ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಿ ಬಳುಕಿದರೆ ಬಹುಮಾನ...

Last Updated 30 ಅಕ್ಟೋಬರ್ 2013, 10:13 IST
ಅಕ್ಷರ ಗಾತ್ರ

ಜಿಮ್ನಾಸ್ಟಿಕ್‌ ಆಡುವುದಕ್ಕೆ ದೇಹವಷ್ಟೇ ಅಲ್ಲ ಉಸಿರಿನ ಮೇಲೂ ಹಿಡಿತ ಇರಬೇಕು, ಇಂಥ ಕ್ರೀಡೆಯಲ್ಲಿ ಜಿಲ್ಲೆಯ ಹೆಸರನ್ನು ರಾಷ್ಟ್ರಮಟ್ಟದಲ್ಲಿ ಎತ್ತಿ ಹಿಡಿದವರು ಕೆ.ರಕ್ಷಿತಾ.

ಮೂಲತಃ ಪಾವಗಡ ತಾಲ್ಲೂಕು ನಾಗಲಾಪುರದ ಈಕೆ, 5ನೇ ತರಗತಿಯಲ್ಲಿಯೇ ಜಿಮ್ನಾಸ್ಟಿಕ್‌ ಕ್ರೀಡಾಸಕ್ತಿ ತೋರಿಸಿದರು. ಇವರನ್ನು ತಂದೆ ಕೃಷ್ಣಮೂರ್ತಿ, ತಾಯಿ ಕಮಲ ಪ್ರೋತ್ಸಾಹಿಸಿ ತರಬೇತುದಾರ ಸುಧೀರ್‌ ದೇವದಾಸ್‌್ ಅವರ ಬಳಿ ಸೇರಿಸಿದರು. ಅವರ ಮಾರ್ಗದರ್ಶನದಲ್ಲಿಯೇ ಜಿಮ್ನಾಸ್ಟಿಕ್‌ನ ತಂತ್ರಗಳನ್ನು  ಕರಗತ ಮಾಡಿಕೊಂಡರು.

2010ರಲ್ಲಿ ಧಾರವಾಡದಲ್ಲಿ ನಡೆದ ರಾಜ್ಯ ಜೂನಿಯರ್‌ ಜಿಮ್ನಾಸ್ಟಿಕ್‌ ಸ್ಪರ್ಧೆಯಲ್ಲಿ  ತನ್ನ ಚಾಕಚಕ್ಯತೆ ತೋರುವ ಮೂಲಕ ಅನ್‌ಇವನ್‌ಬಾರ್‌, ವಾಲ್ಟಿಂಗ್‌ ಹಾರ್ಸ್‌ ವಿಭಾಗದಲ್ಲಿ ಮೂರನೇ ಸ್ಥಾನವನ್ನು ಪಡೆದರು.
ತನ್ನ ಮೊದಲ ಕ್ರೀಡಾಕೂಟದಲ್ಲೇ ಪದಕವನ್ನು ಸಾಧಿಸಿದ ರಕ್ಷಿತಾ ಅಲ್ಲಿಂದ ಜಿಮ್ನಾಸ್ಟಿಕ್‌ನ ಒಂದೊಂದೆ ಮೆಟ್ಟಿಲು ಹತ್ತತೊಡಗಿದರು.

ಪ್ರತಿಭಾವಂತ ಕ್ರೀಡಾಪಟುಗಳಿಗಾಗಿ ಕೊಡಗು ಜಿಲ್ಲೆಯ ಕೂಡಿಗೆ ಸರ್ಕಾರಿ ಕ್ರೀಡಾ ಶಾಲೆಯಲ್ಲಿ 8ನೇ ತರಗತಿಗೆ ಪ್ರವೇಶ ಗಿಟ್ಟಿಸಿ, ತರಬೇತುದಾರ ಸುರೇಶ್‌ ಗರಡಿಯಲ್ಲಿ  ಜಿಮ್ನಾಸ್ಟಿಕ್‌ನಲ್ಲಿ ಮತ್ತಷ್ಟು ಪಳಗಿದರು.

ಧಾರವಾಡದಲ್ಲಿ 2012ರಲ್ಲಿ ನಡೆದ ರಾಜ್ಯ ಶಾಲಾ ಕ್ರೀಡಾಕೂಟದಲ್ಲಿ ಫ್ಲೋರ್‌ ಎಕ್ಸ್‌ರ್‌ ಸೈಜ್‌ ವಿಭಾಗದಲ್ಲಿ 2ನೇ ಸ್ಥಾನ. 2009ರಿಂದ 2012ರವರೆಗೆ ರಾಜ್ಯ ದಸರಾ ಕ್ರೀಡಾಕೂಟದಲ್ಲಿ ಸತತ 4 ಬಾರಿ ಮೈಸೂರು ತಂಡವನ್ನು ಪ್ರತಿನಿಧಿಸಿದ್ದ ಕೀರ್ತಿ ರಕ್ಷಿತಾ ಅವರದ್ದು. ಬ್ಯಾಲೆನ್ಸಿಂಗ್‌ ಬೀಮ್‌, ಅನ್‌ಈವನ್‌ ಬಾರ್‌, ಪ್ಲೋರ್‌ ಎಕ್ಸ್‌ರ್‌ ಸೈಜ್‌್ ವಿಭಾಗಗಳಲ್ಲಿ ತನ್ನ ಪ್ರತಿಭೆಯನ್ನು ತೋರಿರುವ ರಕ್ಷಿತಾ

ಹಾವೇರಿಯಲ್ಲಿ ನಡೆದ 2012ರ ರಾಜ್ಯ ಮಹಿಳಾ ಕ್ರೀಡಾಕೂಟದಲ್ಲಿ ತಂಡಕ್ಕೆ 2ಸ್ಥಾನವನ್ನು ತಂದುಕೊಂಡುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.

ಛತ್ತಿಸ್‌ಗಡದಲ್ಲಿ 2010ರಲ್ಲಿ ನಡೆದ ರಾಷ್ಟ್ರೀಯ ಮಹಿಳಾ ಕ್ರೀಡಾಕೂಟ, 2011ರ ಚೆನ್ನೈ ಕ್ರೀಡಾಕೂಟ,  2011ಎಸ್‌ಜಿಎಫ್‌ಐ (ಸ್ಕೂಲ್‌ ಗೇಮ್ಸ್‌ ಫೆಡರೇಶನ್‌ ಆಫ್‌್ ಇಂಡಿಯಾ) ಮಹಾರಾಷ್ಟ್ರದಲ್ಲಿ ಆಯೋಜಿಸಿದ್ದ ರಾಷ್ಟೀಯ ಶಾಲಾ ಕ್ರೀಡಾಕೂಟ, 2012ರಲ್ಲಿ ಕೊಲ್ಕತ್ತಾದಲ್ಲಿ ನಡೆದ ಕ್ರೀಡಾಕೂಟದಲ್ಲಿ ಸೆಮಿಫೈನಲ್‌ಗೆ ಲಗ್ಗೆ, 2013ರಲ್ಲಿ ಪುಣೆಯಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗಿ ಹೀಗೆ ಸತತ ಐದು ಬಾರಿ ರಾಷ್ಟ್ರೀಯ ಕ್ರೀಡಾಕೂಟವನ್ನು ಪ್ರತಿನಿಧಿಸಿದ ಹೆಮ್ಮೆ ಈಕೆಯದು.

ಚಿತ್ರದುರ್ಗದಲ್ಲಿ ಕಳೆದ ಸೋಮವಾರ ನಡೆದ 2013 ರಾಜ್ಯ ಮಹಿಳಾ ಕ್ರೀಡಾಕೂಟದಲ್ಲಿ ವೈಯಕ್ತಿಕ ವಿಭಾಗದಲ್ಲಿ 2 ಬೆಳ್ಳಿ, 1ಕಂಚು ಪಡೆದು, ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ತಂಡ ಪ್ರಶಸ್ತಿಯ ಪದಕಕ್ಕೆ ಮುತ್ತಿಡಲು ಪ್ರಮುಖ ಪಾತ್ರ ವಹಿಸಿದ್ದರು.

ಪ್ರಸುತ್ತ ಸರ್ವೋದಯ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗದೊಂದಿಗೆ ಜಿಮ್ನಾಸ್ಟಿಕ್‌ ತಂತ್ರಗಳನ್ನು ಕಲಿಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT