ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೃತೂರಿನಲ್ಲಿ ಹೆಚ್ಚಿದ ನೀರಿನ ಸಮಸ್ಯೆ

9 ಕೊಳವೆ ಬಾವಿಗಳಿದ್ದರೂ ಒಂದರಲ್ಲಿ ಮಾತ್ರ ನೀರು; ಟ್ಯಾಂಕರ್‌ ಮೂಲಕ ಸರಬರಾಜು
Last Updated 27 ಮಾರ್ಚ್ 2019, 16:59 IST
ಅಕ್ಷರ ಗಾತ್ರ

ಕುಣಿಗಲ್: ತಾಲ್ಲೂಕಿನ ಅಮೃತೂರು ಹೋಬಳಿ ಕೇಂದ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುತ್ತಿದ್ದು, ಅತ್ತ ನಾಗರಿಕರು ನೀರಿಗಾಗಿ ಪರದಾಡುತ್ತಿದ್ದರೇ, ಅಧಿಕಾರಿಗಳು ಸಮಸ್ಯೆ ನಿವಾರಿಸಲು ಹರಸಾಹಸ ಪಡುತ್ತಿದ್ದಾರೆ.

ಅಮೃತೂರು 5 ಸಾವಿರ ಜನಸಂಖ್ಯೆಯ ಪ್ರದೇಶವಾಗಿದ್ದು, ನಾಲ್ಕು ಬ್ಲಾಕ್‌ಗಳಿವೆ. ನಾಲ್ಕನೇ ಬ್ಲಾಕ್ ಹೊರತುಪಡಿಸಿದರೇ ಉಳಿದ ಬ್ಲಾಕ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಈ ಭಾಗದಲ್ಲಿ 9 ಕೊಳವೆಬಾವಿಗಳಿದ್ದರೂ 6ರಲ್ಲಿ ನೀರು ಬತ್ತಿಹೋಗಿದೆ. ಉಳಿದ 3ರಲ್ಲಿ ಶಾಸಕರು ಈಚೆಗೆ ಕೊರೆಯಿಸಿದ ಕೊಳವೆಬಾವಿಯಲ್ಲಿ ಮಾತ್ರ ನೀರು ಬರುತ್ತಿದ್ದು, ಉಳಿದ ಎರಡು ಕೊಳವೆಬಾವಿಗಳಲ್ಲಿ ನೀರು ನಿರಂತರವಾಗಿ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಪಂಚಾಯಿತಿ ಕಾರ್ಯದರ್ಶಿ ಕೃಷ್ಣ ತಿಳಿಸಿದರು.

ಖಾಸಗಿ ಕೊಳವೆಬಾವಿ ಮಾಲೀಕರಲ್ಲಿ ಮನವಿ ಮಾಡಿ ಒಂದು ಟ್ಯಾಂಕರ್‌ಗೆ ₹ 100 ತೆತ್ತು ನೀರನ್ನು ಪಡೆದು ಗ್ರಾಮಸ್ಥರಿಗೆ ವಿತರಣೆ ಮಾಡಲಾಗುತ್ತಿದೆ. ನಿತ್ಯ 16 ಟ್ರಿಪ್‌ಗಳಲ್ಲಿ ನೀರನ್ನು ಸರಬರಾಜು ಮಾಡಿ ದಾಹ ತಣಿಸಲು ಶ್ರಮಿಸುತ್ತಿರುವುದಾಗಿ ಕೃಷ್ಣ ತಿಳಿಸಿದ್ದಾರೆ.

ಕಳೆದ 25 ವರ್ಷಗಳಲ್ಲಿ ಪ್ರಥಮಬಾರಿಗೆ ನೀರಿನ ಸಮಸ್ಯೆ ಹೆಚ್ಚಾಗಿದೆ. ಸುತ್ತಮುತ್ತಲಿನ ಪ್ರದೇಶದಲ್ಲಿ 50ಕ್ಕೂ ಹೆಚ್ಚು ಕೊಳವೆಬಾವಿಗಳು ಬತ್ತಿ ಹೋಗಿವೆ. ಕಾರಣ ಈ ಬಾರಿ ಮಾರ್ಕೋನಹಳ್ಳಿ ಜಲಾಶಯದಿಂದ ಅಚ್ಚುಕಟ್ಟು ಪ್ರದೇಶದ ಸಾಲು ಕೆರೆಗಳಿಗೆ ನೀರು ಹರಿಯದೆ, ಅಂತರ್ಜಲ ಕುಸಿತವಾಗಿದೆ. ಶಾಸಕರು ಸಂಸದರು ಸಾಲು ಕೆರೆಗಳಿಗೆ ನೀರು ಹರಿಸುವ ಪ್ರಯತ್ನ ಮಾಡಿದ್ದರೆ ನೀರಿನ ಸಮಸ್ಯೆ ಉಂಟಾಗುತ್ತಿರಲ್ಲಿಲ್ಲ. ಅಮೃತೂರಿನ ಜನ ಕ್ಯಾನ್‌ಗಳನ್ನು ತೆಗೆದುಕೊಂಡು ಹೊಸಪಾಳ್ಯ ಸೇರಿದಂತೆ ಇತರೆ ಗ್ರಾಮಗಳ ಖಾಸಗಿ ಕೊಳವೆ ಬಾವಿಗಳಿಂದ ನೀರನ್ನು ಸಂಗ್ರಹಿಸಿ ಕುಡಿಯುವ ಪರಿಸ್ಥಿತಿ ಬಂದಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಶ್ರೀನಿವಾಸ್‌ ತಿಳಿಸಿದರು.

‘ಅಮೃತೂರು ಪಕ್ಕದ ಕೊಡಿಗೆಹಳ್ಳಿ ಪಂಚಾಯಿತಿಯ ದೇವರಾಯನ ಪಾಳ್ಯದಲ್ಲಿ ಜನವರಿಯಿಂದಲೇ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಇದ್ದ ಒಂದು ಕೊಳವೆಬಾವಿ ಬತ್ತಿ ಹೋಗಿದೆ. ಪಂಚಾಯಿತಿಯವರು ನಿತ್ಯ ಸಾವಿರ ರೂಪಾಯಿ ವೆಚ್ಚದಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜಿಗೆ ಮುಂದಾಗಿದ್ದಾರೆ. ನೀರು ಸರಬರಾಜಿನ ಬಿಲ್ ಒಂದು ಲಕ್ಷಕ್ಕೆ ಬಂದಿದೆ. ಅಧಿಕಾರಿಗಳು
ಪರ್ಯಾಯ ವ್ಯವಸ್ಥೆಯ ಕೊಳವೆಬಾವಿ ಕೊರೆಯಿಸಲು ಮನವಿ ಮಾಡಿದ್ದರೂ ಗಮನ ಹರಿಸಿರುವುದಿಲ್ಲ’ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ದಿನೇಶ್ ಕುಮಾರ್ ಆರೋಪಿಸಿದ್ದಾರೆ.

ಟ್ಯಾಂಕರ್ ನೀರು ಪಡೆಯುತ್ತಿರುವ ಗ್ರಾಮಗಳು
ಅಮೃತೂರು ಪಂಚಾಯಿತಿ ಒಂದು, ಎರಡು ಮತ್ತು ಮೂರನೇ ಬ್ಲಾಕ್, ಹುತ್ರಿದುರ್ಗ ಹೋಬಳಿ ಅಂದಾನಿಗೌಡನಪಾಳ್ಯ, ಎಡೆಯೂರು ಹೋಬಳಿ ಮದುರೈ ಪಾಳ್ಯ, ನಾಗಸಂದ್ರ ಪಂಚಾಯಿತಿಯ ಕಂಚಗಾಲಪುರ, ರಾಮನಾಯಕನಪಾಳ್ಯ, ಪಟೇಲ್ ಪಾಳ್ಯ ಸರ್ಕಾರಿಫ್ರೌಢಶಾಲೆ ಮತ್ತು ಸದನಹಳ್ಳಿ

11 ಗ್ರಾಮಗಳಲ್ಲಿ ನೀರಿನ ಸಮಸ್ಯೆ
ಅಮೃತೂರಿನಲ್ಲಿ ನೀರಿನ ಸಮಸ್ಯೆ ಹೆಚ್ಚಾಗುತ್ತಿರುವುದು ಗಮನಕ್ಕೆ ಬಂದಿದೆ. ಮತ್ತೊಂದು ಕೊಳವೆಬಾವಿ ಕೊರೆಯಿಸಲು ಕ್ರಮ ತೆಗೆದುಕೊಳ್ಳಲಾಗುವುದು. ತಾಲ್ಲೂಕಿನ ನಾಲ್ಕು ಗ್ರಾಮ ಪಂಚಾಯಿತಿಯ 11 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉಂಟಾಗಿರುವ ಕಾರಣ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿದೆ.
– ಶಿವರಾಜಪ್ಪ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT