ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಗರೆ ಓಟದ ಪ್ರಜ್ವಲ್

Last Updated 21 ಆಗಸ್ಟ್ 2013, 10:35 IST
ಅಕ್ಷರ ಗಾತ್ರ

ಕೊಕ್ಕೊ ಮೈದಾನದಲ್ಲಿ ಆಟಗಾರನಿಗೆ ಬೇಕಿರುವುದು ಚಾಕಚಕ್ಯತೆಯ ಓಟ. ಚಿಗರೆಯಂತಹ ಓಟದಿಂದಲೇ ತುಮಕೂರಿನ ಹೆಸರನ್ನು ರಾಷ್ಟ್ರ, ರಾಜ್ಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಕೆ.ಎಚ್.ಪ್ರಜ್ವಲ್‌ನ ಓಟಕ್ಕೆ, ಕಾಲ್ಚೆಳಕಕ್ಕೆ ಸಹ ಆಟಗಾರರು ಸೇರಿದಂತೆ ಅಪಾರ ಸಂಖ್ಯೆಯ ಪ್ರೇಕ್ಷಕರು ತಲೆದೂಗಿದ್ದಾರೆ. ಅಬ್ಬಾ! ಚಿಗರೆ ಓಟ ಎಂದು ಉದ್ಘಾರ ತೆಗೆದ ದೈಹಿಕ ತರಬೇತುದಾರರು ಇದ್ದಾರೆ.

ಸರ್ವೋದಯ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿರುವ ಕೆ.ಎಚ್.ಪ್ರಜ್ವಲ್‌ನ ಓಟವೇ ಅಂಥಹುದು. ಮೈದಾನದಲ್ಲಿ ಅಕ್ಷರಶಃ ಚಿಗರೆ ಮರಿ. ತಿಪಟೂರಿನಲ್ಲಿ 2008ರಲ್ಲಿ ನಡೆದ ಸಿಬಿಎಸ್‌ಇ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಮೈದಾನಕ್ಕಿಳಿದ ಪ್ರಜ್ವಲ್‌ನ ಓಟಕ್ಕೆ `ಉತ್ತಮ ಓಟಗಾರ ಪ್ರಶಸ್ತಿ' ಒಲಿದು ಬಂತು. ಅಲ್ಲಿಂದ ಇಲ್ಲಿವರೆಗೂ ಮಧ್ಯಪ್ರದೇಶ, ಉತ್ತರ ಪ್ರದೇಶ, ಆಂಧ್ರಪ್ರದೇಶಗಳಲ್ಲಿ ನಡೆದ ರಾಷ್ಟ್ರಮಟ್ಟದ ಕ್ರೀಡಾಕೂಟಗಳಲ್ಲಿ ರಾಜ್ಯ ತಂಡ ಪ್ರತಿನಿಧಿಸಿ ಕೀರ್ತಿ ಗಳಿಸುವ ಜತೆ ಹಲ ಪ್ರಶಸ್ತಿಗಳನ್ನು ತನ್ನ ಮಡಿಲಿಗೆ ಹಾಕಿಕೊಂಡಿದ್ದಾರೆ.

ಕೊರಟಗೆರೆ ಸಿಡಿಪಿಒ ಕೆ.ಆರ್.ಹೊನ್ನೇಶಪ್ಪ ಪ್ರಜ್ವಲ್ ತಂದೆ. ತಾಯಿ ಶಕುಂತಲ ಪ್ರೋತ್ಸಾಹದಿಂದಲೇ ಮಾರುತಿ ವಿದ್ಯಾಕೇಂದ್ರದ ದೈಹಿಕ ಶಿಕ್ಷಣ ಶಿಕ್ಷಕ ವಿನಯ್ ಕುಮಾರ್ ಅವರ ತಂಡಕ್ಕೆ ಸೇರಿದರು. ಇಲ್ಲಿಂದ ಸೇರಿದ್ದು ವಿವೇಕಾನಂದ ಕ್ರೀಡಾ ಸಂಸ್ಥೆ ತರಬೇತುದಾರ ಡಾ.ಜಿ.ಎಸ್.ರವೀಶ್ ಬಳಿ. ಕೊಕ್ಕೊ ಒಳವರ್ಮ, ಸೂಕ್ಷ್ಮ ಕಲಿಯುತ್ತಲೇ ಅಂತರರಾಷ್ಟ್ರೀಯ ಆಟಗಾರನಾಗಲು ಓಟ ಆರಂಭಿಸಿದ್ದಾರೆ.

ಛತ್ತೀಸ್‌ಘಡದಲ್ಲಿ 2009ರಲ್ಲಿ ನಡೆದ ಸಿಬಿಎಸ್‌ಇ ರಾಷ್ಟ್ರ ಮಟ್ಟದ ಕೊಕ್ಕೊ ಕ್ರೀಡಾಕೂಟದಲ್ಲಿ ರಾಜ್ಯ ತಂಡ ನಾಲ್ಕನೇ ಸ್ಥಾನ ಪಡೆದರೆ, ಪ್ರಜ್ವಲ್ ತನ್ನ ಅಮೋಘ ವೈಯಕ್ತಿಕ ಪ್ರದರ್ಶನದಿಂದ `ಟೂರ್ನಿಯ ಉತ್ತಮ ಆಟಗಾರ ಪ್ರಶಸ್ತಿ'ಗೆ ಭಾಜನರಾದರು.

ಬಳ್ಳಾರಿಯಲ್ಲಿ ನಡೆದ 2010ರ ಸಿಬಿಎಸ್‌ಇ ದಕ್ಷಿಣ ವಲಯ ಕೊಕ್ಕೊ ಕ್ರೀಡಾಕೂಟದಲ್ಲಿ ಗೆಲ್ಲುವ ಮೂಲಕ ಮತ್ತಷ್ಟು ವೇಗ ಪಡೆದ ಪ್ರಜ್ವಲ್, ಹರಿಯಾಣದಲ್ಲಿ ನಡೆದ ರಾಷ್ಟ್ರೀಯ ಕೊಕ್ಕೊ ಪಂದ್ಯಾವಳಿಯಲ್ಲೂ `ಶ್ರೇಷ್ಠ ಆಟಗಾರ ಪ್ರಶಸ್ತಿ'ಯನ್ನು ತನ್ನ ಮುಡಿಗೇರಿಸಿಕೊಂಡರು. 2010ರಲ್ಲಿ ಬೆಂಗಳೂರಿನಲ್ಲಿ ನಡೆದ ಅಖಿಲ ಭಾರತ ಜೂನಿಯರ್ ಕೊಕ್ಕೊ ಪಂದ್ಯಾವಳಿಯಲ್ಲಿ ಮತ್ತೊಮ್ಮೆ ಉತ್ತಮ ಆಟಗಾರ ಪ್ರಶಸ್ತಿ ಪಡೆಯುವ ಜತೆ ತಂಡಕ್ಕೆ ಕಂಚಿನ ಪದಕ ತಂದುಕೊಟ್ಟರು. ವೈಯಕ್ತಿಕವಾಗಿ ತನ್ನ ಶ್ರೇಷ್ಠ ಸಾಧನೆಗಾಗಿ ಹ್ಯಾಟ್ರಿಕ್ ಪ್ರಶಸ್ತಿ ಬಾಚಿಕೊಂಡ.

ಭೂಪಾಲ್‌ನಲ್ಲಿ ನಡೆದ ಅಖಿಲ ಭಾರತ ಜೂನಿಯರ್ ಪಂದ್ಯಾವಳಿಯಲ್ಲಿ ನಾಲ್ಕನೇ ಸ್ಥಾನ, ತುಮಕೂರಿನಲ್ಲಿ ನಡೆದ ಪದವಿ ಪೂರ್ವ ಕಾಲೇಜುಗಳ ರಾಜ್ಯಮಟ್ಟದ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನದೊಂದಿಗೆ ಉತ್ತಮ ಓಟಗಾರ ಪ್ರಶಸ್ತಿ, 2013ರಲ್ಲಿ ಮಹಾರಾಷ್ಟ್ರದ ಪಾಲ್ತಾನ್‌ನಲ್ಲಿ ನಡೆದ 58ನೇ ಶಾಲಾ ಕ್ರೀಡಾಕೂಟದಲ್ಲಿ ರಾಜ್ಯ ತಂಡ ದ್ವಿತೀಯ ಸ್ಥಾನ ಗಳಿಸಿ ಬೆಳ್ಳಿ ಪದಕ ಗೆಲ್ಲುವಲ್ಲಿ ಪ್ರಜ್ವಲ್ ಪಾತ್ರ ನಿರ್ಣಾಯಕ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT