ಬುಧವಾರ, ಏಪ್ರಿಲ್ 14, 2021
24 °C
ಬೆಳೆಗಳು ಮೊಳಕೆಯಲ್ಲಿಯೇ ನಾಶ: ಕೃಷಿಕರು ಕಂಗಾಲು

ಎಲ್ಲೆ ಮೀರಿದ ಕಾಡುಹಂದಿ ಕಾಟ

ಆರ್.ಸಿ.ಮಹೇಶ್ Updated:

ಅಕ್ಷರ ಗಾತ್ರ : | |

Prajavani

ಹುಳಿಯಾರು: ಹೋಬಳಿ ವ್ಯಾಪ್ತಿಯ ಬಹುತೇಕ ಕಡೆಗಳಲ್ಲಿ ಕಾಡುಹಂದಿಗಳ ಹಾವಳಿ ಹೆಚ್ಚಾಗಿದ್ದು, ನೂರಾರು ಕೃಷಿಕರು ಕೆಂಗೆಟ್ಟಿದ್ದಾರೆ. ಅಪಾರ ಪ್ರಮಾಣದಲ್ಲಿ ತೆಂಗು, ಅಡಿಕೆ, ಬಾಳೆ ಸೇರಿದಂತೆ ಇತರ ಬೆಳೆಗಳನ್ನು ಮೊಳಕೆ ಹಂತದಲ್ಲಿಯೇ ನಾಶವಾಗುತ್ತಿದೆ.

ಹೋಬಳಿ ವ್ಯಾಪ್ತಿಯ ಕೆಲ ಗ್ರಾಮಗಳ ಪಕ್ಕದಲ್ಲಿ ಅರಣ್ಯ ಪ್ರದೇಶವಿದ್ದು, ಗುಡ್ಡಗಳು ಸಹ ಹೊಂದಿಕೊಂಡಿವೆ. ಬೋರನಕಣಿವೆ ಜಲಾಶಯ ಸೇರಿದಂತೆ ಹತ್ತಾರು ನೀರು ತಂಬಿರುವ ಕೆರೆಗಳು ಹಾಗೂ ಖಾಲಿ ಕೆರೆಗಳು ಇವೆ. ಇವುಗಳನ್ನೇ ಆವಾಸ ಸ್ಥಾನ ಮಾಡಿಕೊಂಡಿರುವ ಕಾಡುಹಂದಿಗಳು ಸಂಜೆಯಾದೊಡನೆ ರೈತರ ಹೊಲಗಳಿಗೆ ಲಗ್ಗೆಯಿಡುತ್ತವೆ. ಕೋರೆ ಹಲ್ಲುಗಳಿಂದ ಬುಡ ಸಮೇತ ತಿವಿದು ನಾಶಪಡಿಸುತ್ತಿವೆ. ಶೇಂಗಾ ಬೀಜಗಳನ್ನು ಬಿತ್ತನೆ ಹಂತದಲ್ಲಿಯೇ ಸಾಲು ಸಾಲು ತಿಂದು ಮುಗಿಸುತ್ತವೆ.

ಮಿಡಿಸೌತೆ ಹಾಗೂ ತರಕಾರಿ ಬೆಳೆಗಳನ್ನು ನಾಟಿಯಿಂದ ಹಿಡಿದು ಕೊನೆವರೆಗೂ ರಾತ್ರಿ ವೇಳೆ ಕಾಯುವ ಸ್ಥಿತಿ ನಿರ್ಮಾಣವಾಗಿದೆ. ರಾಗಿ, ನವಣೆ, ಸಾಮೆ ಸೇರಿದಂತೆ ಕಿರುಧಾನ್ಯಗಳ ತೆನೆಯನ್ನು ನಾಶ ಮಾಡಿ ಕೈಗೆ ಬಂದ ತುತ್ತು ಕೈಗೆ ಬಾರದ ಸ್ಥಿತಿ ತಂದೊಡ್ಡುತ್ತವೆ. ತೆಂಗಿನಮರಗಳಿಂದ ರಾತ್ರಿ ವೇಳೆ ಬಿದ್ದ ಕಾಯಿಗಳನ್ನು ಸುಲಿದು ತಿನ್ನುತ್ತವೆ. ಪ್ರತಿಯೊಂದು ತೋಟಗಳಲ್ಲಿಯೂ ರಾತ್ರಿ ವೇಳೆ ಬಿದ್ದ ತೆಂಗಿನಕಾಯಿಗಳು ರೈತರಿಗೆ ದಕ್ಕುವುದಿಲ್ಲ. ಮರಿಗಳ ಸಮೇತ ಗುಂಪು ಗುಂಪು ಕಾಡುಹಂದಿಗಳು ಒಮ್ಮೆ ರೈತರ ಹೊಲಗಳಿಗೆ ನುಗ್ಗುತ್ತವೆ ಎಂದು ಮೇಲನಹಳ್ಳಿ ಗ್ರಾಮದ ರೈತ ಮೇಲಪ್ಪ ಹೇಳುತ್ತಾರೆ.

ರೈತರಿಗೆ ದಕ್ಕದ ಪರಿಹಾರ: ಕಾಡುಹಂದಿಗಳ ಹಾವಳಿಗೆ ತುತ್ತಾದ ರೈತರು ಅರಣ್ಯ ಇಲಾಖೆಯ ಮೊರೆ ಹೋಗಿ ಪರಿಹಾರ ಪಡೆಯುವ ಅವಕಾಶವಿದೆ. ಆದರೆ ಒಂದು ದಿನ ಒಂದಿಬ್ಬರ ತೋಟದಲ್ಲಿ ಸ್ವಲ್ಪವೇ ಬೆಳೆ ನಾಶ ಮಾಡಿ ನಾಪತ್ತೆಯಾಗುತ್ತವೆ. ಆಗಾಗ ಸ್ವಲ್ಪ ಸ್ವಲ್ಪವೇ ತಿಂದು ನಾಶ ಮಾಡಿ ತಿಂಗಳಾಗುವಷ್ಟರಲ್ಲಿ ಹೆಚ್ಚು ನಷ್ಟ ಮಾಡುತ್ತವೆ. ಇಂತಹ ಸಮಯದಲ್ಲಿ ರೈತರು ಪರಿಹಾರಕ್ಕೆ ಅರ್ಜಿ ಹಾಕುವಂತೆಯೂ ಇಲ್ಲ, ಮತ್ತೆ ಬೆಳೆ ನಾಟಿಮಾಡದಂತಹ ಸ್ಥಿತಿ ನಿರ್ಮಾಣವಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.