ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ಅಜೇಂದ್ರ ಶೆಟ್ಟಿ ಕೊಲೆ ಪ್ರಕರಣ; 24 ತಾಸಿನಲ್ಲಿ ಆರೋಪಿ ಬಂಧನ

ಗೋವಾದ ರೆಸಾರ್ಟ್‌ನಲ್ಲಿ ಸಿಕ್ಕಿಬಿದ್ದ ಅನೂಪ್‌ ಶೆಟ್ಟಿ, ಆ.9ರವರೆಗೆ ನ್ಯಾಯಾಂಗ ಬಂಧನ
Last Updated 2 ಆಗಸ್ಟ್ 2021, 15:49 IST
ಅಕ್ಷರ ಗಾತ್ರ

ಉಡುಪಿ: ಕುಂದಾಪುರ ತಾಲ್ಲೂಕು ಕೋಟೇಶ್ವರದ ಕಾಳಾವರ-ಅಸೋಡು ಬಳಿ ಜುಲೈ 30ರಂದು ನಡೆದಿದ್ದ ಫೈನಾನ್ಸ್ ಮಾಲೀಕ ಅಜೇಂದ್ರ ಶೆಟ್ಟಿ ಕೊಲೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದು, ಅನೂಪ್ ಎಂಬಾತತನ್ನು ಬಂಧಿಸಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ತಿಳಿಸಿದ ಎಸ್‌ಪಿ ವಿಷ್ಣುವರ್ಧನ್‌, ‘ಕೊಲೆ ಮಾಡಿದ ಬಳಿಕ ಆರೋಪಿ ಕಾರಿನಲ್ಲಿ ಗೋವಾ ರಾಜ್ಯಕ್ಕೆ ಪರಾರಿಯಾಗಿದ್ದ. ಸಿಸಿಟಿವಿ ಕ್ಯಾಮೆರಾಗಳಲ್ಲಿ ಸಿಕ್ಕ ಸುಳಿವು ಆಧರಿಸಿ ಗೋವಾಗೆ ತೆರಳಿದ ಪೊಲೀಸರು ಅಲ್ಲಿನ ಕೊಲ್ವಾ ಬೀಚ್‌ ಬಳಿಯ ರೆಸಾರ್ಟ್‌ನಲ್ಲಿ ತಂಗಿದ್ದ ಅನೂಪ್‌ನನ್ನು ಬಂಧಿಸಿ ಉಡುಪಿಗೆ ಕರೆತಂದಿದೆ ಎಂದು ತಿಳಿಸಿದರು.

ಕೊಲೆಯಾದ ಅಜೇಂದ್ರ ಹಾಗೂ ಮೊಳಹಳ್ಳಿಯ ಅನೂಪ್ ಶೆಟ್ಟಿ ಪಾಲುದಾರಿಕೆಯಲ್ಲಿ ಡ್ರೀಮ್ ಫೈನಾನ್ಸ್ ನಡೆಸುತ್ತಿದ್ದರು. ಅಜೇಂದ್ರ ಶೆಟ್ಟಿ ಕೊಲೆಗೆ ಹಣಕಾಸು ವೈಷಮ್ಯ ಕಾರಣವಾಗಿದೆ. ತನಿಖೆಯ ಬಳಿಕ ಸಂಪೂರ್ಣ ಸತ್ಯ ಹೊರಬೀಳಲಿದೆ ಎಂದು ಮಾಹಿತಿ ನೀಡಿದರು.

ಆರೋಪಿ ಸಿಕ್ಕಿಬಿದ್ದಿದ್ದು ಹೇಗೆ?
ಪ್ರಕರಣದ ತನಿಖೆಗೆ ಕುಂದಾಪುರ ಇನ್‌ಸ್ಪೆಕ್ಟರ್ ಗೋಪಿಕೃಷ್ಣ, ಬೈಂದೂರು ಇನ್‌ಸ್ಪೆಕ್ಟರ್ ಸಂತೋಷ್ ಕಾಯ್ಕಿಣಿ ನೇತೃತ್ವದಲ್ಲಿ ಕುಂದಾಪುರ ಉಪ ವಿಭಾಗದ ಅಪರಾಧ ಪತ್ತೆದಳ ಸಿಬ್ಬಂದಿಯನ್ನೊಳಗೊಂಡ ವಿಶೇಷ ತಂಡ ರಚಿಸಲಾಯಿತು. ಬಳಿಕ ತನಿಖೆ ವೇಳೆ ನಂಬರ್ ಪ್ಲೇಟ್ ಇಲ್ಲದ ಕಾರು ಶಿರೂರು ಟೋಲ್ ಗೇಟ್ ಹಾಯ್ದುಹೋದ ಮಾಹಿತಿ ಸಿಸಿಟಿವಿ ಕ್ಯಾಮೆರಾದಲ್ಲಿ ಪತ್ತೆಯಾಯಿತು. ಕೂಡಲೇ ಶಿರಸಿ ಹಾಗೂ ಹುಬ್ಬಳ್ಳಿಯಲ್ಲಿ ಆರೋಪಿಯ ಹುಡುಕಾಟ ನಡೆಸಿ ಬಳಿಕ ಖಚಿತ ಮಾಹಿತಿ ಮೇರೆಗೆ ಗೋವಾದಲ್ಲಿ ಬಂಧಿಸಲಾಯಿತು ಎಂದು ಎಸ್‌ಪಿ ತಿಳಿಸಿದರು.

ಆರೋಪಿಯ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಆತನ ಅಪರಾಧ ಹಿನ್ನೆಲೆಯ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಹಿಂದೆ, ದುಬೈ ಮತ್ತು ಸಿಂಗಪುರದಲ್ಲಿ ಕೆಲಸ ಮಾಡಿರುವ ವಿಚಾರ ತಿಳಿದು ಬಂದಿದೆ. ಮೊಬೈಲ್, ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಕಳವು ಮಾಡಿದ ಚಿನ್ನದ ಸರವನ್ನು ಸ್ವಾಧೀನ ಪಡಿಸಿಕೊಳ್ಳಬೇಕಾಗಿದೆ ಎಂದು ವಿವರಿಸಿದರು.

ತನಿಖಾ ವಿಶೇಷ ತಂಡದಲ್ಲಿ ಪಿಎಸ್‌ಐಗಳಾದ ಶ್ರೀಧರ ನಾಯ್ಕ, ನಂಜಾನಾಯ್ಕ, ನಿರಂಜನ ಗೌಡ, ಉಪ ವಿಭಾಗದ ಸಿಬ್ಬಂದಿ ಮೋಹನ, ಚಂದ್ರಶೇಖರ, ನಾಗೇಂದ್ರ, ಶ್ರೀನಿವಾಸ್, ಸಂತೋಷ್ ಕುಮಾರ್, ಸಂತೋಷ್, ರಾಘವೇಂದ್ರ, ರಾಮು, ಸೀತರಾಮ, ಸತೀಶ್ ಚಿದಾನಂದ್, ಮಧುಸೂದನ್, ದಿನೇಶ್ ಇದ್ದರು.

ಸುದ್ದಿಗೋಷ್ಠಿಯಲ್ಲಿ ಎಎಸ್‌ಪಿ ಕುಮಾರಚಂದ್ರ, ಕುಂದಾಪುರ ಡಿವೈಎಸ್ಪಿ ಕೆ. ಶ್ರೀಕಾಂತ್ ಇದ್ದರು.

ಏಳು ದಿನ ಆರೋಪಿ ಪೊಲೀಸ್ ವಶಕ್ಕೆ
ಆರೋಪಿ ಅನೂಪ್ ಶೆಟ್ಟಿಯನ್ನು ಪೊಲೀಸರು ಸೋಮವಾರ ಕುಂದಾಪುರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಹೆಚ್ಚಿನ ವಿಚಾರಣೆಗೆ ಆ.9ರವರೆಗೆ ಆರೋಪಿಯನ್ನು ಪೊಲೀಸರ ವಶಕ್ಕೆ ನೀಡಿ 1ನೇ ಜೆಎಂಎಫ್‍ಸಿ ನ್ಯಾಯಾಲಯದ ನ್ಯಾಯಧೀಶರಾದ ನಾಗರತ್ನಮ್ಮ ಆದೇಶಿದರು. ಸೋಮವಾರ ಉಡುಪಿಯಿಂದ ಕುಂದಾಪುರಕ್ಕೆ ಆರೋಪಿಯನ್ನು ಕರೆತಂದು ವೈದ್ಯಕೀಯ ತಪಾಸಣೆಗೊಳಪಡಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಪೊಲೀಸರು ಹೆಚ್ಚಿನ ತನಿಖೆಗೆ ಆರೋಪಿಯೊಂದಿಗೆ ಗೋವಾಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT