ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂಜೆಗಾಗಿ ದಲಿತರ ಪಟ್ಟು: ಇಂದ್ರಬೆಟ್ಟದಲ್ಲಿ ಉದ್ವಿಗ್ನ ಸ್ಥಿತಿ

Last Updated 29 ಮೇ 2019, 12:45 IST
ಅಕ್ಷರ ಗಾತ್ರ

ವೈ.ಎನ್.ಹೊಸಕೋಟೆ (ಪಾವಗಡ): ಇಂದ್ರಬೆಟ್ಟ ಗ್ರಾಮದಲ್ಲಿ ಹಮ್ಮಿಕೊಂಡಿರುವ ಊರು ಮಾರಮ್ಮ ಹಬ್ಬದ ವೇಳೆ ಎಲ್ಲರಂತೆ ಸಮಾನವಾಗಿ ಪೂಜೆ ಸಲ್ಲಿಸುವ ಅವಕಾಶಕ್ಕಾಗಿ ದಲಿತರು ಪಟ್ಟುಹಿಡಿದ ಕಾರಣ ಗ್ರಾಮದಲ್ಲಿ ಮಂಗಳವಾರ ರಾತ್ರಿಯಿಂದ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ.

ಎರಡು ಸಮುದಾಯಗಳು ಮಾತ್ರ ಜಾತ್ರೆಯ ವೇಳೆ ಮಾರಮ್ಮನಿಗೆ ಜ್ಯೋತಿ ಮತ್ತು ಆರತಿ ಬೆಳಗುವ ಸಂಪ್ರದಾಯ ಗ್ರಾಮದಲ್ಲಿತ್ತು. 15 ವರ್ಷಗಳಿಂದ ಜಾತ್ರೆ ನಡೆದಿರಲಿಲ್ಲ. ಈ ಬಾರಿ ಜಾತ್ರೆ ಮಾಡುವ ಸಲುವಾಗಿ ಗ್ರಾಮದಲ್ಲಿರುವ ಮೂರು ಸಮುದಾಯಗಳ ಸಮ್ಮುಖದಲ್ಲಿ 2-3 ಬಾರಿ ಸಭೆ ನಡೆಸಿ ಚರ್ಚಿಸಲಾಗಿದೆ.

ಅಂತಿಮ ತೀರ್ಮಾನದನ್ವಯ ಸಂಪ್ರದಾಯದಂತೆ ಮೊದಲೆರಡು ಸಮುದಾಯಗಳು ಜ್ಯೋತಿ ಬೆಳಗಿದ ನಂತರ ಹೊಸ ಸಂಪ್ರದಾಯ ಪ್ರಾರಂಭಿಸುತ್ತಿರುವ ದಲಿತ ಸಮುದಾಯದವರು ಜ್ಯೋತಿ ಬೆಳಗುವ ವ್ಯವಸ್ಥೆಗೆ ಎಲ್ಲರೂ ಒಪ್ಪಿ ಜಾತ್ರೆ ಪ್ರಾರಂಭಿಸಲಾಗಿತ್ತು.

ವಿನಾ ಕಾರಣ ತೊಂದರೆಗಳನ್ನು ಅನುಭವಿಸುವುದು ಬೇಡ ಎಂದುಕೊಂಡ ಗ್ರಾಮದ ಅಲ್ಪಸಂಖ್ಯಾತ ಸಮುದಾಯವೊಂದು ಜ್ಯೋತಿ ಆಚರಣೆಯಿಂದ ದೂರ ಉಳಿದಿದೆ. ದೇವಾಲಯದ ಬಾಗಿಲ ಮುಂದೆ ದೇವಿಗೆ ರಂಗೋಲಿ ಅಸೆ ಹಾಕಿ ಶೃಂಗಾರ ಮಾಡಿದ ಸ್ಥಳವನ್ನು ಬಿಟ್ಟು ಅದರ ಮುಂದೆ ಮೊದಲನೆಯ ಸಮುದಾಯದವರು ಜ್ಯೋತಿ ಬೆಳಗಿದರು.

ತದನಂತರ ಬಂದ ದಲಿತ ಸಮುದಾಯದವರಿಗೆ ಅಸೆ ಹಾಕಿದ ಸ್ಥಳವನ್ನು ಬಿಟ್ಟು ನಮ್ಮಂತೆ ಅದರ ಮುಂದಿನ ಸ್ಥಳದಲ್ಲಿ ಆರತಿ ಬೆಳಗಲು ತಿಳಿಸಿದಾಗ ಅದರಂತೆ ಮಹಿಳೆಯರು ಆರತಿ ಬೆಳಗಿದರು. ಆದರೆ, ಕೆಲ ದಲಿತ ಯುವಕರು ಅದನ್ನು ತಿರಸ್ಕರಿಸಿ ದೇವಾಲಯದ ಬಾಗಿಲ ಮುಂದೆ ಆರತಿ ಬೆಳಗಲು ಮುಂದಾದಾಗ ಎರಡು ಸಮುದಾಯಗಳ ಮಧ್ಯೆ ಘರ್ಷಣೆ ಪ್ರಾರಂಭವಾಯಿತು.

ಸ್ಥಳದಲ್ಲೇ ಇದ್ದ ಪೋಲೀಸರು ಲಾಟಿ ಬೀಸಿ ಗುಂಪು ಚದುರಿಸಿ ಅನಾಹುತವನ್ನು ತಪ್ಪಿಸಿದರು. ಇದನ್ನು ಕಾರಣ ಮಾಡಿಕೊಂಡ ಕೆಲವರು ನಮಗೆ ಅನ್ಯಾಯವಾಗಿದೆ ಎಂದು ತಡರಾತ್ರಿ ಧರಣಿ ನಡೆಸಿದ್ದರಿಂದ ಗ್ರಾಮದಲ್ಲಿ ಉದ್ವಿಗ್ನತೆ ಉಂಟಾಗಿದೆ.

‘ಗ್ರಾಮದ ಸಂಪ್ರದಾಯದಂತೆ ಮಾರಿ ಜಾತ್ರೆಯಲ್ಲಿ ದಲಿತರಿಗೆ ಜ್ಯೋತಿ ಬೆಳಗುವ ಅವಕಾಶವೇ ಇರಲಿಲ್ಲ. ಅವರ ಬೇಡಿಕೆಯಂತೆ ಈ ಬಾರಿ ಅವರಿಗೂ ಅವಕಾಶ ಮಾಡಿಕೊಟ್ಟಿದ್ದೆವು. ಅದನ್ನೇ ಸಂದರ್ಭವಾಗಿ ಬಳಸಿಕೊಂಡು ಕೆಲ ಯುವಕರು ದೌರ್ಜನ್ಯ ಮಾಡಲು ಯತ್ನಿಸಿದರು. ಅದನ್ನು ತಡೆದಿದ್ದೇವೆ’ ಎನ್ನುತ್ತಾರೆ ಒಂದು ಸಮುದಾಯದವರು.

‘ಎಲ್ಲರಂತೆ ಜ್ಯೋತಿ ಬೆಳಗಲು ನಮಗೆ ಅವಕಾಶ ನೀಡಲಿಲ್ಲ. ದೇವಾಲಯದ ಬಾಗಿಲ ಮುಂದೆ ಬಿಟ್ಟು ಜ್ಯೋತಿರ್ಗಂಭದ ಬಳಿ ಜ್ಯೋತಿ ಬೆಳಗಲು ಸೂಚಿಸಿದರು. ಪ್ರಶ್ನಿಸಿದ್ದಕ್ಕೆ ಲಾಟಿ ಚಾರ್ಜ್ ನಡೆದಿದೆ. ಇದನ್ನು ಖಂಡಿಸಿ ಧರಣಿ ಮಾಡಿದ್ದೇವೆ’ ಎನ್ನುತ್ತಾರೆ ದಲಿತ ಯುವಕರು.

ಮಂಗಳವಾರ ರಾತ್ರಿಯೇ ಪೋಲೀಸ್ ಇಲಾಖೆಯವರು ಎರಡು ಸಮುದಾಯಗಳ ನಡುವೆ ಸಂದಾನ ನಡೆಸಿ ಶಾಂತಿಯುತವಾಗಿ ಹಬ್ಬ ಆಚರಿಸಲು ಕ್ರಮ ಕೈಗೊಂಡಿದ್ದಾರೆ.

ಬುಧವಾರ ಬೆಳಿಗ್ಗೆ ನಾಲ್ಕೈದು ಕುಟುಂಬಗಳು ಹೊರತುಪಡಿಸಿ ಉಳಿದವರೆಲ್ಲ ಸಂಭ್ರಮದಿಂದ ಮಾರಿಹಬ್ಬವನ್ನು ಆಚರಿಸಿದರು. ಪೊಲೀಸ್ ಬಂದೋಬಸ್ತ್‌ನಲ್ಲಿ ಭಕ್ತರು ದೇವಿಯ ದರ್ಶನ ಪಡೆದರು. ಪ್ರತಿ ಮನೆ ಮುಂದೆ ವಿಶೇಷ ಊಟಕ್ಕಾಗಿ ಕಟ್ಟಿದ್ದ ಶಾಮಿಯಾನಗಳು ರಾಜಾಜಿಸುತ್ತಿದ್ದವು. ಎಲ್ಲೆಡೆ ಹೆಣ್ಣುಮಕ್ಕಳು ಬಳೆತೊಟ್ಟು ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT