ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಕ್ಕೊ ಹಬ್ಬ ಆರಂಭ

ಆಡೂ ಆಟ ಆಡು – ಕ್ರೀಡೆ
Last Updated 4 ಡಿಸೆಂಬರ್ 2013, 6:47 IST
ಅಕ್ಷರ ಗಾತ್ರ

ರಾಜ್ಯದಲ್ಲಿಯೆ ಹೆಚ್ಚು ಕೊಕ್ಕೊ ಕ್ಲಬ್‌ಗಳನ್ನು ಹೊಂದಿರುವ ತುಮಕೂರು ಜಿಲ್ಲೆಯಲ್ಲಿ ರಾಷ್ಟ್ರ ಮಟ್ಟದ ಕೊಕ್ಕೊ ಪಂದ್ಯಾವಳಿಗೆ ಬುಧವಾರ ಚಾಲನೆ ದೊರೆಯಲಿದೆ. ಡಿ. 5ರಿಂದ 8ರ ವರೆಗೆ ನಡೆಯಲಿರುವ ಹೊನಲು ಬೆಳಕಿನ ಪಂದ್ಯಾವಳಿಗಳಿಗಾಗಿ ಈಗಾಗಲೇ ಆಟಗಾರರು ಸಿದ್ಧತೆ ಆರಂಭಿಸಿದ್ದಾರೆ.

ದೇಶದಲ್ಲಿ ಕೊಕ್ಕೊ ವಿಭಾಗದಲ್ಲಿ ಪ್ರತಿಷ್ಠಿತ ಪಂದ್ಯಾವಳಿ ಸಿನಿಯರ್ಸ ಫೆಡರೇಶನ್‌ ಕಪ್‌, ಸಬ್‌ ಜೂನಿಯರ್ಸ ಪಂದ್ಯಾವಳಿಗಳು ನಡೆಯಲಿದ್ದು, ದೇಶದ ವಿವಿಧೆಡೆಯಿಂದ ಒಟ್ಟು 75 ತಂಡಗಳು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿವೆ.

ಫೆಡರೇಶನ್‌ ಕಪ್‌ ಪುರುಷರ ಪಂದ್ಯಾವಳಿಗೆ ದಕ್ಷಿಣ ವಲಯದಿಂದ ಕರ್ನಾಟಕ ಮತ್ತು ಆಂಧ್ರಪ್ರದೇಶ, ಮಹಿಳೆಯರ ವಿಭಾಗದಲ್ಲಿ ಕರ್ನಾಟಕ, ಕೇರಳ ತಂಡಗಳು ಆಯ್ಕೆಗೊಂಡಿದ್ದು ಸೆಣಸಿನ ಕಾದಾಟದ ನಿರೀಕ್ಷೆಯಲ್ಲಿದ್ದಾರೆ ಕೊಕ್ಕೊ ಅಭಿಮಾನಿಗಳು.

ಸಬ್‌ ಜೂನಿಯರ್ಸ ಪಂದ್ಯಾವಳಿ ಉತ್ತಮ ಪ್ರದರ್ಶನ ತೋರಿದ ಆಟಗಾರ್ತಿಗೆ ‘ಇಳಾ’ ಪ್ರಶಸ್ತಿ, ಆಟಗಾರನಿಗೆ ‘ಭರತ್‌’ ಪ್ರಶಸ್ತಿಯನ್ನು ನೀಡಲಾಗುತ್ತದೆ. ವಿವಿಧ ರಾಜ್ಯಗಳಿಂದ ಆಗಮಿಸಿರುವ 100ಕ್ಕೂ ಹೆಚ್ಚು ಪರಿಣಿತ ರೆಫ್ರಿ, ತಾಂತ್ರಿಕ ಅಧಿಕಾರಿಗಳು ಮೇಲ್ವಿಚಾರಣೆ ನಡೆಸಲಿದ್ದಾರೆ.

ಹೊಸ ನಿಯಮಗಳು: ಈ ಪಂದ್ಯಾವಳಿಯಿಂದ ಕೊಕ್ಕೊ ಅಂಗಳದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದ್ದು, ಹೊಸ ನಿಯಮಗಳು ಜಾರಿಗೆ ಬರಲಿವೆ. ಈ ಮುನ್ನ ಇದ್ದ ಪೋಲ್‌ ಕಿಕ್ಕಿಂಗ್‌ ರದ್ದುಗೊಳ್ಳಲಿದೆ. ಅಂಗಳದ ವೀಸ್ತೀರ್ಣದಲ್ಲಿ ಫ್ರೀ ಝೋನ್ ಅಳತೆಯನ್ನು  2.75 ಮೀಟರ್‌ನಿಂದ 1.5 ಮೀಟರ್‌ಗೆ ಇಳಿಸಲಾಗಿದೆ. ಪ್ಲೇಯರ್‌ ಸಿಟಿಂಗ್‌ ಬಾಕ್ಸ್‌ ಅಳತೆಯನ್ನು 30 ಮೀಟರ್‌ನಿಂದ 35 ಮೀಟರ್‌ಗೆ ಹೆಚ್ಚಿಸಲಾಗಿದೆ.

ಅಂತರರಾಷ್ಟ್ರೀಯ ಕೊಕ್ಕೊ ಪಂದ್ಯಾವಳಿಗಳ ಅಂಗಳದಲ್ಲಿ ಮ್ಯಾಟ್‌, ಶೂ, ಬಳಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಪಂದ್ಯಾವಳಿಯಿಂದ ಹೊಸ ನಿಯಮಗಳನ್ನು ಜಾರಿಗೊಳಿಸಲಾಗುವುದು. ಪಂದ್ಯಾವಳಿಗೆ ಕೊಕ್ಕೊ ಅಂಕಣ ಸಿದ್ಧಗೊಂಡಿದ್ದು 10.000ಕ್ಕೂ ಹೆಚ್ಚು ಪ್ರೇಕ್ಷಕರು ಪಂದ್ಯಾವಳಿ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ತರಬೇತುದಾರ ಪ್ರದೀಪ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ರೋಚಕ ಪಂದ್ಯಗಳು: 75 ತಂಡಗಳ ಪೈಕಿ ಮಹಾರಾಷ್ಟ್ರ, ಕರ್ನಾಟಕ, ಕೇರಳ ತಂಡಗಳ ನಡುವೆ ನಡೆಯುವ ಪಂದ್ಯಗಳು ಪ್ರೇಕ್ಷಕರ ಕುತೂಹಲ ಕೆರಳಿಸಿದೆ. ಈ ತಂಡಗಳ ಪಂದ್ಯಗಳು ನಡೆಯುವಾಗ ಸಹಜವಾಗಿಯೇ ಪ್ರೇಕ್ಷಕರ ಸಂಖ್ಯೆ ಹೆಚ್ಚಿರುತ್ತದೆ. ಕರ್ನಾಟಕ ತಂಡಕ್ಕೆ ತವರಿನ ಬೆಂಬಲ ಸಿಗಲಿದ್ದು, ಗೆಲ್ಲುವ ಫೇವರಿಟ್ ತಂಡವಾಗಿದೆ.

ಪುರುಷರ ವಿಭಾಗದಲ್ಲಿ ಕರ್ನಾಟಕ X ಮಹಾರಾಷ್ಟ್ರ ಮತ್ತು ಮಹಿಳೆಯರ ವಿಭಾಗದಲ್ಲಿ ಕರ್ನಾಟಕ X ಕೇರಳ ಪಂದ್ಯಗಳ ಹಣಾಹಣಿ ಪ್ರೇಕ್ಷಕರಿಗೆ ರೋಮಾಂಚನ ನೀಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT