ಮಂಗಳವಾರ, ಸೆಪ್ಟೆಂಬರ್ 17, 2019
21 °C
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಹೇಳಿಕೆ

‘ಕೋಟಿ ನಾಟಿ’ ಹಸಿರೀಕರಣದ ಆಂದೋಲನಕ್ಕೆ ಒಡಂಬಡಿಕೆ: ಜೂ.5ರಂದು 1 ಕೋಟಿ ಸಸಿ ನಾಟಿ

Published:
Updated:
Prajavani

ತುಮಕೂರು: ಜಿಲ್ಲೆಯಲ್ಲಿ ‘ಕೋಟಿ ನಾಟಿ’ ಆಂದೋಲನಕ್ಕೆ ರೋಟರಿ ಸಂಸ್ಥೆಯ ಜೊತೆ ಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಮಂಗಳವಾರ ಇಲ್ಲಿ ಒಡಂಬಡಿಕೆ ಮಾಡಿಕೊಂಡರು.

ಜಿಲ್ಲಾ ಪಂಚಾಯಿತಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಬೆಂಗಳೂರು ರೋಟರಿ ಕ್ಲಬ್ ಆಯೋಜಿಸಿದ್ದ ‘ಕೋಟಿ ನಾಟಿ’ ಹಸಿರೀಕರಣದ ಜನಾಂದೋಲನ ಕಾರ್ಯಾಗಾರದಲ್ಲಿ ಈ ಒಪ್ಪಂದ ಜರುಗಿತು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭ ಕಲ್ಯಾಣ್, ಬೆಂಗಳೂರು ರೋಟರಿ ಅಧ್ಯಕ್ಷ ರವಿಶಂಕರ್ ಡಾಕೋಜು, ‘ಕೋಟಿ ನಾಟಿ’ ಯೋಜನೆಯ ಅಧ್ಯಕ್ಷರಾದ ಡಾ.ಅಮರನಾರಾಯಣ, ರೋಟರಿ ಸಂಸ್ಥೆಯ ನಾಗೇಶ್, ಆಶಾ ಪ್ರಸನ್ನಕುಮಾರ್ ಈ ಒಪ್ಪಂದಕ್ಕೆ ಸಾಕ್ಷಿಯಾದರು.

ಕಾರ್ಯಾಗಾರ ಉದ್ಘಾಟಿಸಿದ ಶಾಲಿನಿ ರಜನೀಶ್, ‘ಜೂ.5ರ ವಿಶ್ವ ಪರಿಸರ ದಿನದಂದು ಜಿಲ್ಲೆಯಲ್ಲಿ 1 ಕೋಟಿ ಸಸಿಗಳನ್ನು ನೆಡುವ ಮೂಲಕ ಗಿನ್ನೆಸ್ ಬುಕ್ ಆಫ್ ರೆಕಾರ್ಡ್ ಸ್ಥಾಪಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

‘ಒಂದು ಕೋಟಿ ಸಸಿಗಳನ್ನು ಜಿಲ್ಲೆಯಲ್ಲಿ ನೆಡಬೇಕು. ಮೊದಲ ಹಂತದಲ್ಲಿ ರೋಟರಿ ಸಂಸ್ಥೆ ತುಮಕೂರು ತಾಲ್ಲೂಕಿನಲ್ಲಿ 1 ಕೋಟಿ ಸಸಿಗಳನ್ನು ನೆಡಲು ಕಾರ್ಯಕ್ರಮ ರೂಪಿಸಿದೆ. ಪ್ರತಿ ತಾಲ್ಲೂಕಿನಲ್ಲಿ 10 ಲಕ್ಷ ಸಸಿಗಳಂತೆ ನೆಡಬೇಕಿದೆ’ ಎಂದರು.

ಕಾರ್ಯಕ್ರಮ ಜಾರಿಯಲ್ಲಿ ಸಾರ್ವಜನಿಕರ ಸಹಕಾರ ಅತಿ ಮುಖ್ಯ. ಸಾರ್ವಜನಿಕರ ಜೊತೆ ಚರ್ಚಿಸಿ ಕಾರ್ಯಕ್ರಮ ರೂಪಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. 

ಜಿಲ್ಲೆಯನ್ನು ಬರಮುಕ್ತಗೊಳಿಸಲು ಎಲ್ಲರೂ ಕೈ ಜೋಡಿಸಬೇಕು. ಈಗಾಗಲೇ ಗ್ರಾಮಗಳಲ್ಲಿ ಎಲ್ಲಿ ಸರ್ಕಾರದ ಖಾಲಿ ಜಾಗ ಇದೆ ಎನ್ನುವುದನ್ನು ಸ್ಯಾಟಲೈಟ್ ಮೂಲಕ ಗುರುತಿಸಲಾಗಿದೆ. ಅಲ್ಲಿ ಗಿಡಗಳನ್ನು ನೆಡಲು ರೂಪುರೇಷೆಗಳನ್ನು ಸಿದ್ಧಗೊಳಿಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

‘ಕೋಟಿ-ನಾಟಿ’ ಯೋಜನೆಯ ಅಧ್ಯಕ್ಷ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಅಮರ ನಾರಾಯಣ ಮಾತನಾಡಿ, ‘ಜಿಲ್ಲೆಯಲ್ಲಿ ಹಸಿರು ತೀವ್ರವಾಗಿ ಕಡಿಮೆ ಇದೆ. ಆದ ಕಾರಣ ಬರವೂ ಹೆಚ್ಚಿದ್ದು ಮಳೆ ಕೊರತೆ ಆಗಿದೆ. ಒಂದೊಂದು ತಾಲ್ಲೂಕಿನಲ್ಲಿ ಬರದ ಪ್ರಮಾಣ ಒಂದೊಂದು ರೀತಿ ಇದೆ. ಎಲ್ಲೆಡೆ ಹಸಿರೀಕರಣ ಕೈಗೊಂಡರೆ ಜಿಲ್ಲೆಯನ್ನು ಬರ ಮುಕ್ತಗೊಳಿಸಬಹುದು’ ಎಂದು ಹೇಳಿದರು.

ಜಿಲ್ಲೆಯಲ್ಲಿ 67.539 ಹೆಕ್ಟೇರ್ ಬಂಜರು ಭೂಮಿ ಹಾಗೂ 2.35 ಲಕ್ಷ ಹೆಕ್ಟೇರ್ ಬೀಳು ಭೂಮಿ ಇದೆ. ಇಲ್ಲಿ ಗಿಡಗಳನ್ನು ನಾಟಿ ಮಾಡುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಒಂದು ಎಕರೆ ಜಮೀನಿನ ಬದುಗಳಲ್ಲಿ ಕನಿಷ್ಠ 100 ಗಿಡಗಳನ್ನು ಬೆಳೆಸಿದರೆ ಅವು ಭವಿಷ್ಯದಲ್ಲಿ ರೈತರಿಗೆ ಉತ್ತಮ ಆದಾಯ ತಂದುಕೊಡುತ್ತವೆ. ಪ್ರತಿ ಮನುಷ್ಯನ ಬದುಕಿಗೆ 28 ಮರಗಳು ಅಗತ್ಯ. ಜಿಲ್ಲೆಯಲ್ಲಿ 26 ಲಕ್ಷ ಜನಸಂಖ್ಯೆ ಇದೆ. ಪ್ರತಿಯೊಬ್ಬರು 28 ಸಸಿಗಳನ್ನು ನೆಟ್ಟರೆ ಒಟ್ಟು 7.50 ಕೋಟಿ ಸಸಿಗಳನ್ನು ನೆಡಬಹುದು ಎಂದು ಆಶಿಸಿದರು.  

ರಸ್ತೆ, ಕೆರೆದಂಡೆ, ವಸತಿ ಪ್ರದೇಶಗಳಲ್ಲಿ ಸಸಿ ನೆಡಲು ಅವಕಾಶ ಇದೆ. ಈ ಬಗ್ಗೆ ಪಿಡಿಒಗಳು ಕ್ರಮಕೈಗೊಳ್ಳಬೇಕು ಎಂದರು. ತಾವು ತುಮಕೂರು ಜಿಲ್ಲಾ ಪಂಚಾಯಿತಿ ಸಿಇಒ ಆಗಿದ್ದ ಸಂದರ್ಭದಲ್ಲಿ ಕೈಗೊಂಡ ಕೆರೆ ಸ್ವಚ್ಛತೆ ಮತ್ತಿತರ ವಿಷಯಗಳನ್ನು ಅವರು ನೆನಪು ಮಾಡಿಕೊಂಡರು.

ಪ್ರಾಸ್ತಾವಿಕವಾಗಿ ಮಾತನಾಡಿದ ಶುಭ ಕಲ್ಯಾಣ್, ಈ ಯೋಜನೆ ಅತ್ಯುತ್ತಮವಾದುದು. ಜೀವವನ್ನು ಕೊಡುವ ಗಾಳಿಯನ್ನು ಬೆಳೆಸಬೇಕು ಎಂದು ಬುದ್ಧ ಹೇಳುತ್ತಾನೆ. ಈ ಹಿನ್ನಲೆಯಲ್ಲಿ ನಾವು ಆಮ್ಲಜನಕವನ್ನು ಹೆಚ್ಚಿಸಬೇಕಾಗಿದೆ. ಸಸಿಗಳನ್ನು ಹೆಚ್ಚು ಹೆಚ್ಚು ಬೆಳೆಸಬೇಕಾಗಿದೆ ಎಂದರು.

ಇದು ಸರ್ಕಾರದ ಕಾರ್ಯಕ್ರಮವಷ್ಟೇ ಅಲ್ಲ ಎಲ್ಲರ ಕಾರ್ಯಕ್ರಮ. ಎಲ್ಲರನ್ನೂ ಒಳಗೊಂಡು ಜಿಲ್ಲೆಯನ್ನು ಹಸಿರುಮಯಗೊಳಿಸಲಾಗುವುದು ಎಂದು ಹೇಳಿದರು.

ತುಮಕೂರು ತಾಲ್ಲೂಕಿನ ವಿವಿಧ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳು ಹಾಜರಿದ್ದರು.

Post Comments (+)