲೇ ಹಿರಿಯರು ಕೆರೆ-ಕಟ್ಟೆಗಳನ್ನು ನಿರ್ಮಿಸಿದ್ದರು. ಅವುಗಳನ್ನು ಜೋಪಾನವಾಗಿ ಕಾಪಾಡಿಕೊಳ್ಳುವುದು ಎಲ್ಲರ ಜವಾಬ್ದಾರಿ. ಕಾಲಕಾಲಕ್ಕೆ ಹೂಳನ್ನು ತೆಗೆಯುವುದರಿಂದ ವ್ಯವಸ್ಥಿತವಾಗಿ ನೀರು ಸಂಗ್ರಹವಾಗಿ ಜನ, ಜಾನುವಾರುಗಳಿಗೆ ಅನುಕೂಲವಾಗುವುದು ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಪುಟ್ಟರಾಜು ಮಾತನಾಡಿ, ಸಾಮಾಜಿಕ ಕಳಕಳಿಯಿಂದ ಜನರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ಸಂಸ್ಥೆ ರೂಪಿಸುತ್ತಿದೆ. ಕೆರೆಯಲ್ಲಿ ಹೂಳು ತೆಗೆದಿರುವುದರಿಂದ ಹೆಚ್ಚು ನೀರು ಸಂಗ್ರಹವಾಗುತ್ತಿದೆ. ಇದರಿಂದ ಸುತ್ತಲಿನ ಗ್ರಾಮಗಳಲ್ಲಿ ಅಂತರ್ಜಲ ವೃದ್ಧಿಯಾಗುತ್ತದೆ ಎಂದರು.
ಧರ್ಮಸ್ಥಳ ಸಂಸ್ಥೆಯ ತಾಲ್ಲೂಕು ಘಟಕದ ನಿರ್ದೇಶಕ ರಾಜೇಶ್ ಮಾತನಾಡಿ, ಪರಿಸರ ಸಂರಕ್ಷಣೆಯಲ್ಲಿ ಸಮುದಾಯ ಪಾಲ್ಗೊಳ್ಳುವಂತೆ ಮಾಡಲು ನಿರಂತರವಾಗಿ ಜಾಗೃತಿ ಅಭಿಯಾನಗಳನ್ನು ನಡೆಸಲಾಗುತ್ತಿದೆ ಎಂದರು.
ಜಿಲ್ಲಾ ಜನಜಾಗೃತಿ ವೇದಿಕೆಯ ಲಕ್ಕಣ್ಣ, ಕೃಷಿ ಮೇಲ್ವಿಚಾರಕ ರಘುರಾಜ್, ಸ್ಥಳೀಯ ಮೇಲ್ವಿಚಾರಕ ಶಶಿಕಲ, ಸೇವಾಪ್ರತಿನಿಧಿ ರಾಜಣ್ಣ, ನರಸಿಂಹಮೂರ್ತಿ ಹಾಗೂ ಸ್ವಸಹಾಯ ಸಂಘಗಳ ಸದಸ್ಯರು ಹಾಜರಿದ್ದರು.