ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲೆಯತ್ತ ಯುವ ಸಮೂಹ ಬರಬೇಕಿದೆ

ಜಾನಪದ ವಿದ್ವಾಂಸ ಸಣ್ಣಹೊನ್ನಯ್ಯ ಅಭಿಮತ
Last Updated 21 ಜನವರಿ 2022, 7:22 IST
ಅಕ್ಷರ ಗಾತ್ರ

ತುಮಕೂರು: ನಾಟಕ ಕಲೆ, ಜಾನಪದ ಸಂಗೀತ ಹಾಗೂ ಇತರೇ ಕಲೆಗಳನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ಯುವ ಮನಸ್ಸುಗಳ ಅಗತ್ಯತೆ ಹೆಚ್ಚಿದೆ ಎಂದು ಜಾನಪದ ವಿದ್ವಾಂಸ ಸಣ್ಣಹೊನ್ನಯ್ಯ ಅಭಿಪ್ರಾಯಪಟ್ಟರು.

ಗ್ರಾಮೀಣ ಕ್ರಿಯಾತ್ಮಕ ರಂಗ ತಂಡವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಬುಧವಾರ ಸಂಜೆ ಆಯೋಜಿಸಿದ್ದ ಎರಡು ದಿನಗಳ ನಾಟಕ ಪ್ರದರ್ಶನಕ್ಕೆ ಚಂಡೆ ಬಾರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಕಲೆ, ಸಾಹಿತ್ಯ, ಸಂಗೀತ ಸೇರಿದಂತೆ ಹಲವು ಕಲೆಗಳ ಸಮ್ಮಿಲನದೊಂದಿಗೆ ನಾಟಕ ರೂಪುಗೊಂಡಿರುತ್ತದೆ. ಇದನ್ನು ಕಲಿತು ಮುಂದಿನ ಪೀಳಿಗೆಗೆ ವರ್ಗಾಯಿಸುವ ಯುವಜನರ ಅಗತ್ಯವಿದೆ ಎಂದರು.

ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಯುವ ನಿರ್ದೇಶಕರು ಆಸಕ್ತರಿಗೆ ಕಲಿಸಿ ನಾಟಕಗಳ ಪ್ರದರ್ಶನಕ್ಕೆ ವೇದಿಕೆ ಒದಗಿಸಿಕೊಟ್ಟಿದ್ದಾರೆ. ಆದರೆ, ಜನಪದ ಕಲೆಗಳಾದ ಸೋಮನ ಕುಣಿತ, ಬಯಲಾಟ, ಮೂಡಲಪಾಯ ಯಕ್ಷಗಾನ, ಮುಖವೀಣೆ ಸೇರಿದಂತೆ ಹಲವು ಕಲೆಗಳನ್ನು ಕಲಿಯಲು ಯುವ ಸಮೂಹ ಮುಂದೆ ಬರುತ್ತಿಲ್ಲ ಎಂದು ವಿಷಾದಿಸಿದರು.

ಸಾಹಿತಿ ಬಿ.ಸಿ. ಶೈಲಾ ನಾಗರಾಜು, ‘ನಾಟಕ ಮತ್ತು ಸಿನಿಮಾಗಳನ್ನು ಹೋಲಿಕೆ ಮಾಡಿದರೆ ನಾಟಕಗಳು ಮನುಷ್ಯರ ಜೀವನಕ್ಕೆ ಹತ್ತಿರವಾಗಿರುತ್ತವೆ. ಹೆಚ್ಚು ಸೃಜನಶೀಲತೆಯಿಂದ ಕೂಡಿರುತ್ತವೆ. ನಾಟಕಗಳಲ್ಲಿ ಗಿಮಿಕ್‍ಗಳಿಗೆ ಅವಕಾಶವಿಲ್ಲ. ಹಾಗಾಗಿ, ಪೌರಾಣಿಕ ನಾಟಕಗಳು ಇಂದಿಗೂ ಜನಮಾನಸದಲ್ಲಿ ಹಾಸು ಹೊಕ್ಕಾಗಿವೆ’ ಎಂದು
ಹೇಳಿದರು.

ಲೇಖಕರಾದ ಎಂ.ಜಿ. ಪ್ರಿಯಾಂಕ, ಇಂಟರ್‌ನೆಟ್, ಟ್ವಿಟರ್, ಫೇಸ್‍ಬುಕ್ ನಂತಹಆಧುನಿಕ ಸಾಮಾಜಿಕ ಮಾಧ್ಯಮಗಳ ನಡುವೆಯೂ ಪೌರಾಣಿಕ ನಾಟಕಗಳು ನಮಗೆ ಪ್ರಸ್ತುತವಾಗಿ ಕಾಣುತ್ತವೆ. ಪಂಪ ಮಹಾಕವಿ ಹೇಳುವಂತೆ, ‘ಮಹಾಭಾರತದಲ್ಲಿ ನೆನೆವುದಾದರೆ ಕರ್ಣನ ಪಾತ್ರವನ್ನು ನೆನೆ’ ಎಂಬಂತೆ, ಕರ್ಣನ ತ್ಯಾಗ, ಬಲಿದಾನಗಳು ನಮಗೆ ಇಂದಿಗೂ ಆದರ್ಶಪ್ರಾಯವಾಗಿವೆ. ವೇದ, ಉಪನಿಷತ್ತುಗಳ ಕಾಲದಿಂದಲೂ ಅನಕ್ಷರಸ್ಥರ ಎದೆಯಲ್ಲಿ ನಾಟಕಗಳು ಮನೆ ಮಾಡಿವೆ’ ಎಂದು
ತಿಳಿಸಿದರು.

ಗ್ರಾಮೀಣ ಕ್ರಿಯಾತ್ಮಕ ರಂಗತಂಡದ ಶ್ರೀಲತಾ, ರಂಗ ಸೊಗಡು ಟ್ರಸ್ಟ್‌ನ ಸಿದ್ದರಾಜು ಉಪಸ್ಥಿತರಿದ್ದರು.

ಉದ್ಘಾಟನಾ ಕಾರ್ಯಕ್ರಮದ ನಂತರ ರಾಜಪ್ಪ ದಳವಾಯಿ ರಚಿಸಿರುವ, ಕಾಂತರಾಜು ಕೌತುಮಾರನಹಳ್ಳಿ ನಿರ್ದೇಶನದಲ್ಲಿ ಗ್ರಾಮೀಣ ಕ್ರಿಯಾತ್ಮಕ ರಂಗ ತಂಡದ ಕಲಾವಿದರು ಅಭಿನಯಿಸಿರುವ ‘ಕರ್ಣಕುಲಂ’ ನಾಟಕ ಪ್ರದರ್ಶನ ಕಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT