ಸೋಮವಾರ, ಜನವರಿ 24, 2022
28 °C

ರಾಜ್ಯದಲ್ಲಿ 150 ಹಾಸ್ಟೆಲ್‌ಗಳ ನಿರ್ಮಾಣ: ಸಚಿವ ಕೋಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ‌ಹಾಸ್ಟೆಲ್‌ಗಳು ಭರ್ತಿಯಾಗಿದ್ದು, 1.26 ಲಕ್ಷ ವಿದ್ಯಾರ್ಥಿಗಳು ಪ್ರವೇಶಾತಿ ಕೋರಿ ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ 150 ಹಾಸ್ಟೆಲ್‌ಗಳ ಆರಂಭಕ್ಕೆ ಮುಖ್ಯಮಂತ್ರಿ ಅನುಮೋದನೆ ನೀಡಿದ್ದಾರೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಈಗಿರುವ ಹಾಸ್ಟೆಲ್‌ಗಳಲ್ಲಿ ಶೇ 10ರಷ್ಟು ವಿದ್ಯಾರ್ಥಿಗಳಿಗೆ ಹೆಚ್ಚುವರಿ ಸ್ಥಳಾವಕಾಶ ನೀಡಲಾಗುವುದು. ಉಳಿದ ವಿದ್ಯಾರ್ಥಿಗಳಿಗೆ ಆಯಾ ಜಿಲ್ಲೆಗಳಲ್ಲಿರುವ ಖಾಸಗಿ, ಸರ್ಕಾರಿ ಕಟ್ಟಡಗಳಲ್ಲಿ ಅವಕಾಶ ಮಾಡಿಕೊಡಲಾಗುವುದು. ಮುಂದಿನ ಶೈಕ್ಷಣಿಕ ವರ್ಷದೊಳಗೆ 150 ಹಾಸ್ಟೆಲ್‌ಗಳ ಕಟ್ಟಡಗಳನ್ನು ನಿರ್ಮಾಣ ಮಾಡಲಾಗುತ್ತದೆ ಎಂದು ಸಚಿವರು ಹೇಳಿದರು.

ಹಾಸ್ಟೆಲ್‌ಗಳಿಗೆ ಆಹಾರ ಪೂರೈಕೆ ಟೆಂಡರ್‌ನಲ್ಲಿ ನಡೆಯುತ್ತಿರುವ ಅಕ್ರಮಗಳ ತಡೆಗೆ ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿ ರಚಿಸಲಾಗಿದೆ. ಟೆಂಡರ್‌ದಾರರು ಮಾರುಕಟ್ಟೆ ದರಕ್ಕಿಂತ ಕಡಿಮೆ ದರ ನಮೂದಿಸಿದ್ದರೆ ಪುನರ್‌ ಪರಿಶೀಲನೆಗೆ ಸೂಚನೆ ನೀಡಲಾಗಿದೆ. ಜತೆಗೆ, ಆಹಾರ ಪದಾರ್ಥಗಳ ಗುಣಮಟ್ಟ ಕಳಪೆಯಾಗಿದ್ದರೆ ಕ್ರಮಕ್ಕೆ ನಿರ್ದೇಶನ ನೀಡಲಾಗಿದೆ ಎಂದರು.

ಸ್ಥಳೀಯಾಡಳಿತ ಸಂಸ್ಥೆಗಳ ಜನಪ್ರತಿನಿಧಿಗಳು ಸರ್ಕಾರದ ಯೋಜನೆಗಳ ಮಾಹಿತಿಯನ್ನು ಫಲಾನುಭವಿಗಳಿಗೆ ತಿಳಿಸಲು ಕರಾವಳಿಯಲ್ಲಿ ಪ್ರಾಯೋಗಿಕವಾಗಿ ನಡೆದಿದ್ದ ಅಂತ್ಯೋದಯ ಕಾರ್ಯಕ್ರಮವನ್ನು ಎಲ್ಲ ಜಿಲ್ಲೆಗಳಿಗೆ ವಿಸ್ತರಿಸಲಾಗುವುದು ಎಂದರು.

ಕರಾಟೆ ತರಬೇತಿ: ಹಿಂದುಳಿದ ವರ್ಗಗಳ, ಸಮಾಜ ಕಲ್ಯಾಣ ಇಲಾಖೆಯಡಿ 1,500 ಮೆಟ್ರಿಕ್ ನಂತರದ ಶಾಲೆಗಳಲ್ಲಿ ಬಾಲಕಿಯರ ಆತ್ಮರಕ್ಷಣೆಗಾಗಿ ಕರಾಟೆ ತರಬೇತಿ ಕಲಿಸಲಾಗುವುದು. ಬ್ಲಾಕ್ ಬೆಲ್ಟ್ ಪಡೆದ ಮಹಿಳಾ ತರಬೇತುದಾರರನ್ನು ನೇಮಿಸಲಾಗುವುದು ಎಂದರು.

ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ, ಕಾಂಗ್ರೆಸ್ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ನಡೆಸುತ್ತಿರುವ ಮೇಕೆದಾಟು ಪಾದಯಾತ್ರೆಯಲ್ಲಿ ಕಾನೂನು ಹಾಗೂ ನಿಯಮಗಳ ಉಲ್ಲಂಘನೆ ಸಂಬಂಧ ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ ಎಂದು ಕೋಟ ಹೇಳಿದರು.

ವರದಿಗೆ ಸೂಚನೆ: ಭೋವಿ ಜನಾಂಗದಲ್ಲಿ ಕಲ್ಲು ಕಡಿಯುವ ಕುಲಕಸುಬನ್ನು ಮಾಡುತ್ತಿರುವವರಿಗೆ ಪರಿಶಿಷ್ಟ ಜಾತಿಯ ಪ್ರಮಾಣಪತ್ರ ಕೊಡಲಾಗುತ್ತಿಲ್ಲ ಎಂಬ ದೂರುಗಳು ಬಂದಿದ್ದು, ಈ ಬಗ್ಗೆ ಅಧ್ಯಯನ ವರದಿ ಸಲ್ಲಿಸಿ ಸರ್ಕಾರಕ್ಕೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಅವರಿಗೆ ಅವರಿಗೆ ಸೂಚನೆ ನೀಡಲಾಗಿದೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.