ಸೋಮವಾರ, ಸೆಪ್ಟೆಂಬರ್ 26, 2022
24 °C

ಉಡುಪಿ ರಜತ ಮಹೋತ್ಸವ ಹಬ್ಬದಂತೆ ಆಚರಿಸಿ: ಶಾಸಕ ರಘುಪತಿ ಭಟ್ ಕರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಉಡುಪಿ ರಜತ ಮಹೋತ್ಸವ ಕಾರ್ಯಕ್ರಮವನ್ನು ಹಬ್ಬದ ರೀತಿಯಲ್ಲಿ ಆಚರಿಸಬೇಕು ಎಂದು ಜಿಲ್ಲೆಯ ಜನರು ಹಾಗೂ ಸಂಘ ಸಂಸ್ಥೆಗಳಿಗೆ ಶಾಸಕ ಕೆ.ರಘುಪತಿ ಭಟ್ ಕರೆ ನೀಡಿದರು.

ಬುಧವಾರ ಉಡುಪಿ ರಜತ ಉತ್ಸವ ಆಚರಣೆ ಕುರಿತು ಪ್ರವಾಸಿ ಮಂದಿರದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಉಡುಪಿ ಜಿಲ್ಲೆ ರಚನೆ ಮಾಡಬೇಕು ಎಂಬ ಜನರ ಒತ್ತಾಸೆ ಅರಿತು ಅಂದಿನ ಸರ್ಕಾರ ಉಡುಪಿ ಜಿಲ್ಲೆ ರಚನೆ ಮಾಡಿತು. ಉಡುಪಿ ಜಿಲ್ಲೆಯಾಗಿ ಆ.25ಕ್ಕೆ 25 ವರ್ಷಗಳು ತುಂಬುತ್ತಿದ್ದು ರಜತ ಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ ಎಂದರು.

ಜಿಲ್ಲೆಯು ಇದುವರೆಗೆ ಬೆಳೆದು ಬಂದಿರುವ ಹಾದಿ ಮತ್ತು ಆಗಬೇಕಿರುವ ಅಭಿವೃಧ್ದಿಯ ಬಗ್ಗೆ ಅವಲೋಕನ ಮಾಡಿಕೊಳ್ಳಲು ರಜತ ಮಹೋತ್ಸವ ಕಾರ್ಯಕ್ರಮಗಳು ಪೂರಕವಾಗಲಿವೆ. ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲು ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ವೇದಿಕೆ ಕಾರ್ಯಕ್ರಮ ಆ.25ರಂದು ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದ್ದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹಾಗೂ ಹಲವು ಸಚಿವರು ಭಾಗವಹಿಸಲಿದ್ದಾರೆ. ರಜತ ಮಹೋತ್ಸವದ ಅಂಗವಾಗಿ ಉಡುಪಿಯ ಬೋರ್ಡ್ ಶಾಲೆಯಿಂದ ಅಜ್ಜರಕಾಡು ಕ್ರೀಡಾಂಗಣದವರೆಗೆ ವಿವಿಧ ಸಾಂಸ್ಕೃತಿಕ ಕಲಾತಂಡಗಳ ಪ್ರದರ್ಶನ ಹಾಗೂ ಶಾಲಾ ವಿದ್ಯಾರ್ಥಿಗಳಿಂದ ಮೆರವಣಿಗೆ ಆಯೋಜಿಸಬೇಕು ಎಂದು ಸೂಚಿಸಿದರು.

ರಜತ ಮಹೋತ್ಸವ ಕಾರ್ಯಕ್ರಮಗಳ ಕುರಿತು ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚಿನ ಪ್ರಚಾರ ನೀಡಬೇಕು.  ಆ.24ರಿಂದ ನೇಷನ್ ಫಸ್ಟ್ ತಂಡ ಹಾಗೂ ವಿವಿಧ ಕಾಲೇಜು ವಿದ್ಯಾರ್ಥಿಗಳಿಂದ ಜಿಲ್ಲೆಯಾದ್ಯಂತ 75 ಕಿ.ಮೀ ಓಟದ ಕಾರ್ಯಕ್ರಮ ನಡೆಯಲಿದೆ ಎಂದರು.

ರಜತ ಮಹೋತ್ಸವ ಕಾರ್ಯಕ್ರಮಕ್ಕೆ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು, ಗಣ್ಯರು ಹಾಗೂ ಜಿಲ್ಲೆಯ ಆರಂಭದ ದಿನಗಳಿಂದ ಇಲ್ಲಿಯವರೆಗೂ ಕಾರ್ಯ ನಿರ್ವಹಿಸುತ್ತಿರುವ ಜನಪ್ರತಿನಿಧಿಗಳನ್ನು ಆಹ್ವಾನಿಸಬೇಕು ಎಂದರು.

ಉತ್ಸವದ ಯಶಸ್ವಿ ಆಚರಣೆ ಕುರಿತು ರಚಿಸಲಾಗಿರುವ ಎಲ್ಲ ಸಮಿತಿಗಳು ನೀಡಿರುವ ಜವಾಬ್ದಾರಿಗಳನ್ನು ಪರಸ್ಪರ ಸಮನ್ವಯದಿಂದ ನಿಭಾಯಿಸುವಂತೆ ಶಾಸಕ ರಘುಪತಿ ಭಟ್ ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಕೂರ್ಮಾರಾವ್, ಜಿಲ್ಲಾ ಪಂಚಾಯಿತಿ ಸಿಇಒ ಎಚ್‌.ಪ್ರಸನ್ನ, ಎಸ್‌ಪಿ ಅಕ್ಷಯ್ ಹಾಕೆ ಮಚೀಂದ್ರ, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್‌.ವೀಣಾ ಹಾಗೂ ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.