ತುರುವೇಕೆರೆ: ಸೋಮವಾರ ಹುಣ್ಣಿಮೆ ಕಾಣುವ ಮೊದಲೇ ಕಲ್ಪತರು ಆಶ್ರಮದ ಸ್ವಾಮೀಜಿ ಅಸ್ತಮಿಸಿ ಅಮಾವಾಸ್ಯೆ ಕಗ್ಗತ್ತಲು ಆವರಿಸಿತು. ಸಾವಿರಾರು ಜನರಿಗೆ ಸಹಾಯ ಹಸ್ತ ನೀಡಿದ್ದ, ಅಧ್ಯಾತ್ಮದ ಬೆಳಕು ತೋರಿದ್ದ ದೊಡ್ಡ ಕಲ್ಪವೃಕ್ಷ ಧರೆಗುರುಳಿತ್ತು. ಭಾನುವಾರ ಕಲ್ಪತರು ಆಶ್ರಮದಲ್ಲಿ ಎಲ್ಲೆಲ್ಲೂ ಸೂತಕದ ಛಾಯೆ.

ಶಿವಕುಮಾರನಾಥರಿಲ್ಲದ ಆಶ್ರಮದಲ್ಲಿ 350 ಮಕ್ಕಳು ಅನಾಥರಂತೆ ಅಳುತ್ತಿದ್ದರು. ಬದುಕಿನ ಹಂಗೇ ಬೇಡವೆಂದು ಸಾವಿನ ಮನೆ ಅರಸಿ ಹೊರಟಿದ್ದ ನೂರಾರು ಹಿರಿಯ ಚೇತನಗಳಿಗೆ ಹೊಸ ಬದುಕು ಕಟ್ಟಿಕೊಟ್ಟಿದ್ದ ಸ್ವಾಮೀಜಿ ಅವರೆಲ್ಲರಿಗಿಂತ ಮುಂಚೆ ತಾವೇ ಹೊರಟುಹೋಗಿದ್ದನ್ನು ಕಂಡು ಆ ವಯೋವೃದ್ಧರು ಬಿಕ್ಕಿ ಬಿಕ್ಕಿ ಅತ್ತರು.

ತಾವು ಸ್ವಾಮೀಜಿ ಎಂಬ ಹಮ್ಮು, ಬಿಮ್ಮು, ಪ್ರತಿಷ್ಠೆಯನ್ನು ಯಾವತ್ತೂ ಮೆರೆದವರಲ್ಲ. ಪೀಠ, ಸ್ಥಾನಗಳಿಗಾಗಿ ಹಂಬಲಿಸಿದವರಲ್ಲ. ಎಲ್ಲರೊಡನೆಯೂ ಬೆರೆಯುವ ಸರಳ ಜೀವಿಯಾಗಿದ್ದರು.

ಸ್ವಾಮೀಜಿ ಇಡೀ ತಾಲ್ಲೂಕಿನ ಹಳ್ಳಿ ಹಳ್ಳಿಯನ್ನೂ ಸುತ್ತಿದ್ದರು. ಮದುವೆ, ನಾಮಕರಣ, ಸಾವು ಹೀಗೆ ಯಾವುದೇ ಘಟನೆಯಾದರೂ ಹಾಜರಾಗುತ್ತಿದ್ದರು. ಆದಿಚುಂಚನಗಿರಿ ಪೀಠ, ಭಕ್ತರ ಮಧ್ಯೆ ಭಾವನಾತ್ಮಕ ಕೊಂಡಿಯಾಗಿದ್ದರು. ಶಿಕ್ಷಣ, ಆರೋಗ್ಯ, ಆರ್ಥಿಕ ಸಹಾಯ ಹೀಗೇ ಏನೇ ಬೇಕಾದರೂ ಸ್ವಾಮೀಜಿಯವರಲ್ಲಿ ಅಲವತ್ತುಕೊಳ್ಳುತ್ತಿದ್ದರು.

ಸ್ವಾಮೀಜಿ ತಮ್ಮ ಪ್ರವಚನದಲ್ಲಿ ಒಂದು ಕತೆ ಹೇಳುತ್ತಿದ್ದರು. ಮಾನವನಿಗೆ ಬ್ರಹ್ಮ ಕೊಟ್ಟದ್ದೇ 40 ವರ್ಷ ಆಯಸ್ಸು. 20 ವರ್ಷ ಕತ್ತೆಯಂತೆ ದುಡಿದು, 20 ವರ್ಷ ನಾಯಿಯಂತೆ ಕಿತ್ತಾಡಿ ದುಡಿದು, ಕೊನೆಗೆ ಹೆಚ್ಚುವರಿಯಾಗಿ ಸಿಗುವ 20 ವರ್ಷದಲ್ಲಿ ಗೂಬೆಯಂತೆ ಕಳೆಯುತ್ತಾನೆ.

ಹಾಗಾಗಿ ಅವನು ಆಯಾ ವಯಸ್ಸಿಗೆ ತಕ್ಕ ಹಾಗೆ ಬದುಕುತ್ತಾನೆ. ಅಂತಹ ಅವಸ್ಥೆಗಳನ್ನು ಮೆಟ್ಟಿ ನಿಲ್ಲುವುದೇ ಅಧ್ಯಾತ್ಮದ ಗುರಿ ಎನ್ನುತ್ತಿದ್ದರು. ಈ ಕತೆ ಈ ಭಾಗದಲ್ಲಿ ಅತ್ಯಂತ ಜನಪ್ರಿಯವಾಗಿತ್ತು.

ಸ್ವಾಮೀಜಿ ಅಪ್ಪಟ ಕೃಷಿಕರಾಗಿದ್ದರು. ವೇದ ಮಂತ್ರಗಳಿಗಿಂತ ಕಾಯಕ ಮಂತ್ರಕ್ಕೆ ಮಹತ್ವ ನೀಡಿದ್ದರು. ಸತತ ಪರಿಶ್ರಮದಿಂದ ಮಾಯಸಂದ್ರ ಆಶ್ರಮದ ಪಾಳು ಬಿದ್ದ ಜಮೀನಿನಲ್ಲಿ 10 ಸಾವಿರಕ್ಕೂ ಹೆಚ್ಚು ತೆಂಗಿನಗಿಡ ಬೆಳೆಸಿ ಹಸಿರುಕ್ರಾಂತಿ ಮಾಡಿದ್ದರು.

ಮಾಯಸಂದ್ರದಲ್ಲಿ ನೆಹರು ವಿದ್ಯಾ ವಸತಿ ಶಾಲೆ, ಮಣೆಚಂಡೂರಿನಲ್ಲಿ ಪ್ರೌಢಶಾಲೆ, ದಬ್ಬೆಘಟ್ಟದಲ್ಲಿ ಕಾನ್ವೆಂಟ್, ತುರುವೇಕೆರೆಯಲ್ಲಿ ಮಯೂರ ಕಾನ್ವೆಂಟ್, ಕಲ್ಪತರು ಆಶ್ರಮದ ವಸತಿ ಶಾಲೆ ಆರಂಭಿಸಿದ್ದರು. ಜತೆಗೆ ದಸರಿ ಘಟ್ಟದ ಮಠ, ಕಬ್ಬಳಿ ಕ್ಷೇತ್ರದ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದರು. ಈಚೆಗೆ ತುಮಕೂರಿನ ಮಂಚಲಗುಪ್ಪೆ ಗ್ರಾಮದ 30 ಎಕರೆ ಜಮೀನಿನಲ್ಲಿ ಉನ್ನತ ಶಿಕ್ಷಣ ಸಂಸ್ಥೆ ನಿರ್ಮಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.

ಈಗ ಆಶ್ರಮದ ಎಲ್ಲ ಚಟುವಟಿಕೆಗಳಿಗೆ ಮಾರ್ಗದರ್ಶನವಿಲ್ಲದೆ ಪೂರ್ಣವಿರಾಮ ಬಿದ್ದಂತಾಗಿದೆ. ಭಾನುವಾರ ಸಂಜೆ 6 ಗಂಟೆ ವೇಳೆಗೆ ಸ್ವಾಮೀಜಿ ಪಾರ್ಥಿವ ಶರೀರವನ್ನು ಆದಿಚುಂಚನಗಿರಿಗೆ ಅಂತ್ಯಸಂಸ್ಕಾರಕ್ಕೆ ಒಯ್ಯಲಾಯಿತು. ನಾಳೆ ಹುಣ್ಣಿಮೆಯ ಕಾರಣ ಸಂಜೆಯೇ ಅಂತ್ಯ ಸಂಸ್ಕಾರ ನಡೆಯಿತು.

ಭಾವಪೂರ್ಣ ಶ್ರದ್ಧಾಂಜಲಿ
ಮಾಯಸಂದ್ರದ ಶಾಖಾ ಮಠಕ್ಕೆ ಭಾನುವಾರ ಮಧ್ಯಾಹ್ನದಿಂದ ಸಂಜೆವರೆಗೆ ಅಪಾರ ಸಂಖ್ಯೆಯ ಭಕ್ತರು ಆಗಮಿಸಿ ಶಿವಕುಮಾರನಾಥ ಸ್ವಾಮೀಜಿ ಅವರ ಅಂತಿಮ ದರ್ಶನ ಪಡೆದರು.

ಸ್ವಾಮಿಜಿಯ ಅಗಲಿಕೆಗೆ ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ತೀವ್ರ ದಿಗ್ಬ್ರಮೆ ವ್ಯಕ್ತಪಡಿಸಿ ಕಂಬನಿ ಮಿಡಿದಿದ್ದಾರೆ.

ಪಟ್ಟಣದಲ್ಲಿ ಸಭೆ ನಡೆಸಿ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಲಾಯಿತು. ಶಾಸಕ ಎಂ.ಟಿ.ಕೃಷ್ಣಪ್ಪ, ಎಂಎಲ್‌ಸಿ ಎಂ.ಡಿ.ಲಕ್ಷ್ಮೀನಾರಾಯಣ್, ಮಸಾಲಾ ಜಯರಾಂ, ಮಾಜಿ ಶಾಸಕ ಎಸ್.ರುದ್ರಪ್ಪ, ಪ.ಪಂ.ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ್, ಸ್ವಾಮೀಜಿ ಅವರ ನಿಕಟವರ್ತಿ ಪ್ರೊ.ಪುಟ್ಟರಂಗಪ್ಪ, ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕ ಬೂವನಹಳ್ಳಿ ದೇವರಾಜ್, ತಾಲ್ಲೂಕು ಕಸಾಪ ಅಧ್ಯಕ್ಷ ಎಸ್.ದೇವರಾಜ್, ವಕೀಲ ಧನಪಾಲ್, ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಸಿದ್ದೇಗೌಡ, ರಂಗಸ್ವಾಮಿ, ದಾನಿಗೌಡ, ಕೋಳಾಲ ನಾಗರಾಜ್, ಪ್ರಸನ್ನ, ಲೋಕೇಶ್, ಬಿ.ಶಿವಣ್ಣ, ವಿಜಿಕುಮಾರ್, ಗಂಗಾಧರ್ ಎಂ.ಎನ್.ಚಂದ್ರೇಗೌಡ ಇತರರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.