ಭಾನುವಾರ, ಜನವರಿ 24, 2021
20 °C
2015ರಿಂದ ಒಂದೂ ಪ್ರಕರಣ ಪತ್ತೆ ಇಲ್ಲ: ಡಾ.ಚಿದಾನಂದ ಸಂಜು

‘ತಾಯಿಯಿಂದ ಮಗುವಿಗೆ ಎಚ್‌ಐವಿ ವರ್ಗಾವಣೆ ಶೂನ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: 2015ರಿಂದ ತಾಯಿಯಿಂದ ಮಗುವಿಗೆ ಎಚ್‌ಐವಿ ಸೋಂಕು ವರ್ಗಾವಣೆಯಾದ ಒಂದೂ ಪ್ರಕರಣ ಜಿಲ್ಲೆಯಲ್ಲಿ ಕಂಡುಬಂದಿಲ್ಲ. ನಿರಂತವಾಗಿ ಎಚ್‌ಐವಿ ಬಾಧಿತ ಪ್ರಕರಣಗಳ ಸಂಖ್ಯೆಯೂ ಕುಸಿಯುತ್ತಿದೆ ಎಂದು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಚಿದಾನಂದ ಸಂಜು ತಿಳಿಸಿದರು.

ಸೋಮವಾರ ಡಿಎಚ್‌ಒ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗರ್ಭಿಣಿಯರಿಗೆ ಎಚ್‌ಐವಿ ಪರೀಕ್ಷೆ ಕಡ್ಡಾಯಗೊಳಿಸಿದ ಬಳಿಕ ತಾಯಿಯಿಂದ ಮಗುವಿಗೆ ಸೋಂಕು ವರ್ಗಾವಣೆಯಾಗುವುದು ಸಂಪೂರ್ಣವಾಗಿ ನಿಂತುಹೋಗಿದೆ. ಗರ್ಭಿಣಿಯಲ್ಲಿ ಎಚ್ಐವಿ ಪತ್ತೆಯಾದರೆ ಮಗುವಿಗೆ ಸೋಂಕು ವರ್ಗಾವಣೆಯಾಗದಂತೆ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ 3763 ಎಚ್‌ಐವಿ ಬಾಧಿತರಿದ್ದು, ಉಡುಪಿಯ ಎಆರ್‌ಟಿ ಕೇಂದ್ರದಲ್ಲಿ 2,594, ಕುಂದಾಪುರದಲ್ಲಿ 1,169 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರಿನ ಎಚ್‌ಐವಿ ಬಾಧಿತರಿಗೆ ಉಡುಪಿಯಲ್ಲಿ ಸೆಕೆಂಡ್ ಲೈನ್ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯ ಎಆರ್‌ಟಿ ಕೇಂದ್ರದಲ್ಲಿ ನೋಂದಾಯಿತ 86 ಎಚ್ಐವಿ ಬಾಧಿತರು ಈ ವರ್ಷ (ಅಕ್ಟೋಬರ್ ಅಂತ್ಯದವರೆಗೆ) ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.

26 ಎಚ್ಐವಿ ಬಾಧಿತರಿಗೆ ಕೋವಿಡ್‌:

ಜಿಲ್ಲೆಯಲ್ಲಿ 26 ಎಚ್‌ಐವಿ ಬಾಧಿತರಿಗೆ ಕೋವಿಡ್‌ ತಗುಲಿದ್ದು, ಮೂವರು ಮೃತಪಟ್ಟಿದ್ದಾರೆ. ಮೃತರಲ್ಲಿ ಇಬ್ಬರು ಮುಂಬೈನವರಾಗಿದ್ದಾರೆ. ಲಾಕ್‌ಡೌನ್ ಅವಧಿಯಲ್ಲಿ ಬಾಧಿತರು ಚಿಕಿತ್ಸೆಯಿಂದ ವಂಚಿತರಾಗಬಾರದು ಎಂಬ ಕಾರಣಕ್ಕೆ ಮನೆಗೆ ಔಷಧಗಳನ್ನು ಮುಟ್ಟಿಸಲಾಗಿದೆ ಎಂದರು.

ಎಚ್‌ಐವಿ ಬಾಧಿತರ ಸಂಖ್ಯೆ ಕುಸಿತ:

2008–09ರಲ್ಲಿ ಎಚ್‌ಐವಿ ಬಾಧಿತರ ಪ್ರಮಾಣ ಶೇ 7.9ರಷ್ಟಿತ್ತು. ನಂತರ ಗಣನೀಯವಾಗಿ ಕುಸಿಯುತ್ತಾ ಸಾಗಿದ್ದು, ಪ್ರಸಕ್ತ ಸಾಲಿನಲ್ಲಿ ಶೇ 0.43ಕ್ಕೆ ಇಳಿದಿದೆ. ಗರ್ಭಿಣಿಯರಲ್ಲಿ ಸೋಂಕು ಪ್ರಮಾಣ ಶೇ 0.54ರಿಂದ 0.05ಕ್ಕೆ ಇಳಿದಿದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಡಿಎಚ್‌ಒ ಸುಧೀರ್ ಚಂದ್ರ ಸೂಡಾ, ವಿಶೇಷ ಕೋವಿಡ್‌ ಅಧಿಕಾರಿ ಡಾ.ಪ್ರೇಮಾನಂದ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.