ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೈಗಾರಿಕೆಗಳಿಗೆ ವಿನಯ್‌ ಕುಮಾರ್ ಸೊರಕೆ ನೇತೃತ್ವದ ನಿಯೋಗ ಭೇಟಿ

ಸ್ಥಳೀಯರಿಗೆ ಉದ್ಯೋಗ ನೀಡಲು, ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಸೂಚನೆ
Published 22 ಜೂನ್ 2024, 14:30 IST
Last Updated 22 ಜೂನ್ 2024, 14:30 IST
ಅಕ್ಷರ ಗಾತ್ರ

ಪಡುಬಿದ್ರಿ: ಈ ಭಾಗದಲ್ಲಿ ಹೊಸದಾಗಿ ಕಾರ್ಯಾಚರಣೆ ನಡೆಸುತ್ತಿರುವ ಮೂರು ಕಂಪನಿಗಳಿಗೆ ಮಾಜಿ ಸಚಿವ ವಿನಯ್‌ ಕುಮಾರ್ ಸೊರಕೆ ನೇತೃತ್ವದ ನಿಯೋಗ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಕಂಪನಿಯಿಂದಾಗಿ ಸುತ್ತಮುತ್ತಲ ಪರಿಸರದಲ್ಲಿ ಮಾಲಿನ್ಯ ಉಂಟಾಗುತ್ತಿದೆ. ಉದ್ಯೋಗದಲ್ಲಿ ಸ್ಥಳೀಯರಿಗೆ ಪ್ರಾಶಸ್ತ್ಯ ನೀಡುತ್ತಿಲ್ಲ. ಕಾರ್ಮಿಕರಿಗೆ ಭದ್ರತೆ ಇಲ್ಲ ಎಂಬ ಬಗ್ಗೆ ಸ್ಥಳೀಯರು ದೂರು ನೀಡಿದ್ದರು.

ಈ ಕಾರಣಕ್ಕೆ ಪಲಿಮಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಂದಿಕೂರಿನಲ್ಲಿರುವ ಪಾಮ್ ಆಯಿಲ್, ಸನ್ ಫ್ಲವರ್ ಆಯಿಲ್, ಬಯೊ ಡೀಸೆಲ್ ಉತ್ಪಾದನಾ ಘಟಕ ಎಂ11, ಹೆಜಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಸ್ಟೀಲ್ ಪೈಪ್ ತಯಾರಿಕಾ ಘಟಕ ಜೈನ್ ಇಂಡಸ್ಟ್ರೀಸ್, ಪಡುಬಿದ್ರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿರುವ ಮೀನುಗೊಬ್ಬರ ಪ್ಯಾಕಿಂಗ್ ಘಟಕ, ಹೆಕ್ಸಾ ನ್ಯಾಚುರಲ್ ಪ್ರೊಟೀನ್ಸ್ ಕಂಪೆನಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು.

ಎಂ11 ಇಂಡಸ್ಟ್ರೀಸ್‌ಗೆ ತೆರಳಿದ ನಿಯೋಗ ಅಲ್ಲಿನ ಉತ್ಪದನಾ ಘಟಕವನ್ನು ವೀಕ್ಷಿಸಿ ಮಾಹಿತಿ ಪಡೆದುಕೊಂಡಿತು. ಈ ಸಂದರ್ಭದಲ್ಲಿ ಕಂಪನಿಯ ಸಿಎಂಡಿ ಸುಭಾನ್ ಖಾನ್ ಕಂಪನಿ ಬಗ್ಗೆ ಮಾಹಿತಿ ನೀಡಿದರು. ಹೆಚ್ಚಿನ ಮಂದಿ ಸ್ಥಳೀಯರೇ ಉದ್ಯೋಗಿಗಳಾಗಿದ್ದಾರೆ. ಕಂಪನಿಯಿಂದ ಯಾವುದೇ ರೀತಿಯ ಮಾಲಿನ್ಯ ಆಗುತಿಲ್ಲ ಎಂದು ಸ್ಪಷ್ಟಪಡಿಸಿದರು.

ಆಗಸ್ಟ್ 15ರವರೆಗೆ ಕಾಲಾವಕಾಶ: ಜೈಹಿಂದ್ ಟ್ಯೂಬ್ಸ್ ಕಂಪನಿಯ ತಯಾರಿಕಾ ಘಟಕವನ್ನು ನಿಯೋಗ ವೀಕ್ಷಿಸಿತು. ಘಟಕದಿಂದ ತ್ಯಾಜ್ಯ ನೀರು ವಿಲೇವಾರಿ ಮತ್ತು ವಿಷಯುಕ್ತ ಗಾಳಿಯಿಂದ ಸ್ಥಳೀಯ ಜನರಲ್ಲಿ ಆರೋಗ್ಯ ಸಮಸ್ಯೆ, ಪರಿಸರ ಮಾಲಿನ್ಯ ಉಂಟಾಗುತ್ತಿದೆ. ಇಲ್ಲಿನ ಕಾರ್ಮಿಕರಿಗೆ ಭದ್ರತೆ ಇಲ್ಲ. 12 ಗಂಟೆಗಳ ಕಾಲ ಕೆಲಸ ಮಾಡಬೇಕಾದ ಪರಿಸ್ಥಿತಿ ಉಂಟಾಗುತ್ತಿದೆ ಎಂದು ಸ್ಥಳೀಯರು ದೂರಿದರು.

ಈ ವೇಳೆ ಕಂಪನಿ ಹೊಸದಾಗಿ ಆರಂಭಗೊಂಡಿರುವುದರಿಂದ ಕೆಲವೊಂದು ತಾಂತ್ರಿಕ ಸಮಸ್ಯೆಗಳು ಉಂಟಾಗಿದೆ. ಆಗಸ್ಟ್ 15ರ ಒಳಗಾಗಿ ಎಲ್ಲಾ ವ್ಯವಸ್ಥೆಯನ್ನು ಸರಿಪಡಿಸಲಾಗುವುದು ಎಂದು ಕಂಪನಿಯ ಅಧಿಕಾರಿಗಳು ಮಾಹಿತಿ ನೀಡಿದರು.

ಪಡುಬಿದ್ರಿ ಗ್ರಾಮ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿರುವ ಹೆಕ್ಸಾ ನ್ಯಾಚುರಲ್ ಪ್ರೊಟೀನ್ಸ್ ಘಟಕಕ್ಕೂ ನಿಯೋಗವು ಭೇಟಿ ನೀಡಿ ಸಮಾಲೋಚನೆ ನಡೆಸಿತು. ಘಟಕದ ವಿವರ ಹಾಗೂ ಮಾಹಿತಿ ಪಡೆದುಕೊಂಡು ಪರಿಸರ ಮಾಲಿನ್ಯವಾಗದಂತೆ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.

ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್‌ಚಂದ್ರ ಸುವರ್ಣ, ಮುಖಂಡರಾದ ಶಿವಾಜಿ ಸುವರ್ಣ, ನವೀನ್‌ಚಂದ್ರ ಜೆ.ಶೆಟ್ಟಿ, ಶೇಖರ್ ಹೆಜ್ಮಾಡಿ, ದಿನೇಶ್ ಕೋಟ್ಯಾನ್ ಪಲಿಮಾರು, ಯು.ಸಿ.ಶೇಖಬ್ಬ, ಗಣೇಶ್ ಕೋಟ್ಯಾನ್ ಪಡುಬಿದ್ರಿ, ರಮೀಝ್ ಹುಸೈನ್, ನವೀನ್ ಎನ್.ಶೆಟ್ಟಿ, ಅಬ್ದುಲ್ ಅಜೀಜ್ ಹೆಜಮಾಡಿ, ವೈಊ. ಸುಕುಮರ್ ಡೇವಿಡ್ ಡಿಸೋಜ, ಶಾಂತಲತಾ ಶೆಟ್ಟಿ, ವೈ.ಸುಕುಮಾರ್, ದೀಪಕ್ ಎರ್ಮಾಳ್, ಸುಧೀರ್ ಕರ್ಕೇರ, ಅಶೋಕ್ ಸಾಲ್ಯಾನ್, ಆಶಾ ಕಟಪಾಡಿ, ಅಶ್ವಿನಿ, ರಾಜೇಶ್ ರಾವ್, ಪಲಿಮಾರು ಮತ್ತು ಪಡುಬಿದ್ರಿ ಗ್ರಾಮ ಪಂಚಾಯಿತಿ ಸದಸ್ಯರು ಇದ್ದರು.

ಜೈಹಿಂದ್ ಟ್ಯೂಬ್ಸ್ ಪ್ರೆöÊ.ಲಿ. ಘಟಕ ಭೇಟಿ ನೀಡಿದ ಮಾಜಿ ಸಚಿವ ವಿನಯಕುಮಾರ್ ಸೊರಕೆ ನೇತೃತ್ವದ ನಿಯೋಗ  ಭೇಟಿ ನೀಡಿದರು.

ಜೈಹಿಂದ್ ಟ್ಯೂಬ್ಸ್ ಪ್ರೆöÊ.ಲಿ. ಘಟಕ ಭೇಟಿ ನೀಡಿದ ಮಾಜಿ ಸಚಿವ ವಿನಯಕುಮಾರ್ ಸೊರಕೆ ನೇತೃತ್ವದ ನಿಯೋಗ  ಭೇಟಿ ನೀಡಿದರು.

‘ಸಮಸ್ಯೆ ನಿವಾರಣೆ ಆಗಲಿ’

ಪಡುಬಿದ್ರಿ ಭಾಗದಲ್ಲಿರುವ ಎಸ್‌ಇಝೆಡ್ ಕೈಗಾರಿಕಾ ವಲಯದಲ್ಲಿ ಹಲವು ಕಂಪನಿಗಳಿವೆ. ಇಲ್ಲಿ ಸ್ಥಳೀಯರಿಗೆ ಉದ್ಯೋಗಕ್ಕೆ ಅವಕಾಶವಿಲ್ಲ. ಹಲವು ಸಮಸ್ಯೆ ಇರುವ ಬಗ್ಗೆ ಸ್ಥಳೀಯರ ಮನವಿ ಮೇರೆಗೆ ಭೇಟಿ ನೀಡಲಾಗಿದೆ. ಬೆಂಕಿ ಅವಘಡ ತ್ಯಾಜ್ಯ ವಿಲೇವಾರಿ ಸಹಿತ ಹಲವು ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಗಮನ ಸೆಳೆದಿದ್ದಾರೆ. ಈ ನಿಟ್ಟಿನಲ್ಲಿ ಈ ಭಾಗದ ಸ್ಥಳೀಯರಿಗೆ ಉದ್ಯೋಗಕ್ಕೆ ಅವಕಾಶ ಕಲ್ಪಿಸಬೇಕು. ಕೈಗಾರಿಕೆಗಳಿಂದ ಸ್ಥಳೀಯವಾಗಿ ಯಾವುದೇ ಸಮಸ್ಯೆಯುಂಟಾಗಬಾರದು. ಶೀಘ್ರ ಸಭೆ ಕರೆಯುವ ಭರವಸೆ ನೀಡಿದ್ದಾರೆ. ನಾವು ಯಾವುದೇ ಕೈಗಾರಿಕೆಗೆ ವಿರೋಧಿಸುವುದಿಲ್ಲ. ಘಟಕದಿಂದ ಸ್ಥಳೀಯರ ಸಮಸ್ಯೆ ನಿವಾರಣೆ ಆಗಬೇಕಾಗಿದೆ ಎಂದು ವಿನಯಕುಮಾರ್ ಸೊರಕೆ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT