ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆವಳುತ್ತಿದೆ ಯಾತ್ರಿ ನಿವಾಸ ಕಾಮಗಾರಿ

ವರ್ಷದಲ್ಲಿ 92.58 ಲಕ್ಷ ಜನ ಭೇಟಿ, ಅಭಿವೃದ್ಧಿ ಮರೆತ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು
Published 15 ಮಾರ್ಚ್ 2024, 2:45 IST
Last Updated 15 ಮಾರ್ಚ್ 2024, 2:45 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಿಗೆ ಭೇಟಿ ನೀಡುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಪ್ರವಾಸಿಗರಿಗೆ ಅಗತ್ಯ ಸೌಲಭ್ಯಗಳೇ ಸಿಗುತ್ತಿಲ್ಲ. ಪ್ರವಾಸೋದ್ಯಮ ಇಲಾಖೆಯಿಂದ ಪ್ರವಾಸಿ ಸ್ಥಳಗಳಲ್ಲಿ ಹೊಸದಾಗಿ ಯಾತ್ರಿ ನಿವಾಸಗಳನ್ನು ನಿರ್ಮಿಸುತ್ತಿದ್ದು, ಹಲವು ಕಡೆಗಳಲ್ಲಿ ಕಾಮಗಾರಿ ಮುಗಿದರೂ ಉದ್ಘಾಟನೆಯ ಭಾಗ್ಯ ಸಿಕ್ಕಿಲ್ಲ.

ಜಿಲ್ಲೆಯಲ್ಲಿ ಒಟ್ಟು 29 ಯಾತ್ರಿ ನಿವಾಸಗಳನ್ನು ನಿರ್ಮಿಸುವ ಉದ್ದೇಶದಿಂದ ವಿವಿಧೆಡೆ ಕಾಮಗಾರಿಗಳನ್ನು ಆರಂಭಿಸಲಾಗಿದೆ. 16 ಕಟ್ಟಡಗಳ ಕಾಮಗಾರಿ ಪ್ರಗತಿಯಲ್ಲಿದೆ. 13 ಮಾತ್ರ ಪೂರ್ಣಗೊಂಡಿದ್ದು, ಇದರಲ್ಲಿ ಇನ್ನೂ ಹಲವು ಯಾತ್ರಿ ನಿವಾಸಗಳಿಗೆ ಚಾಲನೆ ನೀಡಿಲ್ಲ. ಎಲ್ಲ ಕಾಮಗಾರಿ ಮುಗಿದರೂ ಉದ್ಘಾಟನೆಗೆ ಅಧಿಕಾರಿಗಳು ಆಸಕ್ತಿ ತೋರುತ್ತಿಲ್ಲ.

ಕುಣಿಗಲ್‌ ತಾಲ್ಲೂಕಿನ ಹುತ್ರಿದುರ್ಗ ಯಾತ್ರಿ ನಿವಾಸ ಕಾಮಗಾರಿ ಪೂರ್ಣಗೊಂಡು ಹಲವು ತಿಂಗಳು ಕಳೆದರೂ ಇನ್ನೂ ಉದ್ಘಾಟನೆಗೆ ಕಾಲ ಕೂಡಿ ಬಂದಿಲ್ಲ. ₹ 49.70 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಕಟ್ಟಡವನ್ನು ಜನರ ಬಳಕೆಗೆ ನೀಡುವ ಕೆಲಸವಾಗುತ್ತಿಲ್ಲ. ಇಲ್ಲಿಗೆ ಭೇಟಿ ನೀಡುವವರಿಗೆ ಸೌಲಭ್ಯ ಸಿಗದಾಗಿದೆ.

ದೇವರಾಯನದುರ್ಗದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ನಿರ್ಮಿಸಿರುವ ಅತಿಥಿ ಗೃಹವನ್ನು ಇದುವರೆಗೆ ಉದ್ಘಾಟಿಸಿಲ್ಲ. ಕಾಮಗಾರಿ ಮುಗಿದು ವರ್ಷಗಳೇ ಕಳೆದರೂ ಅಧಿಕಾರಿಗಳು ಮಾತ್ರ ಇತ್ತ ಗಮನ ಹರಿಸಿಲ್ಲ. ಇದರಿಂದ ಕಟ್ಟಡ ಯಾರ ಉಪಯೋಗಕ್ಕೂ ಬಾರದೆ ಶಿಥಿಲಾವಸ್ಥೆಗೆ ತಲುಪಿದೆ.

ಕಳೆದ ವರ್ಷ ‘ಶಕ್ತಿ’ ಯೋಜನೆ ಜಾರಿಯಿಂದ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದವರ ಸಂಖ್ಯೆ ಹೆಚ್ಚಾಗಿದೆ. ಮಹಿಳೆಯರಿಗೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಿದ ನಂತರ ಎಲ್ಲ ಪ್ರವಾಸಿ ಸ್ಥಳಗಳು ಜನರಿಂದ ತುಂಬುತ್ತಿವೆ. ವಾರಾಂತ್ಯದಲ್ಲಿ ಎಲ್ಲ ಕಡೆ ಪ್ರವಾಸಿಗರ ಸಂಖ್ಯೆ ತುಸು ಜಾಸ್ತಿ ಇರುತ್ತದೆ.

2023ರ ಜನವರಿಯಿಂದ ಡಿಸೆಂಬರ್‌ ಅಂತ್ಯದ ವರೆಗೆ ಜಿಲ್ಲೆಯ 26 ಪ್ರವಾಸಿ ಸ್ಥಳಗಳಿಗೆ ಒಟ್ಟು 92.58 ಲಕ್ಷ ಜನರು ಭೇಟಿ ನೀಡಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳು ಸೇರಿದಂತೆ ಪಕ್ಕದ ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳ ಜನರು ಬಂದು ಹೋಗಿದ್ದಾರೆ. ಕುಡಿಯುವ ನೀರು, ಶೌಚಾಲಯ ಒಳಗೊಂಡಂತೆ ಯಾತ್ರಿ ನಿವಾಸಗಳ ಸೌಲಭ್ಯವಿಲ್ಲದೆ ಬಯಲೇ ಆಶ್ರಯ ತಾಣಗಳಾಗಿವೆ.

ಪಾವಗಡದ ಶನೈಶ್ವರ ದೇವಸ್ಥಾನ, ಕೊರಟಗೆರೆ ತಾಲ್ಲೂಕಿನ ಗೊರವನಹಳ್ಳಿ ಮಹಾಲಕ್ಷ್ಮಿ ದೇವಾಲಯ, ತುಮಕೂರು ತಾಲ್ಲೂಕಿನ ದೇವರಾಯನದುರ್ಗಕ್ಕೆ ಹೆಚ್ಚಿನ ಜನರು ಭೇಟಿ ನೀಡುತ್ತಿದ್ದಾರೆ. ಇಲ್ಲಿ ಪ್ರವಾಸಿಗರು ಉಳಿದುಕೊಳ್ಳಲು ಸಮಸ್ಯೆಯಾಗುತ್ತಿದೆ. ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಪ್ರವಾಸಿ ಸ್ಥಳಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿಲ್ಲ. ಹಲವು ಕಡೆಗಳಲ್ಲಿ ಕಾಮಗಾರಿಗಳು ಕುಂಟುತ್ತಾ ಸಾಗುತ್ತಿವೆ. ದೇವಸ್ಥಾನಗಳಿಗೆ ಹೋಗಲು ಸಮರ್ಪಕ ರಸ್ತೆಗಳಿಲ್ಲ ಎಂದು ದೇವರಾಯನದುರ್ಗಕ್ಕೆ ಭೇಟಿ ನೀಡಿದ್ದ ಪ್ರವಾಸಿ ರಂಜನ್‌ ದೂರಿದರು.

ತುಮಕೂರು ತಾಲ್ಲೂಕಿನ ದೇವರಾಯನದುರ್ಗದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ನಿರ್ಮಿಸಿರುವ ಅತಿಥಿ ಗೃಹ

ತುಮಕೂರು ತಾಲ್ಲೂಕಿನ ದೇವರಾಯನದುರ್ಗದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ನಿರ್ಮಿಸಿರುವ ಅತಿಥಿ ಗೃಹ 

ಸರ್ಕಾರದಿಂದ ಹಣ ಬಿಡುಗಡೆಯಾಗುತ್ತಿದ್ದಂತೆ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ಸದ್ಯಕ್ಕೆ ಜಿಲ್ಲೆಯಲ್ಲಿ ಯಾವುದೇ ತೊಂದರೆಗಳು ಇಲ್ಲದೆ ಯಾತ್ರಿ ನಿವಾಸ ನಿರ್ಮಾಣ ಕೆಲಸಗಳು ಸಾಗುತ್ತಿವೆ.
–ಬಿ.ಎಚ್‌.ಶಶಿಕುಮಾರ್‌ ಸಹಾಯಕ ನಿರ್ದೇಶಕ ಪ್ರವಾಸೋದ್ಯಮ ಇಲಾಖೆ

ಯಾತ್ರಿ ನಿವಾಸಗಳ ವಿವರ

ತಾಲ್ಲೂಕು; ಪ್ರಗತಿ; ಪೂರ್ಣ; ಒಟ್ಟು

ಕೊರಟಗೆರೆ;1;1;2

ಮಧುಗಿರಿ;2;3;5

ಪಾವಗಡ;1;0;1

ಶಿರಾ;7;0;7

ಚಿಕ್ಕನಾಯಕನಹಳ್ಳಿ;2;5;7

ತುರುವೇಕೆರೆ;0;0;0

ಗುಬ್ಬಿ;2;1;3

ಕುಣಿಗಲ್‌;0;2;2

ಒಟ್ಟು;16;13;29

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT