ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಧದಷ್ಟು ಕೆರೆಗಳಿಗೆ ನೀರು ಪೂರೈಕೆ: ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ

ತಾಲ್ಲೂಕುವಾರು ನೀರು ಹಂಚಿಕೆ
Last Updated 30 ಮಾರ್ಚ್ 2021, 6:15 IST
ಅಕ್ಷರ ಗಾತ್ರ

ತುಮಕೂರು: ಎತ್ತಿನಹೊಳೆ, ಹೇಮಾವತಿ, ಭದ್ರಮೇಲ್ದಂಡೆ ಯೋಜನೆಗಳಿಂದ ಜಿಲ್ಲೆಯಲ್ಲಿರುವ ಒಟ್ಟು ಕೆರೆಗಳಲ್ಲಿ ಅರ್ಧದಷ್ಟು ಕೆರೆಗಳನ್ನು ತುಂಬಿಸಲಾಗುವುದು ಎಂದು ಸಣ್ಣ ನೀರಾವರಿ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.

ಮೂರು ಯೋಜನೆಗಳಿಂದ ತಾಲ್ಲೂಕುವಾರು ನೀರಿನ ಹಂಚಿಕೆಯ ಬಗ್ಗೆ ವಿಸ್ತೃತವಾಗಿ ಜನಪ್ರತಿನಿಧಿಗಳು, ಅಧಿಕಾರಿಗಳ ಜತೆ ಸೋಮವಾರ ಚರ್ಚಿಸಿದರು.

ಈ ಮೂರು ಯೋಜನೆಗಳಲ್ಲಿ ಹಂಚಿಕೆಯಾದ ಎಲ್ಲಾ ಕೆರೆಗಳಿಗೆ ಅರ್ಧದಷ್ಟಾದರೂ ನೀರು ತುಂಬಿಸುವ ಗುರಿ ಹೊಂದಲಾಗಿದೆ. ಹೇಮಾವತಿಯಿಂದ ಜಿಲ್ಲೆಗೆ ಹರಿಯುವ ನೀರನ್ನು ಈ ವರ್ಷ ಸಮಗ್ರವಾಗಿ ಬಳಕೆ ಮಾಡಲಾಗಿದೆ. ಕೆರೆಗಳಿಗೆ ನೀರು ತುಂಬಿಸುವಾಗ ಹಾಗೂ ತುಂಬಿಸಿದ ನಂತರ ಅಪವ್ಯಯವಾಗದಂತೆ ಎಚ್ಚರಿಕೆವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಹೇಮಾವತಿಯಿಂದ ಹರಿಸಿದ ನೀರು ಬಹುತೇಕ ಕೆರೆಗಳಲ್ಲಿ ತಳಮಟ್ಟದಲ್ಲೂ ನಿಲ್ಲುತ್ತಿಲ್ಲ. ಹೆಸರಿಗೆ ಮಾತ್ರ ನೀರು ಹಂಚಿಕೆ ಮಾಡಲಾಗಿದೆ. ಇದನ್ನು ಮಾರ್ಪಡಿಸಬೇಕು. ಕಡಿಮೆ ಹಂಚಿಕೆಯಾದ ಅಥವಾ ಎತ್ತಿನಹೊಳೆ, ಭದ್ರ ಮೇಲ್ದಂಡೆ ಯೋಜನೆಯ ನಾಲೆಗಳಿಗೆ ಸಮೀಪದ ಕೆರೆಗಳನ್ನು ಈ ಯೋಜನೆಗಳಿಂದಲೇ ತುಂಬಿಸಲಾಗುವುದು. ಇಂತಹ ಕೆರೆಗಳಿಗೆ ನಿಗದಿಯಾದ ನೀರನ್ನು ಕಡಿಮೆ ಹಂಚಿಕೆಯಾದ ಕೆರೆಗಳಿಗೆ ಹರಿಸುವ ಯೋಜನೆ ಸಿದ್ಧಪಡಿಸಬೇಕು ಎಂದು ಹೇಮಾವತಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ನೀರಾವರಿ ಯೋಜನೆಯಲ್ಲಿ ಭೂ ಸ್ವಾಧೀನ ಮಾಡಿಕೊಂಡ ಭೂಮಿಗೆ ಶೀಘ್ರ ಪರಿಹಾರ ತಲುಪಿಸುವ ವ್ಯವಸ್ಥೆ ಮಾಡಬೇಕು. 2013ರ ಕಾಯ್ದೆಯಂತೆ ಭೂಸ್ವಾಧೀನಕ್ಕೆ ಹಣ ಮೀಸಲಿಡಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಕೇಶ್ ಸಿಂಗ್ ಅವರಿಗೆ ತಿಳಿಸಿದರು.

ಗುಬ್ಬಿ ಶಾಸಕ ಶ್ರೀನಿವಾಸ್, ‘ಹೊಸ ವ್ಯವಸ್ಥೆಯಲ್ಲಿ ನೀರಿನ ಹಂಚಿಕೆ ಹೇಗೆ’ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಗುಬ್ಬಿ ತಾಲ್ಲೂಕು ಹಾಗಲವಾಡಿ ಕೆರೆಗೆ ನೀರು ಹರಿಸಲು 4 ಕಿ.ಮೀ ನಾಲೆ ಮಾಡಬೇಕಿದೆ. ಅದರ ಬದಲು ಪೈಪ್‌ಲೈನ್ ಮಾಡಲು ಸೂಚಿಸಲಾಗಿದೆ ಎಂದರು.

ಪಾವಗಡ ಶಾಸಕ ವೆಂಕಟರಮಣಪ್ಪ, ‘ಬರಪೀಡಿತವಾದ ತಾಲ್ಲೂಕಿಗೆ ಕಡಿಮೆ ನೀರು ಹಂಚಿಕೆ ಮಾಡಲಾಗಿದೆ. ಬೇರೆ ನೀರಿನ ಮೂಲಗಳು ಇಲ್ಲ. ಹಾಗಾಗಿ ಹೆಚ್ಚು ನೀರು ಹಂಚಿಕೆ ಮಾಡಬೇಕು’ ಎಂದು ಮನವಿ ಮಾಡಿದರು.

‘ತುಂಗಭದ್ರ ಮತ್ತು ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಕೆರೆಗಳ ವಿಸ್ತೀರ್ಣದ ಆಧಾರದ ಮೇಲೆ ನೀರು ಹಂಚಿಕೆ ಮಾಡಲಾಗಿದೆ. ತಾಲ್ಲೂಕಿನ 38 ಕೆರೆಗಳಿಗೆ ನೀರು ಹರಿಸಲು ಯೋಜಿಸಲಾಗಿದೆ’ ಎಂದು ಸಚಿವರು ಸ್ಪಷ್ಟಪಡಿಸಿದರು.

ವಿಶೇಷ ಕಾರಣಕ್ಕೆ ಹೇಮಾವತಿ ನಾಲೆಯಿಂದ ಮದಲೂರು ಕೆರೆಗೆ ನೀರು ಹರಿದಿದ್ದು, ಭದ್ರ ಮೇಲ್ದಂಡೆ ಯೋಜನೆ ಮೂಲಕ, ಕಳ್ಳಂಬೆಳ್ಳ, ತರೂರು, ಬ್ರಹ್ಮಸಂದ್ರ ಕೆರೆಗಳಿಗೆ ನೀರು ಹರಿಸಲಾಗುವುದು. 20 ಕಿ.ಮೀ ವ್ಯಾಪ್ತಿಯಲ್ಲಿ 12 ಚೆಕ್ ಡ್ಯಾಂಗಳಿವೆ. ಇದರಿಂದಾಗಿ ಹೇಮಾವತಿಯಿಂದ ತಾಲ್ಲೂಕಿನ ಕೆರೆಗಳಿಗೆ ನೀರು ಹರಿಸುವುದು ಕಷ್ಟ. ಹಾಗಾಗಿ ಭದ್ರಾ ಮೇಲ್ದಂಡೆ ಯೋಜನೆಯಿಂದಲೇ ನೀರು ಹರಿಸಲಾಗುವುದು ಎಂದು ಮಾಧುಸ್ವಾಮಿ ತಿಳಿಸಿದರು.

ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ. ಗೌರಿಶಂಕರ್, ‘ವೃಷಭಾವತಿ ನೀರನ್ನು ತಾಲ್ಲೂಕಿನ ಇನ್ನಷ್ಟು ಕೆರೆಗಳಿಗೆ ಹರಿಸಬೇಕು. ಗೂಳೂರು, ಬೆಳ್ಳಾವಿ ಕೆರೆಗಳಿಗೆ ಹೆಚ್ಚು ನೀರಿನ ಹಂಚಿಕೆ ಮಾಡಬೇಕು’ ಎಂದು ಮನವಿ ಮಾಡಿದರು.

‘ಬೆಳ್ಳಾವಿ, ಗೂಳೂರು ಹೋಬಳಿ ಕೆರೆಗಳನ್ನು ಶೇ 50ರಷ್ಟು ತುಂಬಿಸಬೇಕು. ಹೇಮಾವತಿಯಿಂದ ನೀರು ಹರಿಸಲು ಸಾಧ್ಯವಾಗದ ಕೆರೆಗಳಿಗೆ ಎತ್ತಿನಹೊಳೆಯಿಂದ ಹರಿಸಬೇಕು. ಈ ಬಗ್ಗೆ ಯೋಜನೆ ಸಿದ್ಧಪಡಿಸುವಂತೆ’ ಹೇಮಾವತಿ ಅಧಿಕಾರಿಗೆ ಸೂಚಿಸಿದರು.

ಮಧುಗಿರಿ ಶಾಸಕ ಎಂ.ವಿ. ವೀರಭದ್ರಯ್ಯ, ತಾಲ್ಲೂಕಿನ 111 ಕೆರೆಗಳಿಗೆ ನೀರು ಹರಿಸಲು ಸಿದ್ಧತೆ ನಡೆಸಲಾಗಿದೆ. ಇನ್ನಷ್ಟು ಕೆರೆಗಳನ್ನು ತುಂಬಿಸುವಂತೆ ಕೇಳಿಕೊಂಡರು.

ಶಾಸಕ ಜಿ.ಬಿ. ಜ್ಯೋತಿಗಣೇಶ್, ನಗರದ ಭವಿಷ್ಯದ ದೃಷ್ಟಿಯಿಂದ ಹೆಚ್ಚುವರಿಯಾಗಿ ನೀರು ಒದಗಿಸಬೇಕು ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT