ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಸ್‌ಗಳಲ್ಲಿ ತ್ರಿಪದಿ ಬರೆಸಲು ಸಾಹಿತಿ ಕುಂ. ವೀರಭದ್ರಪ್ಪ ಒತ್ತಾಯ

Published 25 ಫೆಬ್ರುವರಿ 2024, 14:38 IST
Last Updated 25 ಫೆಬ್ರುವರಿ 2024, 14:38 IST
ಅಕ್ಷರ ಗಾತ್ರ

ಚಿಕ್ಕನಾಯಕನಹಳ್ಳಿ: ‘ಸಮಾಜದ ಅಂಕುಡೊಂಕುಗಳನ್ನು ತಿದ್ದಲು ಹೋರಾಡಿದ ಸರ್ವಜ್ಞ ಕವಿಯ ಉದಾತ್ತ ಚಿಂತನೆಗಳನ್ನೊಳಗೊಂಡ ತ್ರಿಪದಿಗಳನ್ನು ರಾಜ್ಯ ಸರ್ಕಾರ ಬಸ್‌ಗಳಲ್ಲಿ ಬರೆಸಬೇಕು’ ಎಂದು ಹಿರಿಯ ಸಾಹಿತಿ ಕುಂ. ವೀರಭದ್ರಪ್ಪ ಒತ್ತಾಯಿಸಿದರು.

ಸಾಯಿಗಂಗಾ ಆಸ್ಪತ್ರೆಯ 5ನೇ ವರ್ಷದ ವಾರ್ಷಿಕೋತ್ಸವ ಪ್ರಯುಕ್ತ ಭಾನುವಾರ ಸಾಯಿಗಂಗಾ ಆಸ್ಪತ್ರೆ, ಶ್ರೀಮತಿ ರಾಧಾ ಟಿ.ವಿಜಯ ರಾಘವೇಂದ್ರ ಪ್ರತಿಷ್ಠಾನ ಆಯೋಜಿಸಿದ್ದ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಸರ್ವಜ್ಞ ಕೇವಲ ಒಬ್ಬ ವ್ಯಕ್ತಿ ಇಲ್ಲ. ಆ ವ್ಯಕ್ತಿತ್ವದಲ್ಲಿ ಬಸವಣ್ಣ, ಬುದ್ಧ, ಮಹಾವೀರ ಸೇರಿ ಎಲ್ಲ ದಾರ್ಶನಿಕರು ಘನೀಭವಿಸಿದ್ದಾರೆ. ಕುರಾನ್‌ನಲ್ಲಿರುವ ಮೌಲ್ಯಾಧಾರಿತ ವಿಚಾರಗಳು ತ್ರಿಪದಿಗಳಲ್ಲಿವೆ’ ಎಂದು ಅಭಿಪ್ರಾಯಪಟ್ಟರು.

‘ಉಜ್ಜಯಿನಿಯಲ್ಲಿ ಕುಂಬಾರರನ್ನು ಎಸ್‌ಸಿಗೆ ಸೇರಿಸಲಾಗಿದೆ. ಕರ್ನಾಟಕದಲ್ಲಿ 2ಎ ಗೆ ಸೇರಿಸಲು ಸಾಧ್ಯವಾಗುತ್ತಿಲ್ಲ. ಪಂಚಮಸಾಲಿಗರು 2ಎಗೆ ಸೇರಿಸಿ ಎಂದು ಕೇಳುತ್ತಿದ್ದಾರೆ. ನಮ್ಮ ಹಕ್ಕುಗಳ ಮೇಲೆ ಆಕ್ರಮಣ ನಡೆಯುತ್ತಿದೆ. ಬಸವಣ್ಣನ ಆಶಯಗಳಿಗೆ ವಿರುದ್ಧವಾಗಿ ಕೆಲ ಮಠಾಧೀಶರು ನಮ್ಮನ್ನು ಕಂಡರೆ ಗುರುಗುಟ್ಟುತ್ತಿದ್ದಾರೆ. ನಮ್ಮ ಸಮುದಾಯವನ್ನು ಎಸ್‌ಟಿಗೆ ಸೇರಿಸಬೇಕಾದ ಅವಶ್ಯಕತೆ ಇದೆ’ ಎಂದರು.

‘ಕುಂಬಾರ ಸಮುದಾಯದಲ್ಲಿ ಲಿಂಗಾಯತ, ಲಿಂಗಾಯತೇತರ ಎಂದು ವಿಭಜಿಸಲಾಗಿದೆ. ನಮ್ಮ ಮಧ್ಯೆ ಸೃಸ್ಟಿಯಾಗಿರುವ ಅಸಮಾನತೆಯ ಗೋಡೆ ಒಡೆಯದಿದ್ದರೆ ನಾವು ಒಂದಾಗಲು ಸಾಧ್ಯವಿಲ್ಲ. ಒಗ್ಗಟ್ಟಿನಿಂದಿರುವ ಸಮುದಾಯಗಳಿಗೆ ಸರ್ಕಾರ ನೂರಾರು ಕೋಟಿ ಕೊಟ್ಟಿದೆ. ಒಗ್ಗಟ್ಟಾಗದಿದ್ದರೆ ಸರ್ಕಾರ ಕುಂಬಾರರಿಗೆ ಏನನ್ನೂ ಕೊಡುವುದಿಲ್ಲ’ ಎಂದು ಎಚ್ಚರಿಸಿದರು.

ನಾಗರೀಕತೆಯ ಉದಯಕ್ಕೆ ಕುಂಬಾರರ ಕೊಡುಗೆ ಇದೆ. 10–15 ಸಾವಿರ ವರ್ಷಗಳ ನಾಗರಿಕತೆಯನ್ನು ಪತ್ತೆಹಚ್ಚುವಲ್ಲಿ ಕುಂಬಾರರ ಮಡಕೆ, ಕುಡಿಕೆಗಳ ಪಳಯುಳಿಕೆಗಳು ಆಧಾರವಾಗಿವೆ. ಚಕ್ರವನ್ನು ಸೃಷ್ಟಿಸಿದ್ದು ಕುಂಬಾರ ಸಮುದಾಯ. ಚಕ್ರ ನಾಗರಿಕತೆಯ ಬೆಳವಣಿಗೆಗೆ ದಾರಿಯಾಗಿದೆ. ಆದರೆ, ಅದನ್ನು ವಿಷ್ಣುವಿನ ಕೈಗೆ ಕೊಡಲಾಗಿದೆ ಎಂದರು.

ಶಿವಮೊಗ್ಗದ ರಾಮಗಿರಿ ಕರಿಸಿದ್ದಪ್ಪ ಕುಂಬಾರ ಮಾತನಾಡಿ, ಬಸವಣ್ಣನನ್ನು ಮಾನವ ಹೃದಯದ ಕೃಷಿಕ. ಸರ್ವಜ್ಞನನ್ನು ಸಾಮಾಜಿಕ ವೈದ್ಯ ಎಂದು ಕುವೆಂಪು ಕರೆದಿದ್ದಾರೆ. ಸಾಮಾಜಿಕ ವೈದ್ಯನಾಗಿ ನಾಡಿನ ಎಲ್ಲೆಡೆ ಸಂಚರಿಸಿ ಜನರ ನಾಡಿ ಮಿಡಿತಗಳನ್ನು ಅರ್ಥ ಮಾಡಿಕೊಂಡು ಸರ್ವಜ್ಞ ತ್ರಿಪದಿಗಳನ್ನು ರಚಿಸಿದ್ದಾರೆ ಎಂದರು.

ಶಸಾಪ ತಾಲ್ಲೂಕು ಅಧ್ಯಕ್ಷ ಬಸವರಾಜು ಹೊನ್ನೇಬಾಗಿ ಸರ್ವಜ್ಞ ಕವಿಯ ಕುರಿತು ಉಪನ್ಯಾಸ ನೀಡಿದರು. ರಾಧಾ ವಿಜಯರಾಘವೇಂದ್ರ, ವೈದ್ಯ ವಿಜಯ ರಾಘವೇಂದ್ರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT